ವಿಶೇಷ ಆರ್ಥಿಕ ವಲಯ ಘಟಕದಲ್ಲಿ ಗರಿಷ್ಠ ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು (Work from home) ಅನುಮತಿಸಲಾಗುತ್ತದೆ ಮತ್ತು ಒಟ್ಟು ಉದ್ಯೋಗಿಗಳ ಶೇಕಡಾ 50ರಷ್ಟ ಮಂದಿ ಮನೆಯಿಂದ ಕೆಲಸ ಮಾಡಬಹುದು ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ವಿಶೇಷ ಆರ್ಥಿಕ ವಲಯಗಳ ನಿಯಮಗಳು, 2006 ರಲ್ಲಿ ವಾಣಿಜ್ಯ ಇಲಾಖೆಯು ವರ್ಕ್ ಫ್ರಮ್ ಹೋಮ್ ಸಂಬಂಧಿಸಿ ಹೊಸ ನಿಯಮ 43A ಅನ್ನು ಸೂಚಿಸಿದೆ. ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZs) ದೇಶಾದ್ಯಂತ ಏಕರೂಪದ ವರ್ಕ್ ಫ್ರಮ್ ಹೋಮ್ ನೀತಿಗೆ ನಿಬಂಧನೆಯನ್ನು ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಹೊಸ ನಿಯಮವು SEZ ನಲ್ಲಿನ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನೀಡುತ್ತದೆ. ಇವರಲ್ಲಿ IT/ITeS SEZ ಘಟಕಗಳ ಉದ್ಯೋಗಿಗಳು ಸೇರಿದ್ದಾರೆ. ಪ್ರಮುಖವಾಗಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನಿವಾರ್ಯವಾಗಿ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲಾಗಿತ್ತು.

ಯಾರಿಗೆಲ್ಲ ವರ್ಕ್ ಫ್ರಮ್ ಹೋಮ್ ಆಯ್ಕೆ ಇದೆ?
ತಾತ್ಕಾಲಿಕವಾಗಿ ಕಚೇರಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದ ನೌಕರರು, ಪ್ರಯಾಣದಲ್ಲಿರುವ ಮತ್ತು ಬೇರೆ ಪ್ರದೇಶದಲ್ಲಿರುವ ನೌಕರರು ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಘಟಕದ ಗುತ್ತಿಗೆ ನೌಕರರು ಸೇರಿದಂತೆ ಒಟ್ಟು ಉದ್ಯೋಗಿಗಳಲ್ಲಿ ಗರಿಷ್ಠ ಶೇಕಡಾ 50 ರಷ್ಟು ಮಂದಿಗೆ Work from home ನೀಡಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.
"ಪ್ರಸ್ತುತ ಒಂದು ವರ್ಷಗಳ ಕಾಲ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಡಿಸಿ ಒಂದು ಬಾರಿಗೆ ಒಂದು ವರ್ಷಕ್ಕೆ ಇದನ್ನು ವಿಸ್ತರಿಸಬಹುದು," ಎಂದು ಸಚಿವಾಲಯ ಹೇಳಿದೆ.
ಉದ್ಯೋಗಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡುತ್ತಿರುವ SEZ ಘಟಕಗಳಿಗೆ ಸಂಬಂಧಿಸಿದಂತೆ, ಅಧಿಸೂಚನೆಯು ಅನುಮೋದನೆ ಪಡೆಯಲು 90 ದಿನಗಳ ಅವಧಿಯನ್ನು ನೀಡಲಾಗಿದೆ. "SEZ ಘಟಕಗಳು ಘಟಕಗಳ ಅಧಿಕೃತ ಕಾರ್ಯಾಚರಣೆಗಳನ್ನು ನಿರ್ವಹಿಸಲು WFH ಗೆ ಬೇಕಾದ ಸುರಕ್ಷಿತ ಸಂಪರ್ಕ ವ್ಯವಸ್ಥೆ, ಇತರೆ ವ್ಯವಸ್ಥೆಯನ್ನು ಒದಗಿಸುತ್ತವೆ," ಎಂದು ಸಚಿವಾಲಯ ಹೇಳಿದೆ.


Click it and Unblock the Notifications