2022ರ ಬಜೆಟ್ ಭಾರತೀಯ ಇತಿಹಾಸದಲ್ಲಿ ಬಹಳ ಮುಖ್ಯವಾದ ಸಮಯದಲ್ಲಿ ಬಂದಿದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಉಂಟಾದ ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಳ್ಳಲು ವಿಶ್ವವೇ ಹೆಣಗಾಡುತ್ತಿದೆ. ಕೋವಿಡ್ ನಿರುದ್ಯೋಗ ಹಾಗೂ ದೊಡ್ಡ ಪ್ರಮಾಣದಲ್ಲಿ ಸಂಬಳ ಕಡಿತಕ್ಕೆ ಕಾರಣವಾಗಿದೆ. ಭಾರತದಲ್ಲಿಯೂ ಇದೇ ಸಮಸ್ಯೆ ಇದೆ. ಈ ನಡುವೆ ಭಾರತದಲ್ಲಿ ಕೇಂದ್ರ ಬಜೆಟ್ ಮಂಡನೆಯ ಸಮಯ ಸಮೀಪವಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲಿದ್ದು ಈ ಬಜೆಟ್‌ನಲ್ಲಿ ಯಾವೆಲ್ಲಾ ಯೋಜನೆಗಳು ಜಾರಿ ಆಗಲಿದೆ ಹಾಗೂ ಯಾವೆಲ್ಲಾ ಪ್ರಯೋಜನಗಳು ಲಭಿಸಲಿದೆ ಎಂಬ ನಿಟ್ಟಿನಲ್ಲಿ ಬಜೆಟ್‌ಗಾಗಿ ಹಲವಾರು ವಲಯಗಳು ಕಾತುರದಿಂದ ಕಾಯುತ್ತಿದೆ. ಈ ನಡುವೆ ಆದಾಯ ತೆರಿಗೆ ಪಾವತಿದಾರರು ತಮ್ಮದೇ ಆದ ನಿರೀಕ್ಷೆಯನ್ನು ಸರ್ಕಾರದ ಈ ಬಜೆಟ್‌ನಲ್ಲಿ ಹೊಂದಿದ್ದಾರೆ.
ಆದಾಯ ತೆರಿಗೆ ಪಾವತಿದಾರರಿಗೆ ಬಜೆಟ್ ಯಾವಾಗಲೂ ಪ್ರಮುಖವಾಗಿದೆ. ಆದಾಯ ತೆರಿಗೆ ಕಡಿತ ಹಾಗೂ ತೆರಿಗೆ ದರಗಳಲ್ಲಿ ಬದಲಾವಣೆಯ ನಿರೀಕ್ಷೆಯು ಪ್ರತಿ ವರ್ಷ ಬಜೆಟ್‌ನ ಸಂದರ್ಭದಲ್ಲಿ ಆದಾಯ ತೆರಿಗೆ ಪಾವತಿದಾರರು ಹೊಂದಿರುತ್ತಾರೆ. ಹಾಗಾದರೆ ಮುಂಬರುವ ಬಜೆಟ್‌ನಿಂದ ದೇಶದ ಆದಾಯ ತೆರಿಗೆದಾರರು ಏನನ್ನು ನಿರೀಕ್ಷಿಸುತ್ತಾರೆ ಎಂಬುವುದನ್ನು ನಾವು ತಿಳಿಯೋಣ, ಮುಂದೆ ಓದಿ....
ಹೆಚ್ಚು ಅನುಕೂಲಕರವಾದ ಆದಾಯ ತೆರಿಗೆ ದರದ ನಿರೀಕ್ಷೆ
ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಪ್ರಸ್ತುತ 10 ಆದಾಯ ತೆರಿಗೆ ದರಗಳು ಇದೆ. ಅವುಗಳು ಶೇ.5.2, ಶೇ.10.4, ಶೇ.15.6, ಶೇ.20.8, ಶೇ.26, ಶೇ.31.2, ಶೇ.34.32, ಶೇ.35.88, ಶೇ.39 ಮತ್ತು ಶೇ.42.744 ಆಗಿದೆ. ಇದು ಸೆಸ್‌ಗಳನ್ನು ಒಳಗೊಂಡಿದೆ. ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ದರಗಳನ್ನು ಸರಳ ಮಾಡಬಹುದು ಹಾಗೂ 10ರಿಂದ ಐದಕ್ಕೆ ಇಳಿಕೆ ಮಾಡಬಹುದು ಎಂಬುವುದು ನಿರೀಕ್ಷೆಯಾಗಿದೆ.
