ವಿವಿಧ ಮೋಟಾರ್ ವಾಹನದ ದಾಖಲೆಗಳ ಮಾನ್ಯತೆಯನ್ನು ಜುಲೈ 31, 2020ರ ತನಕ ವಿಸ್ತರಣೆ ಮಾಡಿ, ಸರ್ಕಾರವು ಭಾನುವಾರ ಆದೇಶ ಮಾಡಿದೆ. ಫೆಬ್ರವರಿ 1ರಿಂದ ಈಚೆಗೆ ನವೀಕರಣ ಆಗಬೇಕಾದ ದಾಖಲೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಮೋಟಾರು ವಾಹನ ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮ, 1989ರ ಅಡಿಯಲ್ಲಿನ ಎಲ್ಲ ದಾಖಲಾತಿಗಳ ನವೀಕರಣಕ್ಕೆ ಕಾಲಾವಕಾಶ ನೀಡಿ, ಮಾರ್ಚ್ 30, 2020ರಂದು ಆದೇಶ ಹೊರಡಿಸಲಾಗಿತ್ತು. ಫೆಬ್ರವರಿ 1ರ ನಂತರ ಅವಧಿ ಮುಗಿದ ದಾಖಲಾತಿಗಳನ್ನು ಜೂನ್ 30, 2020ರ ತನಕ ಮಾನ್ಯ ಮಾಡುವಂತೆ ಸೂಚಿಸಲಾಗಿತ್ತು. ಈಗ ಆ ಅವಧಿಯನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ.
ಕೊರೊನಾ ಲಾಕ್ ಡೌನ್ ಇರುವುದರಿಂದ ದಾಖಲಾತಿಗಳ ನವೀಕರಣ ಮಾಡಿಸುವುದು ಕಷ್ಟವಾಗಿದೆ. ನವೀಕರಣ ಮಾಡಿಕೊಳ್ಳುವುದು ತಡವಾದರೆ ವಿಳಂಬವಾಗಿದ್ದಕ್ಕೆ ಶುಲ್ಕ ಪಾವತಿ ಆಗಬೇಕಿತ್ತು. ಆದರೆ ಲಾಕ್ ಡೌನ್ ಮತ್ತು ಸರ್ಕಾರದ ಸಾರಿಗೆ ಕಚೇರಿಯೇ ಮುಚ್ಚಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.

ಇನ್ನೂ ಕೆಲವು ಪ್ರಕರಣಗಳಲ್ಲಿ ಸೇವೆ, ನವೀಕರಣಕ್ಕೆ ಶುಲ್ಕವನ್ನು ಪಾವತಿಸಿ ಆಗಿದೆ. ಆದರೆ ಲಾಕ್ ಡೌನ್ ಕಾರಣಕ್ಕೆ ಪ್ರಕ್ರಿಯೆ ಪೂರ್ತಿ ಆಗಿಲ್ಲ. ಆರ್ ಟಿಒ ಕಚೇರಿಯೇ ಮುಚ್ಚಿರುವುದರಿಂದ ಶುಲ್ಕ ಪಾವತಿಸಲು ಆಗಿಲ್ಲ ಎಂದು ಹಲವರು ಅಲವತ್ತುಕೊಂಡಿದ್ದಾರೆ.


Click it and Unblock the Notifications