ಮಹತ್ವಾಕಾಂಕ್ಷೆಯ ಐದು ಖಾತರಿ ಯೋಜನೆಗಳಲ್ಲಿ ಒಂದಾದ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಮೊತ್ತವು ಇನ್ನೂ ಕೂಡಾ ಹಲವಾರು ಜನರ ಖಾತೆಗೆ ಜಮೆಯಾಗಿಲ್ಲ ಎಂದು ವರದಿಗಳು ಹೇಳುತ್ತದೆ. ಆದರೆ ಈ ಮೊತ್ತ ಯಾವ ದಿನಾಂಕದೊಳಗೆ ನಿಮ್ಮ ಖಾತೆಗೆ ಜಮೆಯಾಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಡಿ ಹಣ ವರ್ಗಾವಣೆ ವಿಳಂಬವಾಗುತ್ತಿದೆ. ಈ ಮಧ್ಯೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 'ತಾಂತ್ರಿಕ ಸಮಸ್ಯೆ' ಯಿಂದಾಗಿ ಈ ಪ್ರಕ್ರಿಯೆಯು ತಡವಾಗುತ್ತಿದೆ. ಇಲಾಖೆಯು ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಹೇಳಿ, ಪ್ರತಿ ತಿಂಗಳು ಹಣ ಜಮೆಯಾಗುವ ದಿನಾಂಕವನ್ನು ತಿಳಿಸಿದ್ದಾರೆ.

ಪ್ರತಿ ತಿಂಗಳು ಗೃಹ ಲಕ್ಷ್ಮೀ ಮೊತ್ತ ಯಾವಾಗ ಜಮೆ?
ಪ್ರತಿ ತಿಂಗಳು ದಿನಾಂಕ 15-20 ರ ಒಳಗಾಗಿ ಗೃಹ ಲಕ್ಷ್ಮೀ ಯೋಜನೆಯ ಮೊತ್ತವು ವರ್ಗಾವಣೆ ಮಾಡಲಾಗುತ್ತದೆ ಎಂದು ಹಣಕಾಸು ಇಲಾಖೆ ಭರವಸೆ ನೀಡಿದೆ ಎಂದು ಸಚಿವರು ತಿಳಿಸಿದರು. ಈ ನಡುವೆ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕರ್ನಾಟಕ ಕಾಂಗ್ರೆಸ್‌ನ 'ಗೃಹ ಲಕ್ಷ್ಮಿ' ಯೋಜನೆಯ ಮೊದಲ ಕಂತಿನ ಮೊತ್ತವನ್ನೇ ಪಡೆದಿಲ್ಲ ಎಂಬ ಆರೋಪವು ಇದೆ.
ಕರ್ನಾಟಕ ಸರ್ಕಾರವು ಆಗಸ್ಟ್ 30 ರಂದು ಯೋಜನೆಯನ್ನು ಆರಂಭ ಮಾಡಿದೆ. ಆದರೆ ಹಣವನ್ನು ವರ್ಗಾಯಿಸುವಲ್ಲಿ ಹಲವಾರು ಅಡೆತಡೆಗಳನ್ನು ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ಇಲಾಖೆಯು ಗೃಹ ಲಕ್ಷ್ಮೀ ಮೊತ್ತ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತುದೆ," ಎಂದು ತಿಳಿಸಿದರು.
"ಸರ್ಕಾರವು ಈ ತಿಂಗಳು 1.10 ಕೋಟಿ ಜನರಿಗೆ ಹಣ ಬಿಡುಗಡೆ ಮಾಡಿದೆ. ಕೆವೈಸಿ ವಿವರಗಳು ಮತ್ತು ಇ-ಗವರ್ನೆಸ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ವಿಳಂಬಗಳು ಆಗಿದೆ. ಮೊದಲ ಕಂತಿನಲ್ಲಿ ಹಣ ಯಾರ ಖಾತೆಗೆ ಜಮೆಯಾಗಿಲ್ಲವೋ ಅವರು ಎರಡು ಕಂತುಗಳ ಮೊತ್ತವನ್ನು ಒಂದೇ ಬಾರಿ ಪಡೆಯುತ್ತಿದ್ದಾರೆ," ಎಂದು ಮಾಹಿತಿ ನೀಡಿದರು.
