ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು1977-78 ರ ನಂತರದ ಅತ್ಯಂತ ಕಡಿಮೆ ದರಕ್ಕೆ ಇಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಪ್ರಸ್ತಾವನೆಗೆ ಕೇಂದ ಸರ್ಕಾರ ಇಂದು ಸಮ್ಮತಿ ನೀಡಿದೆ.
2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಪಿಎಫ್‌ಒ ಇಳಿಕೆ ಮಾಡಿ ಮಾರ್ಚ್ 12ರಂದು ಪ್ರಕಟಣೆ ನೀಡಿತ್ತು. ಸುಮಾರು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಲು ಇಪಿಎಫ್ಒ ನಿರ್ಧರಿಸಿತ್ತು. ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಇಪಿಎಫ್‌ಒ ಕಚೇರಿ ಶುಕ್ರವಾರ(ಜೂನ್ 03)ದಂದು ಹೊರಡಿಸಿದ ಆದೇಶದ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿ ಸದಸ್ಯರಿಗೆ 2021-22 ಕ್ಕೆ ಶೇ 8.1 ಬಡ್ಡಿದರವನ್ನು ಕ್ರೆಡಿಟ್ ಮಾಡಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ರವಾನಿಸಿದೆ. ಕಾರ್ಮಿಕ ಸಚಿವಾಲಯವು ತನ್ನ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.
ಈಗ, ಸರ್ಕಾರವು ಬಡ್ಡಿದರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ಆರ್ಥಿಕ ವರ್ಷಕ್ಕೆ ನಿಗದಿತ ಬಡ್ಡಿದರವನ್ನು ಇಪಿಎಫ್ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸುತ್ತದೆ.
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ)
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಮಾರ್ಚ್ 2021 ರಲ್ಲಿ 2020-21 ಕ್ಕೆ ಇಪಿಎಫ್ ಠೇವಣಿಗಳ ಮೇಲೆ 8.5 ಶೇಕಡಾ ಬಡ್ಡಿ ದರವನ್ನು ನಿಗದಿಪಡಿಸಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವರು ಅನುಮೋದಿಸಿದ್ದಾರೆ. 8.5 ಶೇಕಡಾ ಬಡ್ಡಿಯನ್ನು ಪಿಎಫ್ ಖಾತೆದಾರರ ಖಾತೆಗೆ ಜಮೆ ಮಾಡಲು ಇಪಿಎಫ್‌ಒ ಕ್ಷೇತ್ರ ಕಚೇರಿಗಳಿಗೆ ಸೂಚನೆ ನೀಡಿತ್ತು.
ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಲಾಗಿದೆ. ಈಗ ಇದನ್ನು ಇನ್ನೂ ಕೂಡಾ ಕಡಿಮೆ ಮಾಡಲಾಗಿದೆ. ಸುಮಾರು ನಾಲ್ಕು ದಶಕಗಳ ಬಳಿಕ ಬಡ್ಡಿದರವನ್ನು ಇಷ್ಟು ಮಟ್ಟಕ್ಕೆ ಕಡಿತ ಮಾಡಲಾಗಿದೆ ಎಂದು ಮೂಲಗಳು ಹೇಳಿದೆ.
2018-19 ರಲ್ಲಿ 8.65 ಪ್ರತಿಶತ ಬಡ್ಡಿದರ
2018-19 ರಲ್ಲಿ 8.65 ಪ್ರತಿಶತ ಬಡ್ಡಿದರವಿತ್ತು. ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ 2021-22 ರ ಹೊಸ ದರದಲ್ಲಿ 8.1 ಶೇಕಡಾ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಲ್ಲಿ ಕ್ರೆಡಿಟ್ ಮಾಡಲು ನಿರ್ದೇಶನ ನೀಡಲಿದೆ.
ಕಳೆದ ಡಿಸೆಂಬರ್‌ನಲ್ಲಿ ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಪಿಎಫ್ ಬಡ್ಡಿದರ ಶೇಕಡಾ 8.50 ಜಮೆ ಮಾಡಲಾಗಿದೆ. 2020-21 ರ ಹಣಕಾಸು ವರ್ಷದ ಪಿಎಫ್ ಬಡ್ಡಿದರವು ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಜಮೆ ಮಾಡಲಾಗಿದೆ.
ಇಪಿಎಫ್ ಖಾತೆಯ ಬ್ಯಾಲೆನ್ಸ್
ನೀವು ನಿಮ್ಮ ಇಪಿಎಫ್ ಖಾತೆಯಲ್ಲಿ ಬಡ್ಡಿ ದರವು ಜಮೆ ಆಗಿದೆಯೇ ಎಂದು ತಿಳಿಯಲು ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲನೆ ಮಾಡುವುದು ಅತೀ ಮುಖ್ಯವಾಗಿದೆ. ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ನಾವು ಹಲವಾರು ರೀತಿಗಳಲ್ಲಿ, ವಿವಿಧ ಮೂಲಗಳಿಂದ ಪರಿಶೀಲನೆ ಮಾಡಬಹುದು. ನೀವು ನಿಮ್ಮ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್, ಮಿಸ್ಡ್ ಕಾಲ್, ಆನ್‌ಲೈನ್ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಹಾಗೆಯೇ ಉಮಾಂಗ್ ಆಪ್ ಮೂಲಕವೂ ನೀವು ಬ್ಯಾಲೆನ್ಸ್ ಅನ್ನು ಪರಿಶೀಲನೆ ಮಾಡಬಹುದು.
ಪಿಎಫ್ ಬಡ್ಡಿದರವನ್ನು ಕಡಿತ ಮಾಡುತ್ತಾ ಬರಲಾಗಿದೆ
ಕಳೆದ ಕೆಲವು ವರ್ಷಗಳಲ್ಲಿ ಪಿಎಫ್ ಬಡ್ಡಿದರವನ್ನು ಕಡಿತ ಮಾಡುತ್ತಾ ಬರಲಾಗಿದೆ. 2020-2021ರಲ್ಲಿ ಶೇಕಡ 8.50,
2019-2020ರಲ್ಲಿ ಶೇಕಡ 8.50,
2018-2019ರಲ್ಲಿ ಶೇಕಡ 8.65,
2017-2018ರಲ್ಲಿ ಶೇಕಡ 8.55,
2016-2017ರಲ್ಲಿ ಶೇಕಡ 8.65,
2015-2016ರಲ್ಲಿ ಶೇಕಡ 8.80,
2013-2015ರಲ್ಲಿ ಶೇಕಡ 8.75,
2012-2013ರಲ್ಲಿ ಶೇಕಡ 8.50,
2011-2012ರಲ್ಲಿ ಶೇಕಡ 8.25,
2010-2011ರಲ್ಲಿ ಶೇಕಡ 9.50,
2005-2006 ರಿಂದ 2009-2010ರಲ್ಲಿ ಶೇಕಡ 8.50 ಬಡ್ಡಿದರವನ್ನು ವಿಧಿಸಲಾಗಿದೆ, 2020-21 ಕ್ಕೆ ಇಪಿಎಫ್ ಠೇವಣಿಗಳ ಮೇಲೆ 8.5 ಶೇಕಡಾ ಬಡ್ಡಿ ದರ ಹಾಗೂ ಈಗ ಶೇಕಡಾ 8.1 ಕ್ಕೆ ಇಳಿಸಲಾಗಿದೆ. (ಪಿಟಿಐ)


Click it and Unblock the Notifications