ಯಾವುದೇ ಹಣಕಾಸಿನ ತೊಂದರೆ ಉಂಟಾದಾಗ ನಮ್ಮ ಮುಂದೆ ಬರುವ ಅಂತಿಮ ಆಯ್ಕೆಯೇ ಸಾಲವಾಗಿದೆ. ಸಾಲ ಎಂಬುವುದು ನಮ್ಮ ಕೊನೆಯ ಆಯ್ಕೆಯಾದರೂ ಕೂಡಾ ಕೈ ಸಾಲ ಪಡೆಯುವುದೇ, ಬ್ಯಾಂಕ್‌ನಿಂದ ವೈಯಕ್ತಿಕ ಸಾಲ ಪಡೆಯುವುದೇ, ಆಪ್‌ಗಳ ಮೂಲಕ ತ್ವರಿತ ಸಾಲ ಪಡೆಯವುದೇ ಎಂಬ ಗೊಂದಲಗಳು ನಮ್ಮ ಮುಂದೆ ಇರುತ್ತದೆ. ಈ ಸಂದರ್ಭದಲ್ಲಿ ನಮ್ಮ ಉತ್ತಮ, ಸರಳ, ಶೀಘ್ರ ಮಾರ್ಗವೇ ಚಿನ್ನ ಅಡವಿಟ್ಟು ಸಾಲ ಪಡೆಯುವುದು ಆಗಿದೆ.
ಆದರೂ ತಮ್ಮ ಚಿನ್ನವನ್ನು ಮೇಲಾಧಾರವಾಗಿ ಬಳಸಿದರೆ ಅಪಾಯ ಎಂಬ ಆತಂಕವೂ ಕೂಡಾ ಜನರಲ್ಲಿದೆ. ಆದರೆ ನೀವು ಸಾಲ ಪಡೆಯುವ ವೇಳೆ ನೀವು ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ಬಳಿಕ ನಿಮ್ಮ ಚಿನ್ನ ನಿಮಗೆ ವಾಪಾಸ್ ಲಭ್ಯವಾಗಲಿದೆಯೇ ಎಂಬುವುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ನಂಬಿಕಾರ್ಹ ಬ್ಯಾಂಕ್‌ಗಳಲ್ಲಿ ಮಾತ್ರ ಚಿನ್ನ ಅಡವಿಟ್ಟು ಸಾಲವನ್ನು ಪಡೆಯಿರಿ. ಚಿನ್ನವನ್ನು ಅಡಿವಿಟ್ಟು ಸಾಲ ಪಡೆಯುವ ವೇಳೆ ನೀವು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿದೆ ಮುಂದೆ ಓದಿ...

ಚಿನ್ನದ ಸಾಲವನ್ನು ಪಡೆಯುವ ವೇಳೆ ಗಮನಿಸಬೇಕಾದ ಅಂಶಗಳು
ಬಡ್ಡಿದರದ ಮಾಹಿತಿ: ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲಕ್ಕೆ ಎಷ್ಟು ಬಡ್ಡಿದರವಿದೆ ಎಂದು ನೀವು ತುಲನೆ ಮಾಡಿಕೊಳ್ಳಿ. ಎಲ್ಲ ಬ್ಯಾಂಕ್‌ಗಳ ಬಡ್ಡಿದರವನ್ನು ಹೋಲಿಕೆ ಮಾಡಿಕೊಂಡು, ಎಲ್ಲಿ ಕಡಿಮೆ ಬಡ್ಡಿದರದಲ್ಲಿ ಚಿನ್ನವನ್ನು ಅಡವಿಟ್ಟುಕೊಂಡು ಸಾಲವನ್ನು ನೀಡುತ್ತಾರೋ ಅದನ್ನು ಆಯ್ಕೆ ಮಾಡಿಕೊಳ್ಳಿ.
ಲೋನ್-ಟು-ವ್ಯಾಲ್ಯೂ (ಎಲ್‌ಟಿವಿ) ರೆಷಿಯೋ: ಚಿನ್ನದ ಮೇಲೆ ನೀವು ಪಡೆಯಬಹುದಾದ ಗರಿಷ್ಠ ಪ್ರಮಾಣದ ಸಾಲದ ಮೊತ್ತಕ್ಕೆ ಎಲ್‌ಟಿವಿ ಅಥವಾ ಲೋನ್-ಟು-ವ್ಯಾಲ್ಯೂ ರೆಷಿಯೋ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಎಲ್‌ಟಿವಿ ರೆಷಿಯೋ ಹೇಗಿದೆ ಎಂದು ನೋಡಿಕೊಳ್ಳಿ, ಯಾವ ಬ್ಯಾಂಕ್‌ನಲ್ಲಿ ಅಧಿಕ ಎಲ್‌ಟಿವಿ ರೆಷಿಯೋವನ್ನು ಇರುತ್ತದೆಯೋ ಆ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯಿರಿ.
