For Quick Alerts
ALLOW NOTIFICATIONS  
For Daily Alerts

ಕೊರೊನಾ ಜತೆಗಿನ ಆರ್ಥಿಕ ಸಂಕಷ್ಟದ ದಿನಗಳಲ್ಲಿ ನಾವೆಲ್ಲ ಕಲಿತಿದ್ದೇನು?

By ಅನಿಲ್ ಆಚಾರ್
|

ಕಷ್ಟದ ಸಮಯದಲ್ಲಿ ಕಲಿಯುವಷ್ಟು ಪಾಠವನ್ನು ಸುಖ- ಸಂತೋಷ ಇರುವಾಗ ಕಲಿಯುವುದಿಲ್ಲ ಎಂಬ ಮಾತನ್ನು ಸುಮ್ಮನೆ ಡೈಲಾಗ್ ಅನ್ನೋ ಕಾರಣಕ್ಕೆ ಹೇಳಿರಲಿಕ್ಕೆ ಇಲ್ಲ ಬಿಡಿ. ಏಕೆಂದರೆ, ಕೊರೊನಾ ವೈರಸ್ ಭೀತಿಗೆ ಮನೆಯಲ್ಲೇ ದಿನ ಕಳೆಯುವಂತಾಗಿರುವಾಗ ಒಂದೊಂದಾಗಿ ಸಂಗತಿಗಳು ಅರಿವಿಗೆ ಬರುತ್ತಿವೆ.

ಇದನ್ನು ಒಬ್ಬ ವ್ಯಕ್ತಿಯ ಅನುಭವ ಅಂದುಕೊಳ್ಳಬಹುದು ಅಥವಾ ಕಾಲದಿಂದ ಕಲಿಯಲು ಸಿಕ್ಕ ಅಮೂಲ್ಯವಾದ ಪಾಠ ಅಂತಲೂ ಭಾವಿಸಬಹುದು. ಈಗ ಹೇಳಲು ಹೊರಟಿರುವುದು ಸಾಂದರ್ಭಿಕವಾಗಿ ಮುನ್ನೆಲೆಗೆ ಬಂದ ಸಂಗತಿ ಅಂತ ಅಂದುಕೊಂಡರೂ ಪರವಾಗಿಲ್ಲ. ಈ ಲೇಖನವನ್ನು ಒಮ್ಮೆ ಓದಿಕೊಂಡು, ನಿಮಗೆ ಏನನ್ನಿಸುತ್ತದೆ ಎಂಬುದನ್ನು ತಿಳಿಸಿ.

