ದೀಪಾವಳಿ ಹಬ್ಬ ಸಮೀಪವಾಗುತ್ತಿದೆ. ಈಗಲೇ ಜನರು ತಯಾರಿಯನ್ನು ನಡೆಸುತ್ತಿದ್ದಾರೆ. ಭರ್ಜರಿಯಾಗಿ, ಶಾಪಿಂಗ್ ಮಾಡುತ್ತಿದ್ದಾರೆ. ಹಾಗೆಯೇ ನೆಂಟರ ಮನೆಗೆ, ದೇವಾಲಯಗಳಿಗೆ ಹೋಗುವ ಪ್ಲ್ಯಾನ್‌ಗಳನ್ನು ಕೂಡಾ ಮಾಡಿಕೊಂಡಿದ್ದಾರೆ. ಈ ನಡುವೆ ಜನರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ದೀಪಾವಳಿ ಸಮಯದಲ್ಲಿ ಪ್ರಯಾಣಿಕರಿಗೆ ಓಡಾಟ ನಡೆಸಲು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಕೆಎಸ್‌ಆರ್‌ಟಿಸಿ ಮಾಡಿದೆ. ಈ ನಿಟ್ಟಿನಲ್ಲಿ ಈ ಹಬ್ಬದ ಸೀಸನ್‌ಗಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ 2,000 ಬಸ್ ಸೇವೆಗಳನ್ನು ಘೋಷಿಸಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ, ವಿಶೇಷ ಬಸ್‌ಗಳು ನವೆಂಬರ್ 10 ಅಂದರೆ ನಾಳೆಯಿಂದ ನವೆಂಬರ್ 12 ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸಂಚಾರ ಮಾಡಲಿದೆ. ಇನ್ನು ನವೆಂಬರ್ 14 ರಿಂದ 15 ರವರೆಗೆ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಸೇವೆಯು ಇರಲಿದೆ.
ಯಾವೆಲ್ಲ ಸ್ಥಳಗಳಿಗೆ ವಿಶೇಷ ಬಸ್‌ಗಳು?
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದೆಡೆಗೆ ವಿಶೇಷ ಬಸ್‌ಗಳು ಇರಲಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮರ್ಕಾರ ಕಡೆಗೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ. ಇನ್ನು ಕರ್ನಾಟಕದ ಒಳಗೆ ಮಾತ್ರವಲ್ಲ, ಇತರೆ ರಾಜ್ಯಗಳಿಗೂ ಕೆಎಸ್‌ಆರ್‌ಟಿಸಿಯ ವಿಶೇಷ ಬಸ್‌ಗಳು ಇರಲಿದೆ.
ಬಿಎಂಟಿಸಿ ಬಸ್ ನಿಲ್ದಾಣ ಶಾಂತಿನಗರ ಟಿಟಿಎಂಸಿಯಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು ಮತ್ತು ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ಆಲ್-ಪ್ರೀಮಿಯರ್ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ.
ದೀಪಾವಳಿ ವಿಶೇಷ ರೈಲು ಸೇವೆ
ರೈಲು ಸಂಖ್ಯೆ 06231/ 06232 ಬೆಂಗಳೂರು-ವಿಜಯಪುರ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ಈ ವಿಶೇಷ ರೈಲು 16 ಬೋಗಿಯನ್ನು ಒಳಗೊಂಡಿದೆ. ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣದ ಮಾಹಿತಿಯನ್ನು ನೈಋತ್ಯ ರೈಲ್ವೆ ಘೋಷಿಸಿದೆ.
ನವೆಂಬರ್ 10ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರೈಲು ಸಂಖ್ಯೆ 06231 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಜಯಪುರ ನಡುವಿನ ವಿಶೇಷ ರೈಲು ಸಂಜೆ 7 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10.55ಕ್ಕೆ ವಿಜಯಪುರ ತಲುಪಲಿದೆ.
ಒಂದು ಟ್ರಿಪ್ ವಿಶೇಷ ರೈಲು ವಾಪಸ್ ಆಗುವ ದಿಕ್ಕಿನಲ್ಲಿ ನವೆಂಬರ್ 14ರಂದು ಹೊರಡಲಿದೆ. ರೈಲು ಸಂಖ್ಯೆ 06232 ವಿಜಯಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ರೈಲು ಸಂಜೆ 5 ಗಂಟೆಗೆ ವಿಜಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.
ರೈಲು ನಂಬರ್ 09057 ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಉಧಾನ್ ಜಂಕ್ಷನ್‌ನಿಂದ 19.45ಕ್ಕೆ ಶುಕ್ರವಾರ ಮತ್ತು ಭಾನುವಾರ ಹೊರಡಲಿದೆ. ನವೆಂಬರ್ 3, 5, 10, 12, 17, 19, 24, 26ರಂದು ಸಂಚಾರ ನಡೆಸಲಿದೆ. ಡಿಸೆಂಬರ್ ತಿಂಗಳಿನಲ್ಲಿ 1, 3, 8, 10, 15, 17, 22, 24, 29 ಮತ್ತು 31 ರಂದು ಸಂಚಾರ ನಡೆಸಲಿದೆ. ಉಧಾನ್ ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ 19:10ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ನಂಬರ್ 09058 ಮಂಗಳೂರು ಜಂಕ್ಷನ್ ಉಧಾನ್ ಜಂಕ್ಷನ್ ವಿಶೇಷ ದರದ ರೈಲು ಮಂಗಳೂರು ಜಂಕ್ಷನ್‌ನಿಂದ 21:10ಕ್ಕೆ ಶನಿವಾರ ಮತ್ತು ಸೋಮವಾರ ಹೊರಡಲಿದೆ. ನವೆಂಬರ್ 4, 6, 11, 13, 18, 20, 25 ಮತ್ತು 27ರಂದು ಸಂಚಾರ ನಡೆಸಲಿದೆ. ಡಿಸೆಂಬರ್ ತಿಂಗಳಿನಲ್ಲಿ 2, 4, 9, 11, 16, 18, 23, 25, 30 ಮತ್ತು ಜನವರಿ 1ರಂದು ಸಂಚಾರ ನಡೆಸಲಿದೆ. ಮಂಗಳೂರಿನಿಂದ ಹೊರಡುವ ರೈಲು ಮರುದಿನ 21:30ಕ್ಕೆ ಉಧಾನ್ ಜಂಕ್ಷನ್ ತಲುಪಲಿದೆ.


Click it and Unblock the Notifications