ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೊನಾ ಪಾಸಿಟಿವ್ ಆಗಿದೆ. ಚಿನ್ನದ ದರ ಔನ್ಸ್ ಗೆ (28.3495 ಗ್ರಾಮ್) $ 1900 ಮೇಲ್ಪಟ್ಟು ವಹಿವಾಟು ನಡೆಸುತ್ತಿದೆ. ದಿಢೀರ್ ಆಗಿ ಡಾಲರ್ ಮೌಲ್ಯದಲ್ಲಿ ಸ್ಥಿರತೆ ಕಂಡುಬರುತ್ತಿದೆ. ಇದೀಗ 2020ನೇ ಇಸವಿಯ ಕೊನೆ ತ್ರೈಮಾಸಿಕದಲ್ಲಿ (ಅಕ್ಟೋಬರ್ ನಿಂದ ಡಿಸೆಂಬರ್) ನಾವಿದ್ದೀವಿ.
ಕಳೆದ ಆಗಸ್ಟ್ ನಲ್ಲಿ ಅದ್ಭುತವಾದ ಎತ್ತರ ಕಂಡಿದ್ದ ಚಿನ್ನ, ಬಹಳ ವರ್ಷದ ನಂತರ ಹೂಡಿಕೆ ಮೇಲೆ ಕಂಡರಿಯದ ರಿಟರ್ನ್ಸ್ ನೀಡಿತ್ತು. ಮುಂದಿನ ಮೂರು ತಿಂಗಳು ಚಿನ್ನದ ಬೆಲೆ ಏನಾಗಬಹುದು ಎಂಬ ಕುತೂಹಲ ಸಹಜವಾದದ್ದು. ಚಿನ್ನದ ದರದ ಮೇಲೆ ಪ್ರಭಾವ ಬೀರಬಹುದಾದ ಅಂಶಗಳು ಯಾವುವು ಎಂಬುದರ ಮೇಲೆ ವಿಶ್ಲೇಷಕರು ಬೆಳಕು ಚೆಲ್ಲಿದ್ದಾರೆ. ಆ ವಿವರಣೆ ಇಲ್ಲಿದೆ.
ಕೊರೊನಾ ಹತೋಟಿಗೆ ಬಂದಿಲ್ಲ
ಕೊರೊನಾ ಬಿಕ್ಕಟ್ಟು ತಹಬದಿಗೆ ಬರುತ್ತಿಲ್ಲ. ಯುರೋಪ್ ಮತ್ತು ಯುಎಸ್ ನ ಕೆಲವು ನಗರಗಳಲ್ಲಿ ಇನ್ನೂ ಮೇಲ್ಮುಖವಾಗಿಯೇ ಇದೆ. ಸರ್ಕಾರಗಳು ಸಂಪೂರ್ಣ ಲಾಕ್ ಡೌನ್ ಗೆ ಆಲೋಚಿಸುತ್ತಿವೆ. ಅಂಥ ಯಾವುದೇ ಬೆಳವಣಿಗೆಯಾದರೂ ಜಾಗತಿಕ ಆರ್ಥಿಕತೆ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಚೇತರಿಕೆಗೆ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 1 ಲಕ್ಷ ದಾಟಿದೆ. ಅತಿ ಹೆಚ್ಚು ಸಾವು ಕಂಡ ದೇಶ ಭಾರತ ಎಂದು ಕೊರೊನಾದಿಂದ ಸಂಕಷ್ಟಕ್ಕೀಡಾದ ದೇಶಗಳ ಪಟ್ಟಿಯಲ್ಲಿ ಮೇಲುಗಡೆಯೇ ಕಾಣಿಸಿಕೊಂಡಿದೆ.
ಆರ್ಥಿಕ ಉತ್ತೇಜನ ಬಿಡುಗಡೆ ಅನಿಶ್ಚಿತತೆ
ಯುಎಸ್ ನಲ್ಲಿ ಕೊರೊನಾ ಆರ್ಥಿಕ ಉತ್ತೇಜನದ ಎರಡನೇ ಪ್ಯಾಕೇಜ್ ಬಿಡುಗಡೆಗೆ ಪ್ರಯತ್ನ ನಡೆಯುತ್ತಲೇ ಇದೆ. ಇನ್ನೂ ಮಾತುಕತೆ ಹಂತದಲ್ಲೇ ಇರುವುದರಿಂದ ಹಾಗೂ ಯಾವುದೇ ನಿರ್ಧಾರ ಮಾಡದಿರುವುದರಿಂದ ಅನಿಶ್ಚಿತತೆ ಮುಂದುವರಿದಿದೆ. ಈ ಕಾರಣಕ್ಕೆ ಹೂಡಿಕೆದಾರರಲ್ಲಿ ಆತಂಕ ಮುಂದುವರಿದಿದೆ.