ಕಷ್ಟ ಕಾಲದಲ್ಲಿ ಕ್ಯಾಶ್ ವೊಂದೇ ಕಾಪಾಡುವುದು

ಕಷ್ಟ ಕಾಲದಲ್ಲಿ ಕ್ಯಾಶ್ ವೊಂದೇ ಕಾಪಾಡುವುದು

ಬಹಳ ಸಲ ಇದು ವೈರಾಗ್ಯದ ಮಾತಿನಂತೆ ಅನಿಸಬಹುದು. ಆದರೆ ಇದರ ಬಗ್ಗೆ ಖಚಿತತೆ ಇದ್ದಲ್ಲಿ ದೊಡ್ಡ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಸಾಲ ತಂದಾದರೂ ಷೇರುಪೇಟೆ ಮೇಲೆ ಹಣ ಹೂಡುವುದು, ಚಿನ್ನ ಇನ್ನೂ ಏರಿಕೆ ಕಾಣುತ್ತದೆ ಎಂಬ ಲೆಕ್ಕಾಚಾರದಲ್ಲಿ ಬ್ಯಾಂಕ್ ಖಾತೆಯಲ್ಲಿ ಒಂದು ರುಪಾಯಿ ಕೂಡ ಇಟ್ಟುಕೊಳ್ಳದೆ ಅದರ ಮೇಲೆ ಹೂಡಿಕೆ ಮಾಡುವುದು, ಭೂಮಿಗೆ ಯಾವತ್ತಿದ್ದರೂ ಚಿನ್ನದ ಬೆಲೆಯೇ ಎಂಬ ನಂಬಿಕೆಯಲ್ಲಿ ಅಳತೆಗೆ ಮೀರಿ ಹಣ ಸಾಲಕ್ಕೆ ತಂದು, ಹೂಡಿಕೆ ಮಾಡುವುದು ಇವೆಲ್ಲ ಎಷ್ಟು ರಿಸ್ಕ್ ತಂದೊಡ್ಡುತ್ತದೆ ಎಂಬುದು ಈಗ ಗೊತ್ತಾಗುತ್ತಿದೆ. ಯಾರಿಗಾದರೂ ಗೊತ್ತಿತ್ತಾ, ನೋಡನೋಡುತ್ತಾ ಸಾವಿರಾರು ಪಾಯಿಂಟ್ ಷೇರು ಮಾರುಕಟ್ಟೆಯಲ್ಲಿ ನೆಲ ಕಚ್ಚುತ್ತದೆ ಎಂಬ ಸಂಗತಿ. ಚಿನ್ನದ ಮೇಲೆ ಹೂಡಿಕೆ ಮಾಡಿದರೂ ಸೇಫ್ ಅಂದುಕೊಂಡರೆ ಅದೂ ಇಲ್ಲ. ಇನ್ನು ರಿಯಲ್ ಎಸ್ಟೇಟ್ ಆ ದೇವರಿಗೇ ಪ್ರೀತಿ. ಕಷ್ಟ ಕಾಲದಲ್ಲಿ ಕ್ಯಾಶ್ ವೊಂದೇ ಕಾಪಾಡುವುದು (ಯೆಸ್ ಬ್ಯಾಂಕ್ ಕಥೆ ನೋಡಿದ ಮೇಲೆ ಬ್ಯಾಂಕ್ ನಲ್ಲಿ ಹಣ ಇದ್ದರೂ ನಮ್ಮದಲ್ಲವೇನೋ ಅನಿಸಲು ಆರಂಭಿಸಿದೆ.) ಎಂಬುದು ಈಗ ಬಹಳ ಸಲ ಅನಿಸಲು ಆರಂಭಿಸಿದೆ.

ಇಡೀ ಜಗತ್ತೇ ಆರೋಗ್ಯವಾಗಿರಬೇಕು

ಇಡೀ ಜಗತ್ತೇ ಆರೋಗ್ಯವಾಗಿರಬೇಕು

ಅದೆಂಥ ಕೇಡು ಬಂದರೂ ಅಂತೂ ನನಗೆ ಬಂದಿಲ್ಲ, ನಮ್ಮ ಮನೆಗೆ ಬಂದಿಲ್ಲ, ನಮ್ಮ ರಾಜ್ಯ ಅಥವಾ ದೇಶಕ್ಕೆ ಬಂದಿಲ್ಲ ಎಂಬ ಮನೋಭಾವ ಈಗ ಕಡಿಮೆ ಆಗಿದೆ. ಒಂದು ಕಾಯಿಲೆ ಸಾವಿರಾರು ಕಿಲೋಮೀಟರ್ ದೂರದ ಒಂದು ದೇಶದಲ್ಲಿ ಹುಟ್ಟಿದರೂ ನಮ್ಮ ಮನೆಯಲ್ಲಿ ಆಗಬೇಕಾದ ಶುಭ ಕಾರ್ಯವನ್ನು ತಡೆಯಬಲ್ಲದು, ನಾವು ಮನೆ ಬಿಟ್ಟು ಕದಲಲಾರದಂಥ ಸ್ಥಿತಿ ತರಬಲ್ಲದು ಎಂಬುದು ಹೆಚ್ಚಿನ ಜನಕ್ಕೆ ಅನುಭವಕ್ಕೆ ಬಂದಿರಲಿಲ್ಲ. ಕೊರೊನಾ ಹಬ್ಬುತ್ತಿರುವ ವೇಗ, ಪಡೆದುಕೊಳ್ಳುತ್ತಿರುವ ಬಲಿಯನ್ನು ನೋಡಿದ ಮೇಲೆ ಇಡೀ ಜಗತ್ತು ಏಕೆ ಆರೋಗ್ಯಪೂರ್ಣವಾಗಿ, ನೆಮ್ಮದಿಯಾಗಿ, ಸುಖವಾಗಿ ಇರಬೇಕು ಎಂಬುದರ ಅರಿವು ಆಗತೊಡಗಿದೆ. ನಾಲ್ಕು ತಿಂಗಳ ಒಳಗಾಗಿ ಇಡೀ ಜಗತ್ತಿನ ಆರ್ಥಿಕ ಲೆಕ್ಕಾಚಾರವನ್ನು ಬದಲಿಸಿ, ಕೆಲವು ನಗರಗಳಿಗೇ ಬೀಗ ಜಡಿಯುವಂತೆ ಮಾಡಬಲ್ಲಂಥ ತಾಕತ್ತು ಒಂದು ಕಾಯಿಲೆಗೆ ಇದೆ ಎಂದು ತೀವ್ರವಾಗಿ ಅನಿಸುತ್ತಿದೆ.

ಮನೆಯಲ್ಲಿನ ಅಗತ್ಯಗಳೇನು ಎಂಬುದು ಗೊತ್ತಾಗುತ್ತಿದೆ

ಮನೆಯಲ್ಲಿನ ಅಗತ್ಯಗಳೇನು ಎಂಬುದು ಗೊತ್ತಾಗುತ್ತಿದೆ

ಮನೆಗಳಲ್ಲಿ ಯುಪಿಎಸ್, ಇಂಟರ್ ನೆಟ್ ಕನೆಕ್ಷನ್ ಮತ್ತು ನೆಮ್ಮದಿಯಾದ ವಾತಾವರಣ ಏಕಿರಬೇಕು ಎಂಬುದು ವರ್ಕ್ ಫ್ರಂ ಹೋಮ್ ಮಾಡುವಾಗ ಬಹಳ ಸಲ ಅನಿಸುತ್ತದೆ. ಪ್ರಯಾರಿಟಿ ಅಂತ ಯೋಚಿಸದೆ ಬಟ್ಟೆ, ಗ್ಯಾಜೆಟ್, ಕಾರು- ಬೈಕ್ ಮತ್ತೊಂದು ಎಂದು ಆಲೋಚನೆ ಮಾಡಿ, ಯಾವುದು ಮೂಲಭೂತ ಅಗತ್ಯ ಆಗಬಹುದು ಎಂಬುದನ್ನೇ ಮರೆತಿದ್ದೇವೆ. ತೀರಾ ನಾವಾಗಿಯೇ ಮನೆಯಲ್ಲಿ ಕೆಲಸ ಮಾಡಿದರೆ ಉಂಟು ವಿನಾ ಉಳಿದಂತೆ ಆಫೀಸಿನಲ್ಲೇ ಎಲ್ಲಾ ಇದೆಯಲ್ಲಾ? ಬಹುತೇಕ ಸಮಯ ಕಳೆಯುವುದು ಅಲ್ಲೇ. ಆದ್ದರಿಂದ ಅವುಗಳ ಅಗತ್ಯದ ಬಗ್ಗೆ ಚಿಂತೆಯೇ ಮಾಡಿರಲಿಲ್ಲ. ಈಗ ಹಾಟ್ ಸ್ಪಾಟ್ ಡಿವೈಸ್ ಖರೀದಿಗೆ ಹೋದರೆ ಏಕಾಏಕಿ ಡಿಮ್ಯಾಂಡ್ ಬಂದು, ಸಿಗುತ್ತಿಲ್ಲ. ಇನ್ನು ಯುಪಿಎಸ್ ಕೂಡ ಕಾಸ್ಟ್ಲಿ ಅನಿಸುವುದರಿಂದ ಈಗ ಖರೀದಿ ಕಷ್ಟ. "ಇದು ಕೂಡ ನಿಮ್ಮ ಮನೆಯಲ್ಲಿ ಇಲ್ಲವಾ?" ಎಂದು ಕೇಳಿದಾಗ ಮುಜುಗರ ಆದಂತಾಗುತ್ತದೆ. ಆದರೆ ಪ್ರಯೋಜನ ಇಲ್ಲ.

