ಭಾರತೀಯ ರಿಸರ್ವ್ ಬ್ಯಾಂಕ್ (RBI) ತೆಗೆದುಕೊಂಡ ಆ ಒಂದು ನಿರ್ಧಾರ, ಇಂದು ಬಹುತೇಕ ಬ್ಯಾಂಕ್‌ಗಳ ಸಾಲದಿಂದ ಹಿಡಿದು ಹೂಡಿಕೆ ಯೋಜನೆಗಳ ಬಡ್ಡಿದರದ ಕಡಿತಕ್ಕೆ ಕಾರಣವಾಗಿದೆ. ಹೌದು, ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಿದ ಬೆನ್ನಲ್ಲೇ, ದೇಶದ ಹಲವು ಪ್ರಮುಖ ಬ್ಯಾಂಕ್‌ಗಳು ತಮ್ಮ ಸ್ಥಿರ ಠೇವಣಿ (FD) ಬಡ್ಡಿದರಗಳನ್ನು ಪರಿಷ್ಕರಿಸಲು ಮುಂದಾಗಿವೆ. ಈ ಕ್ರಮವು ಎಫ್‌ಡಿ ಹೂಡಿಕೆದಾರರ ಆದಾಯದ ಮೇಲೆ ನೇರವಾಗಿ ಪೆಟ್ಟು ಬೀಳಲಿದೆ.

ಡಿಸೆಂಬರ್‌ನಲ್ಲಿ ನಡೆದ ತನ್ನ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಆರ್‌ಬಿಐ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು 25 ಮೂಲ ಅಂಕಗಳಷ್ಟು ಕಡಿಮೆಗೊಳಿಸಿದೆ. ಈ ನಿರ್ಧಾರದಿಂದಾಗಿ ಪ್ರಮುಖ ಬಡ್ಡಿದರವು ಹಿಂದಿನ 5.50% ರಿಂದ 5.25% ಕ್ಕೆ ಇಳಿದಿದೆ.
ಈ ದರ ಕಡಿತವು ಗೃಹ ಸಾಲಗಳಂತಹ ಸಾಲಗಳಿಗೆ ಅನುಕೂಲಕರವಾದರೆ, ಸ್ಥಿರ ಠೇವಣಿ ಹೂಡಿಕೆದಾರರಿಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ಗಳು ಸೇರಿದಂತೆ ಹಲವು ಬ್ಯಾಂಕ್‌ಗಳು ತಮ್ಮ ಎಫ್‌ಡಿ ಬಡ್ಡಿದರಗಳನ್ನು ಇಳಿಕೆ ಮಾಡಿವೆ. ಹೆಚ್ಚಿನ ಬ್ಯಾಂಕ್‌ಗಳು ಡಿಸೆಂಬರ್ 18 ರಿಂದ (HDFC ಡಿಸೆಂಬರ್ 17 ರಿಂದ) ಈ ಹೊಸ ದರಗಳನ್ನು ಜಾರಿಗೆ ತಂದಿವೆ. ಹಾಗಿದ್ರೆ ಯಾವೆಲ್ಲಾ ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಎಸ್‌ಬಿಐ, ತನ್ನ ಸ್ಥಿರ ಠೇವಣಿ (FD) ಬಡ್ಡಿದರಗಳಲ್ಲಿ ಭಾರೀ ಬದಲಾವಣೆ ತಂದಿದೆ. ಇನ್ಮೇಲೆ 5 ರಿಂದ 10 ವರ್ಷಗಳ ಅವಧಿಯ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ ಗರಿಷ್ಠ 6.5% ಹಾಗೂ ಹಿರಿಯ ನಾಗರಿಕರಿಗೆ 7.5% ಬಡ್ಡಿ ಸಿಗಲಿದೆ.
ಇತರ ಅವಧಿಗಳಿಗೆ ಪರಿಷ್ಕೃತ ದರಗಳು ಹೀಗಿವೆ: 1-2 ವರ್ಷಗಳಿಗೆ ಸಾಮಾನ್ಯರಿಗೆ 6.25% ಮತ್ತು ಹಿರಿಯರಿಗೆ 6.75%, 2-3 ವರ್ಷಗಳಿಗೆ ಸಾಮಾನ್ಯರಿಗೆ 6.4% ಮತ್ತು ಹಿರಿಯರಿಗೆ 6.9%, ಹಾಗೂ 3-5 ವರ್ಷಗಳಿಗೆ ಸಾಮಾನ್ಯರಿಗೆ 6.3% ಮತ್ತು ಹಿರಿಯರಿಗೆ 6.8% ಬಡ್ಡಿ ಲಭ್ಯವಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್:
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ಕೂಡಾ ತನ್ನ ಎಫ್‌ಡಿ ದರಗಳನ್ನು ಡಿಸೆಂಬರ್ 17 ರಿಂದ ಪರಿಷ್ಕರಿಸಿದೆ. 5 ರಿಂದ 10 ವರ್ಷಗಳ ದೀರ್ಘಾವಧಿಯ ಎಫ್‌ಡಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ 6.15% ಹಾಗೂ ಹಿರಿಯ ನಾಗರಿಕರಿಗೆ 6.65% ಬಡ್ಡಿದರವನ್ನು ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೇ ಈ ಬ್ಯಾಂಕ್ ಎಲ್ಲಾ ಅವಧಿಗಳ ಬಡ್ಡಿದರಗಳನ್ನು ಕಡಿಮೆ ಮಾಡಿದೆ.