ವರ್ಕ್ ಫ್ರಮ್ ಹೋಮ್ ಭತ್ಯೆ
ಕೊರೊನಾ ವೈರಸ್ ಸಾಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ (ವರ್ಕ್ ಫ್ರಮ್ ಹೋಮ್). ಬಹಳಷ್ಟು ಕಂಪನಿಗಳು ಖಾಯಂ ಆಗಿ ವರ್ಕ್ ಫ್ರಮ್ ಹೋಮ್ ನೀಡುವ ಯೋಜನೆಯನ್ನು ಹಾಕುತ್ತಿದೆ. ಆದರೆ ಈ ನಡುವೆ ಈ ವರ್ಕ್ ಫ್ರಮ್ ಹೋಮ್ ಆದಾಯ ತೆರಿಗೆ ಪಾವತಿದಾರರಿಗೆ ಸಂಕಷ್ಟವನ್ನು ಉಂಟು ಮಾಡಿದೆ. ಮನೆಯಲ್ಲಿಯೇ ಕೆಲಸ ಮಾಡುವ ಕಾರಣದಿಂದಾಗಿ ಖರ್ಚು ಅಧಿಕವಾಗಿದೆ. ವರದಿಯ ಪ್ರಕಾರ, ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಲ್ಯಾಪ್‌ಟಾಪ್‌ಗಳು, ವೈಫೈ, ಪ್ರಿಂಟರ್ ಮತ್ತು ಇತರ ಸಂಬಂಧಿತ ವೆಚ್ಚಗಳಿಗೆ ಸೂಕ್ತ ನಿಬಂಧನೆಗಳನ್ನು ಮಾಡಬೇಕೆಂದು ತಜ್ಞರು ಬಯಸುತ್ತಾರೆ. ಅಲ್ಲದೆ, ವರ್ಕ್ ಫ್ರಮ್ ಹೋಮ್ ಮಾಡುವ ವ್ಯಕ್ತಿಗಳಿಗೆ ಸೂಕ್ತ ವಿನಾಯಿತಿಯನ್ನು ನೀಡಬೇಕು ಎಂದು ಸಹ ತಜ್ಞರು ಅಭಿಪ್ರಾಯಿಸಿದ್ದಾರೆ.
ಕೋವಿಡ್ ಬಾಂಡ್‌ಗಳು ಮತ್ತು ತೆರಿಗೆ ವಿನಾಯಿತಿಗಳು
ಇನ್ನು ಅಗತ್ಯವಿರುವ ನಿಧಿಯನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಸರ್ಕಾರವು 'ಕೋವಿಡ್ ಬಾಂಡ್‌ಗಳನ್ನು' ಮಾರಾಟ ಮಾಡುವತ್ತ ಗಮನ ಹರಿಸಬೇಕು ಎಂದು ಕೂಡಾ ಆದಾಯ ತೆರಿಗೆದಾರರು ಬಯಸಿದ್ದಾರೆ. ಹಾಗೆಯೇ ಬಡ್ಡಿದರದಲ್ಲಿ ಮತ್ತು 3 ರಿಂದ 5 ವರ್ಷಗಳ ಅವಧಿಗೆ ನೀಡಬಹುದು ಎಂದು ಸೂಚಿಸಿದ್ದಾರೆ. ಬಾಂಡ್‌ಗಳು ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿರಬೇಕು ಎಂದು ಕೂಡಾ ನಿರೀಕ್ಷೆ ಹೊಂದಿದ್ದಾರೆ.
ಕ್ರಿಪ್ಟೋಕರೆನ್ಸಿ ನಿಯಮಗಳ ಸ್ಪಷ್ಟತೆ
ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಸರ್ಕಾರವು ಸ್ಪಷ್ಟತೆ ನೀಡುವ ಸಮಯ ಬಂದಿದೆ ಎಂದು ತಜ್ಞರು ಹೇಳಿದ್ದಾರೆ. ವರದಿಯ ಪ್ರಕಾರ, ಕ್ರಿಪ್ಟೋ ಮಾರುಕಟ್ಟೆಯು ಭಾರತದಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆದಾರರನ್ನು ಹೊಂದಿದೆ. ವಿವಿಧ ಡಿಜಿಟಲ್ ಟೋಕನ್‌ಗಳಲ್ಲಿ 10 ಶತಕೋಟಿ ಡಾಲರ್‌ಗೂ ಅಧಿಕ ಹೂಡಿಕೆ ಮಾಡಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಈ ಆಸ್ತಿಗಳ ತೆರಿಗೆ ನೀತಿಯ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಲಿದೆ ಎಂಬ ನಿರೀಕ್ಷೆ ಇದೆ.
ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಳ
ಪ್ರಸ್ತುತ, ವಾರ್ಷಿಕ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ಆದಾಯ ತೆರಿಗೆದಾರರು ಈ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಿದ್ದಾರೆ. ಹಣದುಬ್ಬರವನ್ನು ನಿಭಾಯಿಸಲು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಕೊನೆಯ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಪರಿಷ್ಕರಣೆ ಮಾಡಿ ಹಲವಾರು ವರ್ಷಗಳು ಆಗಿದೆ.


Click it and Unblock the Notifications