ಬ್ರೆಕ್ಸಿಟ್ ಬಗೆಹರಿಯದ ಗೊಂದಲ
ಯುನೈಟೆಡ್ ಕಿಂಗ್ ಡಮ್ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಎರಡೂ ಸೇರಿ ಬ್ರೆಕ್ಸಿಟ್ ನಂತರದ ವ್ಯಾಪಾರ ಒಪ್ಪಂದ ವಿಚಾರವಾಗಿ ಪ್ರಕ್ರಿಯೆಗಳನ್ನು ನಡೆಸುತ್ತಿವೆ. ಯುನೈಟೆಡ್ ಕಿಂಗ್ ಡಮ್ ಮುಂದಿಟ್ಟಿರುವ ಆಂತರಿಕ ಮಾರುಕಟ್ಟೆ ಮಸೂದೆಯಿಂದಾಗಿ ಅನಿಶ್ಚಿತತೆ ಮತ್ತೂ ಹೆಚ್ಚಾಗಿದೆ.
ಯುಎಸ್- ಚೀನಾ ಮಧ್ಯ ವಾಣಿಜ್ಯ ಉದ್ವಿಗ್ನತೆ ಮುಂದುವರಿದಿದೆ
ಕಳೆದ ವರ್ಷ ಚಿನ್ನದ ಬೆಲೆ ಮೇಲೇರಲು ಅತಿ ಮುಖ್ಯ ಕಾರಣ ಆಗಿದ್ದು ಯುಎಸ್- ಚೀನಾ ವಾಣಿಜ್ಯ ಉದ್ವಿಗ್ನತೆ. ಆದರೆ ಈ ವರ್ಷವೂ ಅದು ಮುಂದುವರಿದಿದೆ. ಆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕೂಡ ಕಂಡುಬರುತ್ತಿಲ್ಲ. ಈ ವರ್ಷದ ಆರಂಭದಕಲ್ಲಿ ಎರಡೂ ದೇಶಗಳ ಮಧ್ಯೆ ಆಗಿದ್ದ ಭಾಗಶಃ ವ್ಯವಹಾರ ಒಪ್ಪಂದಕ್ಕೆ ಕೂಡ ಆತಂಕ ಇದೆ.
ಯುಎಸ್ ಅಧ್ಯಕ್ಷೀಯ ಚುನಾವಣೆ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೊನಾ ಪಾಸಿಟಿವ್ ಆಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಮೊದಲ ಸಂವಾದ ಟ್ರಂಪ್ ಹಾಗೂ ಜೋ ಬಿಡೆನ್ ಮಧ್ಯೆ ಭಾರೀ ಕಾವೇರಿಸಿತ್ತು. ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಗ್ಗೆಯೇ ಅನಿಶ್ಚಿತತೆ ಎದುರಾಗಿದೆ.
ಈ ಎಲ್ಲ ಪ್ರಭಾವ ಇರುತ್ತದೆ
ಜಾಗತಿಕ ವಿದ್ಯಮಾನಗಳ ಪ್ರಭಾವವು ಚಿನ್ನದ ಬೆಲೆ ನಿಗದಿ ಆಗುವಲ್ಲಿ ಇದ್ದೇ ಇರುತ್ತದೆ. ಈ ಮೇಲ್ಕಂಡ ವಿದ್ಯಮಾನಗಳು ಚಿನ್ನದ ಬೆಲೆ ನಿರ್ಧಾರ ಆಗುವಲ್ಲಿ ಪ್ರಮುಖ ಆಗುತ್ತವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಬಂದಾಕ್ಷಣ ಯುಎಸ್ ಷೇರು ಮಾರ್ಕೆಟ್ ನಲ್ಲಿ ತಲ್ಲಣ ಆಯಿತು. ಅದೇ ರೀತಿ ವಿವಿಧ ಸುದ್ದಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications