ಹೊಸ ಹಣಕಾಸು ವರ್ಷ ಆರಂಭವಾಗುವ ಮೊದಲ ದಿನದಿಂದಲೇ ಹಲವಾರು ವಸ್ತುಗಳ ದರವು ಏರಿಕೆಯಾಗಲಿದೆ. ಅದರಲ್ಲಿ ಪ್ರಮುಖವಾಗಿ 384 ಅಗತ್ಯ ಔಷಧಿಗಳ ದರ ಹಾಗೂ 1,000 ಫಾರ್ಮೂಲೇಷನ್‌ಗಳ ದರವು ಶೇಕಡ 11ಕ್ಕೂ ಅಧಿಕ ಅಥವಾ ಶೇಕಡ 12ರವರೆಗೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ಸಗಟು ಬೆಲೆ ಸೂಚ್ಯಂಕ ಅಥವಾ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಭಾರೀ ಏರಿಕೆಯಾದ ಪರಿಣಾಮದಿಂದಾಗಿ ಅಗತ್ಯ ಔಷಧಿಗಳ ದರವನ್ನು ಹೆಚ್ಚಳ ಮಾಡಲಾಗಿದೆ.
ಏಪ್ರಿಲ್ 1, 2023ರಿಂದ ಅಗತ್ಯ ಔಷಧಿಗಳ ದರ ಏರಿಕೆಯಾಗುವ ಕಾರಣದಿಂದಾಗಿ ಜನರು ಕೆಲವು ಅಗತ್ಯ ಔಷಧಿಗಳಿಗಾಗಿ ಸಾಮಾನ್ಯವಾಗಿ ಪಾವತಿ ಮಾಡುತ್ತಿದ್ದ ಮೊತ್ತಕ್ಕಿಂತ ಇನ್ನು ಮುಂದೆ ಅಧಿಕ ಮೊತ್ತವನ್ನು ಪಾವತಿ ಮಾಡಬೇಕಾಗಿ ಬರುತ್ತದೆ. ಪ್ರಮುಖವಾಗಿ ಜನರು ಹೆಚ್ಚಾಗಿ ಬಳಕೆ ಮಾಡುವಂತಹ ಅಗತ್ಯ ಔಷಧಿಯಾದ ಪೇನ್‌ಕಿಲ್ಲರ್ (ನೋವು ನಿರೋಧಕ ಔಷಧಿ), ಆಂಟಿ-ಇನ್‌ಫೆಕ್ಷನ್ ಔಷಧಿ, ಹೃದಯ ಕಾಯಿಲೆಗಳಿಗೆ ಬಳಸುವ ಔಷಧಿಗಳು ಹಾಗೂ ಆಂಟಿ ಬಯೋಟಿಕ್‌ಗಳ (ಸೋಂಕು ನಿರೋಧಕ ಔಷಧಿ) ದರವು ಏಪ್ರಿಲ್ 1ರಿಂದ ಶೇಕಡ 12ರಷ್ಟು ಏರಿಕೆ ಕಾಣಲಿದೆ.

ಡಬ್ಲ್ಯೂಪಿಐ ಆಧಾರಿತ ನಿರ್ಧಾರ, ಏನಿದು?
ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ (ಎನ್‌ಎಲ್‌ಇಎಂ) ಇರುವ ಔಷಧಿಗಳ ಬೆಲೆಗಳಲ್ಲಿ ವಾರ್ಷಿಕ ಹೆಚ್ಚಳವು ಸಗಟು ಬೆಲೆ ಸೂಚ್ಯಂಕ ಅಥವಾ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಐ) ಅನ್ನು ಆಧರಿಸಿದೆ. ಈ ಬಗ್ಗೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಮಾರ್ಚ್ 25 ರಂದು ಹೇಳಿಕೆಯನ್ನು ನೀಡಿದೆ. 2022 ರ ಕ್ಯಾಲೆಂಡರ್ ವರ್ಷಕ್ಕೆ ಡಬ್ಲ್ಯೂಪಿಐನಲ್ಲಿ ವಾರ್ಷಿಕ ಬದಲಾವಣೆಯು ಶೇಕಡ 12.12ರಷ್ಟಿದೆ ಎಂದು ಹೇಳಿದೆ. ಕಳೆದ ವರ್ಷ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಸಗಟು ಬೆಲೆ ಸೂಚ್ಯಂಕದಲ್ಲಿ ಶೇಕಡ 10.7ರಷ್ಟು ಬದಲಾವಣೆಯನ್ನು ಘೋಷಣೆ ಮಾಡಿದೆ.
