ಬೆಂಗಳೂರು, ಜೂನ್ 4: ಅಯ್ಯೋ ಪ್ರತಿ ತಿಂಗಳಾದರೆ ಸಾಕು, ಈ ಕ್ರೆಡಿಟ್ ಕಾರ್ಡ್ ಬಿಲ್ ಒಂದು ಕಾಡಲಿಕ್ಕೆ ಶುರು ಮಾಡುತ್ತದೆ. ಕ್ರೆಡಿಟ್ ಕಾರ್ಡ್ ಸಹವಾಸ ಸಾಕಾಗಿದೆ. ಆದದ್ದು ಆಗಲಿ ಕ್ಲೋಸ್ ಮಾಡಿಬಿಡೋಣ ಎಂದು ಅನ್ನಿಸಿದೆಯಾ? ಹಾಗಿದ್ದರೆ ಈ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಒಂದಿಷ್ಟು ಅಂಶಗಳನ್ನು ತಿಳಿದುಕೊಳ್ಳಬೇಕು.
ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದರೆ ಅದು ನಿಮ್ಮ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ? ಆ ಪರಿಣಾಮ ನಿಮಗೆ ಒಳ್ಳೆಯದಾ ಅಥವಾ ನೆಗೆಟಿವ್ ಆಗುತ್ತದೆಯಾ? ಇದೆಲ್ಲವನ್ನು ನಾವು ತಿಳಿದುಕೊಳ್ಳಬೇಕು.

ಇದಕ್ಕೂ ಮೊದಲು, ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಸ್ಕೋರ್ ನಡುವಿನ ಸಂಬಂಧ ಏನು ಎನ್ನುವುದನ್ನು ಮೊದಲು ತಿಳಿದಿರುವುದು ಮುಖ್ಯ. ನಿಮ್ಮ ಕ್ರೆಡಿಟ್ ವರ್ತಿನೆಸ್ ಅಂದರೆ ನೀವು ಸಾಲ ಪಡೆಯುವುದಕ್ಕೆ ಎಷ್ಟು ಅರ್ಹರು ಎನ್ನುವುದನ್ನು ನಿಮ್ಮ ಕ್ರೆಡಿಟ್ ಸ್ಕೋರ್ ತೋರಿಸುತ್ತದೆ. ಅನೇಕ ಅಂಶಗಳು ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತದೆ.
ನಿಮ್ಮ ಪೇಮೆಂಟ್ ಹಿಸ್ಟರಿ ಅಂದರೆ ನೀವು ನಿಮ್ಮ ಸಾಲದ ಎಷ್ಟು ಮೊತ್ತವನ್ನ ಮತ್ತು ಯಾವಾಗ ಮರುಪಾವತಿ ಮಾಡಿದ್ದೀರಾ? ನಿಮ್ಮ ಕ್ರೆಡಿಟ್ ಬಳಕೆ ಅನುಪಾತ ಎಷ್ಟು ಅಂದರೆ ನಿಮ್ಮ ಕ್ರೆಡಿಟ್ ಲಿಮಿಟ್ ನ ಎಷ್ಟು ಭಾಗವನ್ನ ಬಳಸಿದ್ದೀರಾ? ಯಾವ ಬಗೆಯ ಸಾಲ ಅಂದರೆ ಕ್ರೆಡಿಟ್ ಕಾರ್ಡ್ ಸೇರಿ ಯಾವ ಯಾವ ಸಾಲ ಪಡೆದಿದ್ದೀದಾ ಮೊದಲಾದವುಗಳು. ಇವೆಲ್ಲಾ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ.
ಈಗ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡೋಣ. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದರೆ ಒಂದು ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದರೆ ಆಗ ನಿಮ್ಮ ಕ್ರೆಡಿಟ್ ಬಳಕೆ ಅನುಪಾತ ಜಾಸ್ತಿ ಆಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸರಳವಾಗಿ ಇದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ.
ನಿಮ್ಮ ಬಳಿ ಮೂರು ಕ್ರೆಡಿಟ್ ಕಾರ್ಡ್ ಇದೆ ಅಂತಿಟ್ಕೊಳೋಣ. ಒಂದರ ಮಿತಿ 40 ಸಾವಿರ, ಇನ್ನೊಂದರದ್ದು 60 ಸಾವಿರ, ಹಾಗೇ ಮೂರನೇ ಕ್ರೆಡಿಟ್ ಕಾರ್ಡ್ ನ ಲಿಮಿಟ್ 1 ಲಕ್ಷ ರೂಪಾಯಿ ಆದರೆ ನಿಮ್ಮ ಒಟ್ಟು ಕ್ರೆಡಿಟ್ ಲಿಮಿಟ್ 2 ಲಕ್ಷ ರೂಪಾಯಿ ಆಗುತ್ತದೆ. ಒಂದು ವೇಳೆ ನೀವು 1 ಲಕ್ಷ ಲಿಮಿಟ್ ಇರುವ ನಿಮ್ಮ ಕಾರ್ಡ್ ಕ್ಲೋಸ್ ಮಾಡಿದರೆ ನಿಮ್ಮ ಬಳಿ ಇರುವ ಇತರ ಎರಡು ಕಾರ್ಡ್ ಗಳ ಮೇಲೆ 1 ಲಕ್ಷ ಲಿಮಿಟ್ ಇರುತ್ತದೆ. ನೀವು ಅದರ ಶೇಕಡ 50ರಷ್ಟು ಅಂದರೆ 50 ಸಾವಿರ ರೂ. ಬಳಸಿದರೂ ಕೂಡ, ನಿಮ್ಮ ಕ್ರೆಡಿಟ್ ಬಳಕೆ ಪ್ರಮಾಣ ದುಪ್ಪಟ್ಟಾಗುತ್ತದೆ. ಈ ಬಳಕೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಇದಲ್ಲದೆ ಇನ್ನೊಂದಿಷ್ಟು ವಿಚಾರ ತಿಳಿದುಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೂ ಮೊದಲು ನಿಮ್ಮ ಬಾಕಿ ಮೊತ್ತವನ್ನ ಸಂಪೂರ್ಣವಾಗಿ ಪಾವತಿ ಮಾಡಬೇಕು. ಒಂದು ರೂಪಾಯಿ ಬಾಕಿ ಇದ್ದರೂ ಕೂಡ ಅದು ನಿಮ್ಮ ಕ್ರೆಡಿಟ್ ಹಿಸ್ಟರಿ ಮೇಲೆ ಭಾರೀ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ತುಂಬಾ ಕಳಪೆಯಾಗಬಹುದು.
ಕ್ರೆಡಿಟ್ ಹಿಸ್ಟರಿ ದೀರ್ಘ ಕಾಲದಿಂದ ಇದ್ದರೆ ಅಂದರೆ ನೀವು ಕಳೆದ ಆರು ವರ್ಷಗಳಿಂದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಬಂದಿದ್ದೀರಿ.. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡುತ್ತಾ ಬಂದಿದ್ದೀರಿ, ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಬಳಕೆಯೂ ಸರಿಯಾದ ಪ್ರಮಾಣದಲ್ಲಿಯೇ ಇದೆ ಎಂದಾದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರುತ್ತದೆ.
ಹಾಗಾಗಿ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಗಳು ಇವೆ ಎಂದಾದರೆ ಅದನ್ನು ಅಗತ್ಯವಿದ್ದ ಕಡೆ ಲಾಭದಾಯಕವಾಗಿ ಬಳಸಿಕೊಳ್ಳಿ. ಅನಿವಾರ್ಯ ಸಂದರ್ಭ ಎದುರಾದರೆ ಮಾತ್ರ ಕಾರ್ಡ್ ಕ್ಲೋಸ್ ಮಾಡುವ ಹೆಜ್ಜೆ ಇಡಿ. ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೂ ಮೊದಲು, ನಿಮ್ಮ ಕ್ರೆಡಿಟ್ ಕಾರ್ಡ್ ರಿಪೋರ್ಟ್ ರಿವ್ಯೂ ಮಾಡಲು ಮರೀಬೇಡಿ. ಕಾರ್ಡ್ ಕ್ಲೋಸ್ ಮಾಡುವುದಕ್ಕೆ ನಿಮ್ಮ ಬ್ಯಾಂಕ್ ಅಥವಾ ಸಂಬಂಧಿಸಿದ ಕಾರ್ಡ್ ಕಂಪೆನಿ ಸಂಪರ್ಕಿಸಬಹುದು. ನಿಮ್ಮ ಅಕೌಂಟ್ ಸರಿಯಾಗಿ ಕ್ಲೋಸ್ ಅಗಿದ್ಯಾ ಅಥವಾ ಇಲ್ಲವೇ? ಎನ್ನುವುದನ್ನು ಖಾತರಿ ಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆಗಾಗ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುತ್ತಾ ಇರಿ.


Click it and Unblock the Notifications