ಅಲ್ಲದೇ, 18 ತಿಂಗಳಿಂದ 3 ವರ್ಷಗಳೊಳಗಿನ ಐದು ನಿರ್ದಿಷ್ಟ ಅವಧಿಗಳಿಗೆ (ಉದಾಹರಣೆಗೆ, 18 ತಿಂಗಳಿಂದ 21 ತಿಂಗಳಿಗಿಂತ ಕಡಿಮೆ, 35 ತಿಂಗಳು) ಬ್ಯಾಂಕ್ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದೆ. ಈ ಅವಧಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ 6.45% ಮತ್ತು ಹಿರಿಯ ನಾಗರಿಕರಿಗೆ 6.95% ಬಡ್ಡಿದರ ಲಭ್ಯವಿದೆ.
ಕೆನರಾ ಬ್ಯಾಂಕ್: ಸಾರ್ವಜನಿಕ ವಲಯದಲ್ಲಿ ಭಾರೀ ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಎಂದರೆ ಅದು ಕೆನರಾ ಬ್ಯಾಂಕ್. ಈ ಬ್ಯಾಂಕ್ ಕೂಡ ತನ್ನ ₹3 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ದರಗಳನ್ನು ಪರಿಷ್ಕರಿಸಿದೆ. 555 ದಿನಗಳ ಅವಧಿಯ ಎಫ್‌ಡಿಯಲ್ಲಿ ಸಾಮಾನ್ಯ ಹೂಡಿಕೆದಾರರಿಗೆ 6.15% ಮತ್ತು ಹಿರಿಯ ನಾಗರಿಕರಿಗೆ 6.65% ಗರಿಷ್ಠ ಬಡ್ಡಿದರ ನೀಡುತ್ತದೆ. 444 ದಿನಗಳ ಎಫ್‌ಡಿಗಳಿಗೆ ಸಾಮಾನ್ಯರಿಗೆ 6% ಮತ್ತು ಹಿರಿಯರಿಗೆ 6.5% ಬಡ್ಡಿ ಲಭ್ಯವಿದೆ ಎಂದು ವರದಿಯಾಗಿದೆ..
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ₹3 ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರಗಳನ್ನು ಇಳಿಸಿದೆ. 10 ವರ್ಷಗಳವರೆಗಿನ ದೀರ್ಘಾವಧಿಯ ಎಫ್‌ಡಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ 6.6% ಮತ್ತು ಹಿರಿಯ ನಾಗರಿಕರಿಗೆ 7.1% ಬಡ್ಡಿದರಗಳನ್ನು ಬ್ಯಾಂಕ್ ನೀಡುತ್ತಿದೆ.
ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್ ₹3 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (FD) ಬಡ್ಡಿದರಗಳನ್ನು ಡಿಸೆಂಬರ್ 18 ರಿಂದ ಪರಿಷ್ಕರಿಸಿದೆ. ಬ್ಯಾಂಕಿನ ನಿರ್ಧಾರದ ಪ್ರಕಾರ, ಸಾಮಾನ್ಯರಿಗೆ 3% ರಿಂದ 6.60% ವರೆಗೆ ಹಾಗೂ ಹಿರಿಯರಿಗೆ 3.50% ರಿಂದ 7.35% ವರೆಗೆ ದರಗಳು ಲಭ್ಯವಿವೆ.
ಈ ಪರಿಷ್ಕೃತ ದರಗಳಲ್ಲಿ, 5 ರಿಂದ 10 ವರ್ಷಗಳವರೆಗಿನ ದೀರ್ಘಾವಧಿಯ ಎಫ್‌ಡಿಗಳು ಗರಿಷ್ಠ ಬಡ್ಡಿದರಗಳನ್ನು ನೀಡಲಿದೆ. ಈ ಅವಧಿಯಲ್ಲಿ ಸಾಮಾನ್ಯ ಹೂಡಿಕೆದಾರರಿಗೆ 6.6% ಹಾಗೂ ಹಿರಿಯ ನಾಗರಿಕರಿಗೆ 7.35% ಬಡ್ಡಿದರ ನೀಡಲಾಗುತ್ತದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಇತರ ಅವಧಿಗಳ ದರಗಳನ್ನೂ ಪರಿಷ್ಕರಿಸಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications