ಭಾರತದಲ್ಲಿ ನಿವೃತ್ತಿ ನಿಧಿಯನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಮ್ಮ ವೇತನದಲ್ಲಿ ಪ್ರತಿ ತಿಂಗಳು ಕೊಂಚ ಮೊತ್ತವನ್ನು ಉಳಿತಾಯ ಮಾಡುವ ಪ್ರಯೋಜವನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಜನರಿಗೆ ಮೂರು ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳಿಗೆ ವಿಮಾ ಯೋಜನೆಗಳನ್ನು ನೀಡುತ್ತದೆ. ಹಾಗಿರುವಾಗ ನೀವು ಇಪಿಎಫ್‌ನಲ್ಲಿನ ಮೊತ್ತ ಕ್ಲೈಮ್ ಮಾಡಲು ಬಳಸಬೇಕಾದ ಫಾರ್ಮ್‌ಗಳ ಬಗ್ಗೆ ತಿಳಿದಿರುವುದು ಮುಖ್ಯವಾಗುತ್ತದೆ.
ಇನ್ನು ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಪ್ರತಿ ವರ್ಷವೂ ಬಡ್ಡಿದರವನ್ನು ಇಪಿಎಫ್ ಬೋರ್ಡ್ ನಿಗದಿಪಡಿಸುತ್ತದೆ. ಈ ಹಿಂದೆ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು ಈ ವರ್ಷದಲ್ಲಿ ನಡೆದ ಸಭೆಯ ಬಳಿಕ ಹಣಕಾಸು ವರ್ಷ 2022-23ಕ್ಕೆ ಪಿಎಫ್ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳಿಗೆ ವಿಮಾ ಯೋಜನೆಯನ್ನು ಇಪಿಎಫ್ ಯೋಜನೆ 1952, ಪಿಂಚಣಿ ವ್ಯವಸ್ಥೆ 1995 (ಇಪಿಎಸ್) ಮತ್ತು ವಿಮಾ ಯೋಜನೆ 1976 (ಇಡಿಎಲ್‌ಐ) ನಿರ್ವಹಣೆ ಮಾಡುತ್ತದೆ. ಈ ಲೇಖನದಲ್ಲಿ ನಾವು ಇಪಿಎಫ್ ಕ್ಲೈಮ್‌ಗೆ ಅಗತ್ಯವಾದ 6 ಫಾರ್ಮ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ...

ಇಪಿಎಫ್ ಕ್ಲೈಮ್‌ಗೆ ಬೇಕಾದ 6 ಪ್ರಮುಖ ದಾಖಲೆಗಳು
1. ಫಾರ್ಮ್ 10ಸಿ: ಇಪಿಎಸ್ ಯೋಜನೆ ಅಡಿಯಲ್ಲಿ ನಿಮ್ಮ ಉದ್ಯೋಗದಾತ ಸಂಸ್ಥೆಯ ನೀಡಿದ ಕೊಡುಗೆಯನ್ನು ನೀವು ವಿತ್‌ಡ್ರಾ ಮಾಡಿಕೊಳ್ಳಲು ಫಾರ್ಮ್ 10ಸಿಯನ್ನು ಬಳಕೆ ಮಾಡಬೇಕಾಗುತ್ತದೆ.
2. ಫಾರ್ಮ್ 10ಡಿ: ಮಾಸಿಕ ಪಿಂಚಣಿಯನ್ನು ಪಡೆಯಲು ನೀವು ಈ ಫಾರ್ಮ್ ಅನ್ನು ಬಳಕೆ ಮಾಡಬಹುದಾಗಿದೆ.
3. ಫಾರ್ಮ್ 31: ನಿಮ್ಮ ಇಪಿಎಫ್ ಖಾತೆಯ ಆಧಾರದಲ್ಲಿ ಸಾಲವನ್ನು ಪಡೆಯಲು ಅಥವಾ ನಿಮ್ಮ ಇಪಿಎಫ್ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡಲು ಫಾರ್ಮ್ 31 ಅನ್ನು ಬಳಕೆ ಮಾಡಬೇಕಾಗುತ್ತದೆ.
4. ಫಾರ್ಮ್ 13: ಒಂದು ಸಂಸ್ಥೆಯನ್ನು ತೊರೆದು ಇನ್ನೊಂದು ಸಂಸ್ಥೆಗೆ ಸೇರ್ಪಡೆಯಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ನಿಮ್ಮ ಇಪಿಎಫ್ ಮೊತ್ತವನ್ನು ಒಂದು ಉದ್ಯೋಗ ಸಂಸ್ಥೆಯ ನಿಧಿಯಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡಲು ಫಾರ್ಮ್ 13 ಅನ್ನು ಬಳಕೆ ಮಾಡಬೇಕಾಗುತ್ತದೆ. ನಿಮ್ಮ ಮೊತ್ತವು ಒಂದು ನಿಗಧಿತ ಖಾತೆಯಲ್ಲಿದೆ, ಆ ಮೊತ್ತವು ನಷ್ಟವಾಗುವುದಿಲ್ಲ ಎಂಬುವುದನ್ನು ಖಾತರಿಪಡಿಸುತ್ತದೆ.
5. ಫಾರ್ಮ್ 20: ಓರ್ವ ಪಿಎಫ್ ಖಾತೆ ಹೊಂದಿರುವ ವ್ಯಕ್ತಿಯು ಸಾವನ್ನಪ್ಪಿದಾಗ ಆತನ/ ಆಕೆಯ ಕುಟುಂಬಸ್ಥರು ಅಥವಾ ನಾಮಿನಿಗಳು ಪಿಎಫ್ ಮೊತ್ತವನ್ನು ಕ್ಲೈಮ್ ಮಾಡಲು ಫಾರ್ಮ್ 20 ಅನ್ನು ಬಳಸಬೇಕಾಗುತ್ತದೆ. ಇನ್ನು ಓರ್ವ ಉದ್ಯೋಗಿಯ ಒಟ್ಟು ಉದ್ಯೋಗ ಸಮಯವು 10 ವರ್ಷಕ್ಕೂ ಕಡಿಮೆಯಾಗಿದ್ದಾಗಲೂ ಇದೇ ಫಾರ್ಮ್ ಅನ್ನು ಬಳಸಬೇಕಾಗುತ್ತದೆ.
6. ಫಾರ್ಮ್ 51ಎಫ್: ಉದ್ಯೋಗಿಗಳ ವಿಮಾ ಯೋಜನೆ ಅಡಿಯಲ್ಲಿ ನಿಮ್ಮ ವಿಮಾ ಪ್ರಯೋಜನವನ್ನು ಪಡೆದುಕೊಳ್ಳಲು ನಿಮ್ಮ ನಾಮಿನಿದಾರರು ಫಾರ್ಮ್ 51ಎಫ್ ಅನ್ನು ಬಳಸಬೇಕಾಗುತ್ತದೆ.
ನಿಯಮ ಬಿಗಿಗೊಳಿಸಿದ ಇಪಿಎಫ್‌ಒ!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ನಿಯಮವನ್ನು ಬಿಗಿಗೊಳಿಸಿದೆ. ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಿದೆ. ಅಷ್ಟು ಮಾತ್ರವಲ್ಲದೆ ಆ ಪಿಂಚಣಿದಾರರಿಗೆ ಶೋಕಾಸ್ ನೋಟಿಸ್ ಅನ್ನು ಕೂಡಾ ಜಾರಿ ಮಾಡಿದೆ. ಈ ಹಿಂದೆ ಪಾವತಿ ಮಾಡಲಾದ ಪಿಂಚಣಿಯನ್ನು ಮರುಪಾವತಿ ಮಾಡಿ ಎಂದು ಕೂಡಾ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.


Click it and Unblock the Notifications