ಇನ್ಷೂರೆನ್ಸ್ ಮಾಡಿಸುವುದು ಕೂಡ ಬಹಳ ಮುಖ್ಯ

ಇನ್ಷೂರೆನ್ಸ್ ಮಾಡಿಸುವುದು ಕೂಡ ಬಹಳ ಮುಖ್ಯ

ಅವತ್ತಿನ ದುಡಿಮೆ ಅವತ್ತಿಗೆ ಎಂದು ನಂಬಿ ಬದುಕುತ್ತಿರುವವರು ಇಂಥ ಸನ್ನಿವೇಶಗಳಲ್ಲಿ ಯಾವುದಾದರೂ ಇನ್ಷೂರೆನ್ಸ್ ಇದೆಯಾ ಎಂಬುದನ್ನು ಹುಡುಕಿಕೊಳ್ಳಲೇಬೇಕು ಅಥವಾ ಸರ್ಕಾರದಿಂದಲೇ ಈ ಬಗ್ಗೆ ಒಂದು ನಿರ್ಧಾರ ಕೈಗೊಳ್ಳಬೇಕು. ರಸ್ತೆ ಬದಿ ವ್ಯಾಪಾರಿಗಳಿಂದ ಮೊದಲುಗೊಂಡು ಗಾರ್ಮೆಂಟ್ಸ್, ತಳ್ಳುಗಾಡಿ ವ್ಯಾಪಾರ ಮಾಡುವವರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾರಗಟ್ಟಲೆ ಆದಾಯಕ್ಕೆ ಕಲ್ಲು ಬಿದ್ದರೆ ಜೀವನ ಮಾಡುವುದು ಹೇಗೆ? ಇದರಿಂದ ಕಾರು- ಆಟೋ- ಲಾರಿ ಚಾಲಕರು ಕೂಡ ಹೊರತಾಗಿಲ್ಲ. ಆರೋಗ್ಯ ಮತ್ತು ಆದಾಯ ಈ ಎರಡಕ್ಕೂ ಆಗುವಂಥ, ಕೈಗೆಟುಕುವ ಬೆಲೆಯ ಇನ್ಷೂರೆನ್ಸ್ ತೀರಾ ಅಗತ್ಯ. ಈಗಿನ ಸನ್ನಿವೇಶ ಅದೆಷ್ಟು ಬಾರಿ ಬರಲು ಸಾಧ್ಯ ಎಂಬ ಉಡಾಫೆ ಧೋರಣೆ ಖಂಡಿತಾ ಒಳ್ಳೆಯದಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಇನ್ನು ಮದುವೆ ಸೇರಿದಂತೆ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ವಿಪರೀತ ಖರ್ಚು ಮಾಡಿ, ಈಗ ಮುಂದೇನು ಎಂಬ ಚಿಂತೆಯಲ್ಲಿ ಇರುವವರಿಗೂ ಇನ್ಷೂರೆನ್ಸ್ ಮಾಡಿಸಬೇಕು ಎಂಬುದು ಒಂದು ಪಾಠ.

English summary

Corona And Economic Crisis What Taught Us?

Corona and economic crisis taught us some lessons. What are those lessons? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X