"ನಾವು ಎಲ್ಲಾ ಬ್ಯಾಂಕ್‌ಗಳು ಮತ್ತು ನಮ್ಮ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದೇವೆ. ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದ್ದೇವೆ," ಎಂದು ಹೇಳಿದ ಸಚಿವೆ, ಪ್ರತಿ ತಿಂಗಳು ದಿನಾಂಕ 15-20 ರ ನಡುವೆ ಹಣ ವರ್ಗಾವಣೆ ಮಾಡುವ ಹಣಕಾಸು ಇಲಾಖೆಯ ಸುತ್ತೋಲೆಯನ್ನು ಸ್ವಾಗತಿಸಿದರು.
ಜನರಿಗೆ ಸಹಾಯ ಎಂದ ಸಚಿವೆ
"ಹಣಕಾಸು ಇಲಾಖೆಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಹಣ ವರ್ಗಾವಣೆ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಬಾರದು. ಯಾವ ದಿನಾಂಕದಲ್ಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ಸ್ಪಷ್ಟ ನಿರ್ಧಾರವು, ಜನರು ಯಾವಾಗ ಹಣವನ್ನು ಪಡೆಯಬಹುದು ಎಂದು ತಿಳಿಯಲು ಸಹಾಯವಾಗುತ್ತದೆ," ಎಂದು ಸಚಿವೆ ಅಭಿಪ್ರಾಯಿಸಿದರು.
"ಹಣ ವರ್ಗಾವಣೆಯಲ್ಲಿ ಹಲವಾರು ಗೊಂದಲಗಳು ಇದೆ. ಆದ್ದರಿಂದಾಗಿ ಮಹಿಳೆಯರು ಆಗಾಗ ಬ್ಯಾಂಕ್‌ಗೆ ಹೋಗುತ್ತಿದ್ದಾರೆ. ಹಣ ಜಮೆಯಾಗಿದೆಯೇ ಎಂದು ನೋಡಲು ಮಹಿಳೆಯರು ಬ್ಯಾಂಕ್‌ಗೆ ಹೋಗುತ್ತಿದ್ದಾರೆ. ಇದು ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ಮುಂದಿನ ತಿಂಗಳೊಳಗೆ ಪ್ರಕ್ರಿಯೆ ಚುರುಕುಗೊಳಿಸಲಾಗುವುದು," ಎಂದು ಸಚಿವೆ ಭರವಸೆ ನೀಡಿದರು.
"ಈ ಹಿಂದೆ ಹಣ ಬಿಡುಗಡೆಯಾದಾಗ 25 ದಿನಗಳ ಕಾಲ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈಗ ಆರು ದಿನಗಳಲ್ಲಿ ಎಲ್ಲ ಪ್ರಕ್ರಿಯೆ ನಡೆಯುತ್ತದೆ. 23 ಲಕ್ಷ ಜನರ ಕೆವೈಸಿ ಸಮಸ್ಯೆಗಳಿದ್ದವು. ಆ ಪೈಕಿ ಹೆಚ್ಚಿನ ಸಮಸ್ಯೆಯನ್ನು ನಾವೇ ಪರಿಹರಿಸಿದ್ದೇವೆ. ಈಗ ಸುಮಾರು ಏಳು ಲಕ್ಷ ಪ್ರಕರಣಗಳು ಬಾಕಿಯಿದೆ. ಅದನ್ನು ಕೂಡಾ ಶೀಘ್ರ ಪರಿಹರಿಸಲಾಗುತ್ತದೆ," ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.


Click it and Unblock the Notifications