ಇನ್ನು ಪ್ರತಿ ವರ್ಷವೂ ಕೂಡ ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013, ಅಥವಾ ಡಿಪಿಸಿಒ, 2013ರ ಅನುಸಾರವಾಗಿ ಎನ್‌ಪಿಪಿಎ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯೂಪಿಐ) ಬದಲಾವಣೆಯನ್ನು ಪ್ರಕಟ ಮಾಡುತ್ತದೆ. ಮಾರುಕಟ್ಟಯಲ್ಲಿ ಔಷಧಿಗಳ ಕೊರತೆ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಬೆಲೆ ಏರಿಕೆಯನ್ನು ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಹಾಗೂ ಉತ್ಪಾದಕರಿಗೆ ಸರಿಯಾದ ಪ್ರಯೋಜನ ಲಭ್ಯವಾಗಲಿದೆ ಎಂದು ಕೂಡಾ ತಿಳಿಸಿದೆ.
"ಉತ್ಪಾದಕರು ಯಾವುದೇ ಔಷಧಿಯನ್ನು ನಷ್ಟದಲ್ಲಿ ಮಾರಾಟ ಮಾಡುವುದಿಲ್ಲ ಮತ್ತು ನಾವು ಇದೇ ಸಂದರ್ಭದಲ್ಲಿ ಭಾರತದಲ್ಲಿ ಅಗತ್ಯ ಔಷಧಿಗಳು ಸರಿಯಾದ ರೀತಿಯಲ್ಲಿ ಸರಬರಾಜು ಆಗುತ್ತಿದೆಯೇ ಎಂದು ಕೂಡಾ ನೋಡಿಕೊಳ್ಳಬೇಕಾಗುತ್ತದೆ. ಈ ಸ್ಥಿತಿಯನ್ನು ನಿಭಾಯಿಸಲು ದರವನ್ನು ಏರಿಕೆ ಮಾಡುವುದು ಮುಖ್ಯವಾಗುತ್ತದೆ," ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈ ಹಿಂದೆ ಶೇಕಡ 10ರಷ್ಟು ಏರಿಕೆಗೆ ಅವಕಾಶ ನೀಡಲಾಗಿತ್ತು, ಆದರೆ ಹಲವಾರು ಉತ್ಪಾದಕರು ದರವನ್ನು ಶೇಕಡ 5ರಷ್ಟು ಮಾತ್ರ ಹೆಚ್ಚಿಸಿದ್ದಾರೆ. ಇಂತಹ ಬೆಳವಣಿಗೆ ಈ ಬಾರಿಯೂ ಕಾಣುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂಬ ಮಾಹಿತಿ ಲಭಿಸಿದೆ.
ಏಪ್ರಿಲ್‌ನಿಂದ ಯಾವ ವಸ್ತುಗಳು ದುಬಾರಿ ಅಗ್ಗ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2023 ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಕೆಲವು ವಸ್ತುಗಳ ದರ ಏರಿಸಿದರೆ, ಕೆಲವು ವಸ್ತುಗಳ ದರ ಇಳಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದ ಆಭರಣಗಳು, ಛತ್ರಿಗಳು, ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ, ಸಿಗರೇಟ್, ವಿದೇಶಿ ವಾಹನ, ಬ್ರಾಂಡೆಡ್ ಬಟ್ಟೆ, ಹೆಡ್‌ಫೋನ್, ಇಯರ್‌ಫೋನ್, ಸ್ಮಾಟ್ ಮೀಟರ್‌ಗಳು, ಸೋಲಾರ್ ಸೆಲ್ಸ್, ಎಕ್ಸ್‌ರೇ ಮಿಷಿನ್, ವೈದ್ಯಕೀಯ ವಸ್ತುಗಳು, ಎಲೆಕ್ಟ್ರಾನಿಕ್ ಆಟದ ಸಾಮಾನು ದರ ಏರಿಕೆಯಾಗಲಿದೆ. ಇನ್ನು ಸಿಮೆಂಟ್ ಮತ್ತು ಉಕ್ಕು, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ, ಎಲೆಕ್ಟಿಕ್ ವಾಹನ, ಎಲೆಕ್ಟ್ರಿಕ್ ಚಿಮಣಿ, ಕ್ಯಾಮರಾ ಲೆನ್ಸ್, ಚಾರ್ಜರ್, ಇಂಗು, ಕೋಕೋ ಬೀನ್ಸ್, ಮೀಥೈಲ್, ಆಲ್ಕೋಹಾಲ್, ಕತ್ತರಿಸಿ ನಯಗೊಳಿಸಿದ ವಜ್ರಗಳ ದರ ಇಳಿಕೆಯಾಗಲಿದೆ.


Click it and Unblock the Notifications