ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್‌ಒ ಅದಾನಿ ಗ್ರೂಪ್‌ನ ಸಂಸ್ಥೆಗಳಾದ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಮೇಲೆ ಹೂಡಿಕೆ ಮಾಡುವುದನ್ನು ಮುಂದುವರಿಸುವ ನಿರ್ಧಾರವನ್ನು ಮಾಡಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಜನವರಿ 24ರಂದು ವರದಿ ಮಾಡಿದೆ. ಇದಾದ ಬಳಿಕ ಅದಾನಿ ಗ್ರೂಪ್‌ನ ಸ್ಟಾಕ್‌ಗಳು ನಿರಂತರವಾಗಿ ಇಳಿಕೆಯಾಗಿದೆ. ಅದರ ಹೊರತಾಗಿಯೂ, ಹೂಡಿಕೆ ಮುಂದುವರಿಸಿಲಿದೆ ಎಂದು ವರದಿಯಾಗಿದೆ.
ಮಾರ್ಚ್ 27ರಂದು ಪ್ರಕಟವಾದ ವರದಿ ಪ್ರಕಾರ, ಇಪಿಎಫ್‌ಒ ಕೇಂದ್ರ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಟ್ರಸ್ಟ್ ನಡೆಸುತ್ತಿರುವ ನಿವೃತ್ತಿ ನಿಧಿ, ಕಡ್ಡಾಯ ಭವಿಷ್ಯ ನಿಧಿ ಮತ್ತು ಯೋಜನೆಯ ಅಡಿಯಲ್ಲಿ ನೋಂದಾಯಿಸಲಾದ ಉದ್ಯೋಗಿಗಳ ಪಿಂಚಣಿ ಯೋಜನೆಯನ್ನು ನಿರ್ವಹಿಸುತ್ತದೆ. ಇಪಿಎಫ್‌ಒ ತನ್ನ ಕಾರ್ಪಸ್‌ನ ಶೇಕಡ 15ರಷ್ಟನ್ನು ಎಕ್ಸ್ಚೇಂಜ್-ಟ್ರೇಡೆಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ ಎಂದು ದಿ ಹಿಂದೂ ವರದಿ ಮಾಡಿದೆ. ನಿವೃತ್ತಿ ನಿಧಿ ಸಂಸ್ಥೆಯು ಕಂಪನಿಗಳಲ್ಲಿನ ತನ್ನ ಹೂಡಿಕೆಯ ಶೇಕಡ 85ರಷ್ಟನ್ನು ನಿಫ್ಟಿ 50 ಟ್ರ್ಯಾಕಿಂಗ್ ವಿನಿಮಯ-ವಹಿವಾಟು ನಿಧಿಗಳಿಗೆ ಮೀಸಲಿಟ್ಟಿದೆ.

ಮಾರ್ಚ್ 2022 ರ ಹೊತ್ತಿಗೆ, ಇಪಿಎಫ್‌ಒ ವಿನಿಮಯ-ವಹಿವಾಟು ನಿಧಿಗಳಲ್ಲಿ 1.57 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಸಾಮಾಜಿಕ ಭದ್ರತಾ ಸಂಸ್ಥೆಯು 2022-23 ರ ಹಣಕಾಸು ವರ್ಷದಲ್ಲಿ 8,000 ಕೋಟಿ ರೂಪಾಯಿಗಳ ಮತ್ತೊಂದು ಹೂಡಿಕೆ ಮಾಡಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಅದಾನಿ ಸಮೂಹದ ಷೇರುಗಳ ಭಾರೀ ಕುಸಿತವನ್ನು ಕಂಡ ಬಳಿಕ ತಜ್ಞರು ಇಪಿಎಫ್‌ಒ ಮಾಡಿದ ಹೂಡಿಕೆ ಬಗ್ಗೆ ಪಾರದರ್ಶಕತೆ ಹೊಂದಿರಬೇಕು ಎಂದು ಕರೆ ನೀಡಿದೆ. ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ಪಡೆಯಬೇಕಾದರೆ ಬೇರೆ ಬೇರೆ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬಡ್ಡಿದರ ಪರಿಷ್ಕರಣೆಯಾಗಬಹುದೇ?
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಪ್ರತಿ ವರ್ಷವೂ ಬಡ್ಡಿದರವನ್ನು ಇಪಿಎಫ್ ಬೋರ್ಡ್ ನಿಗದಿಪಡಿಸುತ್ತದೆ. ಈ ಹಿಂದೆ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು, ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗ ಇಪಿಎಫ್‌ಒ ಬೋರ್ಡ್ ಸಭೆ ಮಾರ್ಚ್ 27 ಮತ್ತು 28ರಂದು ನಡೆಯುತ್ತಿದ್ದು, ಈ ಸಭೆಯಲ್ಲಿ ಬಡ್ಡಿದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ. ಇನ್ನು ಬಡ್ಡಿದರವನ್ನು ಇಳಿಕೆ ಮಾಡುವ ಬಗ್ಗೆ ಚರ್ಚೆ ನಡೆಸುವುದು ಮಾತ್ರವಲ್ಲದೆ ಬೋರ್ಡ್ ಅಧಿಕ ಪಿಂಚಣಿ ಬಗ್ಗೆಯೂ ಚರ್ಚೆ ನಡೆಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಾಧ್ಯಮಗಳ ವರದಿ ಪ್ರಕಾರ ಹಣಕಾಸು ವರ್ಷ 2022-23 ಇಪಿಎಫ್ ಬಡ್ಡಿದರವನ್ನು ಸರ್ಕಾರವು ಶೇಕಡ 8ಕ್ಕೆ ಇಳಿಕೆ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಇಪಿಎಫ್ ಬಡ್ಡಿದರವು ಶೇಕಡ 8.1 ಆಗಿದೆ. ಇಪಿಎಫ್‌ಒ ಹಣಕಾಸು ಹೂಡಿಕೆ ಮತ್ತು ಆಡಿಟ್ ಸಮಿತಿಯು 2022-23 ಆದಾಯದ ಲೆಕ್ಕಾಚಾರದ ಮೇಲೆ ನೀಡುವ ಸಲಹೆಯ ಮೇಲೆ 2022-23 ಹಣಕಾಸು ವರ್ಷದ ನೌಕರರ ಭವಿಷ್ಯ ನಿಧಿ ಖಾತೆಯ ಬಡ್ಡಿದರು ಅವಲಂಬಿತವಾಗಿದೆ.
ಹಣಕಾಸು ವರ್ಷ 2021-22ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇಕಡ 8.1ಕ್ಕೆ ಇಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ. ಸುಮಾರು ನಾಲ್ಕು ದಶಕಗಳ ಬಳಿಕ ಇಪಿಎಫ್‌ಒ ಬಡ್ಡಿದರವನ್ನು ಅಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. 1977-78ರಲ್ಲಿ ಇಪಿಎಫ್‌ಒ ಬಡ್ಡಿದರ ಶೇಕಡ 8 ಆಗಿತ್ತು. ಅದಾದ ಬಳಿಕ ಪಿಎಫ್ ಬಡ್ಡಿದರ ಏರಿಕೆ ಕಂಡಿತ್ತು. 1977-78ರ ಬಳಿಕದ ಅತೀ ಕಡಿಮೆ ಬಡ್ಡಿದರ 2021-22 ಹಣಕಾಸು ವರ್ಷದ್ದಾಗಿದೆ. ಮಾರ್ಚ್ 2021ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) 2020-21ರ ಸಾಲಿನ ಬಡ್ಡಿದರವನ್ನು ಶೇಕಡ 8.5 ಎಣದು ನಿರ್ಧಾರ ಮಾಡಿದೆ.


Click it and Unblock the Notifications