ಪ್ರಕ್ರಿಯೆ ಶುಲ್ಕ, ಮರುಪಾವತಿ ಅವಧಿ: ಕೆಲವೆಡೆ ಚಿನ್ನದ ಸಾಲಕ್ಕೆ ಕಡಿಮೆ ಬಡ್ಡಿದರ ಇದ್ದರೂ ಕೂಡಾ ಪ್ರಕ್ರಿಯೆ ಶುಲ್ಕ ಅಧಿಕವಾಗಿರಬಹುದು. ಅದಕ್ಕಾಗಿ ನೀವು ಎಲ್ಲಿ ಕಡಿಮೆ ಬಡ್ಡಿದರವಿದೆ ಎಂದು ನೋಡುವ ಜೊತೆಗೆಯೇ ಎಲ್ಲಿ ಪ್ರಕ್ರಿಯೆ ಶುಲ್ಕ ಕಡಿಮೆ ಎಂದು ನೋಡಬೇಕಾಗುತ್ತದೆ. ಯಾವ ಬ್ಯಾಂಕ್‌ನಲ್ಲಿ ಅಥವಾ ಹಣಕಾಸು ಸಂಸ್ಥೆ/ ಫೈನಾನ್ಸ್‌ಗಳಲ್ಲಿ ಕಡಿಮೆ ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುತ್ತದೆಯೋ ಎಂದು ನೋಡಿಕೊಂಡು ಚಿನ್ನ ಅಡವಿಟ್ಟು ಸಾಲವನ್ನು ಪಡೆಯಿರಿ. ಹಾಗೆಯೇ ಸಾಲ ಮರುಪಾವತಿ ಅವಧಿಯನ್ನು ಕೂಡಾ ತುಲನೆ ಮಾಡಿಕೊಳ್ಳಿ.
ಸಾಲ ನೀಡುವವರ ವಿಶ್ವಾಸಾರ್ಹತೆ: ನೀವು ಅಸಂಘಟಿತ ವಲಯದಲ್ಲಿ ಸಾವನ್ನು ಪಡೆಯುವುದಕ್ಕಿಂತ ನೀವು ಸಂಘಟಿತ ವಲಯದಲ್ಲಿ ಸಾಲವನ್ನು ಪಡೆಯುವುದು ಉತ್ತಮ. ನೀವು ಸರ್ಕಾರಿ, ಕೇಂದ್ರ ಬ್ಯಾಂಕ್‌ಗಳಲ್ಲಿ ಸಾಲವನ್ನು ಪಡೆಯುವುದು ಉತ್ತಮ.
ಚಿನ್ನದ ಸಾಲವನ್ನು ತೆಗೆದುಕೊಳ್ಳುವಾಗ ನೀವು ಪರಿಗಣಿಸಬೇಕಾದ ಕೆಲವು ಸಲಹೆಗಳು ಮೇಲೆ ತಿಳಿಸಲಾಗಿದೆ. ಈಗ 2023 ರಲ್ಲಿ ಚಿನ್ನದ ಸಾಲದ ಬಡ್ಡಿದರಗಳ ಹೋಲಿಕೆಯನ್ನು ನೋಡೋಣ
ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲದ ಬಡ್ಡಿದರ
ಆಕ್ಸಿಸ್ ಬ್ಯಾಂಕ್ ಚಿನ್ನದ ಸಾಲ: ಬಡ್ಡಿದರ ಶೇಕಡ 13.50ಯಿಂದ ಶೇಕಡ 16.95, ಸಾಲದ ಮೊತ್ತ 25,001 ರೂಪಾಯಿಯಿಂದ 25 ಲಕ್ಷ ರೂಪಾಯಿ
ಎಚ್‌ಡಿಎಫ್‌ಸಿ ಚಿನ್ನದ ಸಾಲ: ಬಡ್ಡಿದರ ಶೇಕಡ 11ರಿಂದ ಶೇಕಡ 16, ಸಾಲದ ಮೊತ್ತ 10000 ರೂಪಾಯಿಯಿಂದ ಆರಂಭ
ಕೆನರಾ ಬ್ಯಾಂಕ್ ಚಿನ್ನದ ಸಾಲ: ಬಡ್ಡಿದರ ಶೇಕಡ 7.5, ಸಾಲದ ಮೊತ್ತ 5000 ರೂಪಾಯಿಯಿಂದ 35 ಲಕ್ಷ ರೂಪಾಯಿವರೆಗೆ
ಮುತ್ತೂಟ್ ಗೋಲ್ಡ್ ಫೈನಾನ್ಸ್: ಸಾಲದ ಬಡ್ಡಿದರ ಶೇಕಡ 12ರಿಂದ 26, ಸಾಲದ ಮೊತ್ತ 10000 ರೂಪಾಯಿಯಿಂದ ಆರಂಭ
ಎಸ್‌ಬಿಐ ಚಿನ್ನದ ಸಾಲ: ಬಡ್ಡಿದರ ಶೇಕಡ 7ರಿಂದ ಆರಂಭ, ಸಾಲದ ಮೊತ್ತ 20000 ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗೆ ಇರಲಿದೆ
ಕೋಟಕ್ ಮಹೀಂದ್ರಾ ಚಿನ್ನದ ಸಾಲ: ಬಡ್ಡಿದರ ಶೇಕಡ 10ರಿಂದ ಶೇಕಡ 17, ಸಾಲದ ಮೊತ್ತ 20 ಸಾವಿರ ರೂಪಾಯಿಯಿಂದ 1.5 ಕೋಟಿ ರೂಪಾಯಿವರೆಗಿನ ಮೊತ್ತ
ಇಂಡಸ್‌ಇಂಡ್ ಬ್ಯಾಂಕ್ ಚಿನ್ನದ ಸಾಲ: ಬಡ್ಡಿದರ ಶೇಕಡ 11.50ಯಿಂದ ಶೇಕಡ 16ರವರೆಗೆ, 10 ಲಕ್ಷ ರೂಪಾಯಿವರೆಗೆ ಸಾಲ ಲಭ್ಯ


Click it and Unblock the Notifications