ಅಕ್ಟೋಬರ್‌ನಿಂದ ಡಿಸೆಂಬರ್ 2023 ರ ನಡುವಿನ ಮೂರು ತಿಂಗಳ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರವು ಘೋಷಿಸಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆಗಳಂತಹ ಯೋಜನೆಗಳಲ್ಲಿ ಬಡ್ಡಿದರಗಳನ್ನು ಸ್ಥಿರವಾಗಿರಿಸಿಕೊಳ್ಳಲಾಗಿದೆ. ಕೇಂದ್ರವು ಕೇವಲ ಒಂದು ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು 20 ಬಿಪಿಎಸ್ ಹೆಚ್ಚಿಸಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಖಾತೆ ಮತ್ತು 1-5 ವರ್ಷಗಳ ಅವಧಿಯ ಡೆಪಾಸಿಟ್‌ಗಳು ಸಣ್ಣ ಉಳಿತಾಯ ಖಾತೆ ಯೋಜನೆಗಳಾಗಿದೆ. ಹೊಸ ಬಡ್ಡಿದರಗಳು ಅಕ್ಟೋಬರ್ 1, 2023 ರಿಂದ ಜಾರಿಗೆ ಬರುತ್ತವೆ. ಇಲ್ಲಿದೆ ನೂತನ ಬಡ್ಡಿದರ ಪರಿಶೀಲಿಸಿ...

1. ಐದು ವರ್ಷದ ರೆಕ್ಯೂರಿಂಗ್ ಡೆಪಾಸಿಟ್
ಸರ್ಕಾರವು 5 ವರ್ಷದ ರೆಕ್ಯೂರಿಂಗ್ ಡೆಪಾಸಿಟ್‌ಗಳ ಯೋಜನೆಯ ಬಡ್ಡಿದರವನ್ನು 20 ಬಿಪಿಎಸ್ ಹೆಚ್ಚಿಸಿದೆ. ಇದರಿಂದಾಗಿ ಬಡ್ಡಿದರವು ಶೇಕಡ 6.5 ರಿಂದ ಶೇಕಡ 6.7 ಕ್ಕೆ ಏರಿಕೆಯಾಗುತ್ತದೆ. ಹೆಸರೇ ಹೇಳುವಂತೆ ಈ ಅಂಚೆ ಕಚೇರಿ ಯೋಜನೆಯು 5 ವರ್ಷಗಳ ಅವಧಿಯನ್ನು ಹೊಂದಿದೆ. ಖಾತೆಯನ್ನು ತೆರೆಯಲ್ಲಿ ಡೆಪಾಸಿಟ್‌ದಾರರು ತಿಂಗಳಿಗೆ ಕನಿಷ್ಠ 100 ರೂಪಾಯಿ ಹೂಡಿಕೆ ಮಾಡಬೇಕು. ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಬಡ್ಡಿದರ ವಾರ್ಷಿಕವಾಗಿ ಜಮೆಯಾಗುತ್ತದೆ.
2. ಪಬ್ಲಿಕ್ ಪ್ರಾವಿಡೆಂಡ್ ಫಂಡ್ (ಪಿಪಿಎಫ್)
ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಬಡ್ಡಿದರವನ್ನು ಸ್ಥಿರವಾಗಿರಿಸಲಾಗಿದ್ದು, ಬಡ್ಡಿದರ ಶೇಕಡ 7.4 ರಷ್ಟಿದೆ. ಪಿಪಿಎಫ್ ಭಾರತದಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ತೆರಿಗೆ ಪ್ರಯೋಜನಗಳನ್ನು ನೀಡುವ ಉಳಿತಾಯ ಯೋಜನೆಗಳಲ್ಲಿ ಇದು ಒಂದಾಗಿದೆ. ಇದರಲ್ಲಿ ಕನಿಷ್ಠ ಹೂಡಿಕೆ ಮಿತಿ 500 ರೂಪಾಯಿ ಗರಿಷ್ಠ ಹೂಡಿಕೆ ಮಿತಿ 1.5 ಲಕ್ಷ ರೂಪಾಯಿ ಆಗಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ಡೆಪಾಸಿಟ್ ಮೇಲೆ 1.5 ಲಕ್ಷ ರೂಪಾಯಿವರೆಗೆ ತೆರಿಗೆ ಕಡಿತ ಲಭ್ಯವಾಗುತ್ತದೆ. ಖಾತೆಯಡಿ ಸಾಲ ಪಡೆಯುವ ಸೌಲಭ್ಯ ಕೂಡಾ ಇದೆ. ಬಡ್ಡಿದರಗಳನ್ನು ವಾರ್ಷಿಕವಾಗಿ ಜಮೆ ಮಾಡಲಾಗುತ್ತದೆ. ಈ ಖಾತೆಯ ಅವಧಿ 15 ವರ್ಷಗಳಾಗಿದೆ. ಖಾತೆ ತೆರೆದ ವರ್ಷಗಳ ನಂತರ ಹಣವನ್ನು ಒಂದು ಬಾರಿ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶವಿದೆ, ಹಾಗೆಯೇ ಖಾತೆ ಮುಚ್ಚಲು ಅವಕಾಶವಿದೆ.
3. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್)
ಹಿರಿಯ ನಾಗರಿಕರು ತಮ್ಮ ಎಸ್‌ಸಿಎಸ್‌ಎಸ್ ಖಾತೆಯಿಂದ ವರ್ಷಕ್ಕೆ ಸುಮಾರು ಶೇಕಡ 8.2 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಡೆಪಾಸಿಟ್ ಮಾಡಿದ ದಿನಾಂಕದಿಂದ 31ನೇ ಮಾರ್ಚ್/ 30ನೇ ಸೆಪ್ಟೆಂಬರ್/ 31ನೇ ಡಿಸೆಂಬರ್‌ನಲ್ಲಿ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಅದರ ನಂತರ, ಬಡ್ಡಿಯನ್ನು 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್ ಮತ್ತು 1ನೇ ಜನವರಿಯಲ್ಲಿ ಪಾವತಿಸಲಾಗುತ್ತದೆ.
ಈ ಖಾತೆಯನ್ನು ಕನಿಷ್ಠ 1000 ರೂಪಾಯಿಯಿಂದ ಗರಿಷ್ಠ 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಿ ತೆರೆಯಬಹುದು. ಈ ಯೋಜನೆಯು ವಿಶೇಷವಾಗಿ 60 ವರ್ಷದವರಿಗೆ ಆಗಿದೆ. ಒಂದು ಹಣಕಾಸು ವರ್ಷದಲ್ಲಿ ಎಲ್ಲಾ ಎಸ್‌ಸಿಎಸ್‌ಎಸ್ ಖಾತೆಗಳಲ್ಲಿನ ಒಟ್ಟು ಬಡ್ಡಿಯು 50 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಡಿಡಿಎಸ್ ಅನ್ನು ಬಡ್ಡಿಯಿಂದ ಕಡಿತಗೊಳಿಸಲಾಗುತ್ತದೆ. ಫಾರ್ಮ್ 15 G/15H ಅನ್ನು ಸಲ್ಲಿಸಿದರೆ ಮತ್ತು ಬಡ್ಡಿ ನಿಗದಿತ ಮಿತಿಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟಿಡಿಎಸ್ ಕಡಿತವಾಗುವುದಿಲ್ಲ.
4. ಸುಕನ್ಯಾ ಸಮೃದ್ಧಿ ಖಾತೆ (ಎಸ್‌ಎಸ್‌ಎ)
ಹೆಣ್ಣು ಮಕ್ಕಳಿಗಾಗಿ ಈ ಸಣ್ಣ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಖಾತೆ ಆಗಿದೆ. ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ಬಡ್ಡಿದರವು ಶೇಕಡ 8 ಆಗಿದೆ. ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ತೆರೆಯಬಹುದು. ಅವಳಿ/ತ್ರಿವಳಿ ಹೆಣ್ಣುಮಕ್ಕಳು ಜನಿಸಿದರೆ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು. ಪಾಲಕರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿಗೆ ಖಾತೆಯನ್ನು ತೆರೆಯಬಹುದು.
ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಈ ಖಾತೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಪ್ರಾರಂಭದ ದಿನಾಂಕದಿಂದ 15 ವರ್ಷಗಳು ಪೂರ್ಣಗೊಳ್ಳುವವರೆಗೆ ಡೆಪಾಸಿಟ್ ಮಾಡಬಹುದು. ಈ ಖಾತೆಯಲ್ಲಿ, ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ತೆರಿಗೆ ಪ್ರಯೋಜನವಿದೆ. ಮೊದಲನೆಯದಾಗಿ, ಇದು ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ನೀಡುತ್ತದೆ. ಈ ಯೋಜನೆಯಲ್ಲಿ ಗಳಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ಮುಕ್ತವಾಗಿದೆ.
5. ಕಿಸಾನ್ ವಿಕಾಸ್ ಪತ್ರ (ಕೆವಿಪಿ)
ಕಿಸಾನ್ ವಿಕಾಸ್ ಪತ್ರವು ಸಣ್ಣ ಉಳಿತಾಯ ಸಾಧನವಾಗಿದ್ದು, ದೀರ್ಘಾವಧಿಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಅನುಕೂಲವಾಗುತ್ತದೆ. ಇದು ಕಡಿಮೆ-ಅಪಾಯ ಮತ್ತು ಖಚಿತವಾದ ಆದಾಯವನ್ನು ನೀಡುವ ಜನಪ್ರಿಯ ಹೂಡಿಕೆ ಸಾಧನವಾಗಿದೆ. ಈ ಯೋಜನೆಯು ಅಕ್ಟೋಬರ್‌ನಿಂದ ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಶೇಕಡ 7.5 ಬಡ್ಡಿದರವನ್ನು ನೀಡುತ್ತದೆ.
ಈ ಯೋಜನೆಯಲ್ಲಿ ಬಡ್ಡಿದರವನ್ನು ವಾರ್ಷಿಕವಾಗಿ ಜಮೆ ಮಾಡಲಾಗುತ್ತದೆ. ಇಂಡಿಯಾ ಪೋಸ್ಟ್ ಪ್ರಕಾರ, ಕೆವಿಪಿಯಲ್ಲಿ ಹೂಡಿಕೆ ಮಾಡಿದ ಮೊತ್ತವು 115 ತಿಂಗಳುಗಳಲ್ಲಿ (9 ವರ್ಷಗಳು ಮತ್ತು 7 ತಿಂಗಳುಗಳು) ದ್ವಿಗುಣಗೊಳ್ಳುತ್ತದೆ. ಖಾತೆಯನ್ನು ಕನಿಷ್ಠ 1,000 ರೂಪಾಯಿ ಹೂಡಿಕೆಯೊಂದಿಗೆ ತೆರೆಯಬಹುದು. ಹೂಡಿಕೆಗೆ ಗರಿಷ್ಠ ಮಿತಿಯಿಲ್ಲ.
ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ
ಅಕ್ಟೋಬರ್ 1, 2023 ರಿಂದ ಡಿಸೆಂಬರ್ 31, 2023 ರವರೆಗೆ, ಉಳಿತಾಯ ಡೆಪಾಸಿಟ್ ಯೋಜನೆಯು ಶೇಕಡ 4 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಆದರೆ ಮಾಸಿಕ ಆದಾಯ ಖಾತೆ ಯೋಜನೆಯು ಶೇಕಡ 7.4 ಬಡ್ಡಿದರವನ್ನು ನೀಡುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಶೇಕಡ 7.7 ಬಡ್ಡಿದರ ನೀಡುತ್ತದೆ.
ಅಕ್ಟೋಬರ್ 1, 2023 ರಿಂದ ಡಿಸೆಂಬರ್ 31, 2023 ರವರೆಗೆ, ಉಳಿತಾಯ ಡೆಪಾಸಿಟ್ ಯೋಜನೆಯು ಶೇಕಡ 4ರಷ್ಟು ಬಡ್ಡಿದರವನ್ನು ನೀಡುತ್ತದೆ. ಮಾಸಿಕ ಆದಾಯ ಖಾತೆ ಯೋಜನೆಯು ಶೇಕಡ 7.4 ಬಡ್ಡಿದರ ನೀಡುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಶೇಕಡ 7.7 ಬಡ್ಡಿದರ ನೀಡುತ್ತದೆ.


Click it and Unblock the Notifications