ಬಹುಪಾಲು ಭಾರತೀಯ ಗ್ರಾಹಕರು ಮುಂದಿನ ಒಂದು ವರ್ಷದಲ್ಲಿ ತಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಸರಕು ಮತ್ತು ಸೇವೆಗಳ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯು ಜನರು ಯಾವ ವಸ್ತುಗಳನ್ನು ಖರೀದಿ ಮಾಡಬೇಕು, ಯಾವುದನ್ನು ಖರೀದಿ ಮಾಡುವುದು ಬೇಡ ಎಂಬ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇದಲ್ಲದೆ, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸುವ ಸಂಕಷ್ಟದ ನಡುವೆ ಹೆಚ್ಚಿನ ಹಣವನ್ನು ಉಳಿಸಲು ಭಾರತದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಜನರು ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಭಾರತದ ಭವಿಷ್ಯದ ಬಗ್ಗೆ ನಡೆಸಿದ ಇವೈ ಸಂಶೋಧನೆಯ ಒಂಬತ್ತನೇ ಆವೃತ್ತಿಯು ಹೇಳಿದೆ.
ಭಾರತದ ಸೂಚ್ಯಂಕವು ಭಾರತೀಯ ಗ್ರಾಹಕರ ಪಾಸಿಟಿವ್ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಶೇಕಡಾ 77 ರಷ್ಟು ಜನರು ಮುಂದಿನ ಒಂದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಪಾಸಿಟಿವ್ ಬದಲಾವಣೆಯ ನಿರೀಕ್ಷೆ ಹೊಂದಿದ್ದಾರೆ. ಆದರೆ ಜಾಗತಿಕ ಸ್ಥಿತಿಯ ಸುಧಾರಣೆಯ ಭರವಸೆಯನ್ನು ಶೇಕಡ 48ರಷ್ಟು ಮಂದಿ ಮಾತ್ರ ಹೊಂದಿದ್ದಾರೆ ಎಂದು ಇವೈ ಸಂಶೋಧನಾ ವರದಿಯು ತಿಳಿಸಿದೆ.
ಎಲ್ಲೆಲ್ಲಿ ಸಮೀಕ್ಷೆ ಮಾಡಲಾಗಿದೆ?
ಫೆಬ್ರವರಿ 2022 ರಲ್ಲಿ 1,000 ಭಾರತೀಯ ಗ್ರಾಹಕರ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ, "ಸರಕು ಮತ್ತು ಸೇವೆಗಳ ಬೆಲೆ ಏರಿಕೆಯ ಬಗ್ಗೆ ಗ್ರಾಹಕರು ಕಳವಳ ವ್ಯಕ್ತ ಪಡಿಸಿದ್ದಾರೆ. ಈ ಕಳವಳವು ಸರಕುಗಳನ್ನು ಖರೀದಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರು ಖರೀದಿಯ ವಿಚಾರದಲ್ಲಿ ಕೈಗೊಳ್ಳುವ ನಿರ್ಧಾರಗಳ ಮೇಲೆ ಈ ಸರಕು, ಸೇವೆ ಬೆಲೆ ಹೆಚ್ಚಳವು ಪರಿಣಾಮವನ್ನು ಉಂಟು ಮಾಡುತ್ತಿದೆ," ಎಂದು ಬಹಿರಂಗವಾಗಿದೆ. ಇವೈ ಭವಿಷ್ಯದ ಗ್ರಾಹಕ ಸೂಚ್ಯಂಕದ ಒಂಬತ್ತನೇ ಆವೃತ್ತಿಯು ಯುಎಸ್, ಕೆನಡಾ, ಯುಕೆ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಚೀನಾ, ಭಾರತ, ಬ್ರೆಜಿಲ್, ಸೌದಿ ಅರೇಬಿಯಾ, ಡೆನ್ಮಾರ್ಕ್, ಸ್ವೀಡನ್, ಫಿನ್‌ಲ್ಯಾಂಡ್, ನಾರ್ವೆ, ಇಟಲಿ, ಸ್ಪೇನ್, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಚಿಲಿ, ಇಂಡೋನೇಷ್ಯಾದಾದ್ಯಂತ 18,000 ಗ್ರಾಹಕರನ್ನು ಸಮೀಕ್ಷೆ ಮಾಡಿದೆ.
ಯಾವ ದೇಶದಲ್ಲಿ ಎಷ್ಟು ಜನರ ಮೇಲೆ ಪ್ರಭಾವ?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಬೆಲೆಯು ಅವರ ಖರೀದಿಯ ನಿರ್ಧಾರದ ಮೇಲೆ ಪ್ರಭಾವ ಬೀರುತ್ತಿದೆ ಎಂದು 62 ಪ್ರತಿಶತದಷ್ಟು ಜನರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ 77 ಪ್ರತಿಶತ, ಭಾರತ 64 ಪ್ರತಿಶತ, ಬ್ರೆಜಿಲ್ 63 ಶೇಕಡಾ, ಚೀನಾ 42 ಶೇಕಡಾ ಜನರು ಬೆಲೆ ಏರಿಕೆಯು ಖರೀದಿಯ ನಿರ್ಧಾರದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ದೇಶದಿಂದ ಪ್ರತಿಕ್ರಿಯಿಸಿದ ಶೇಕದ 45 ಜನರು ತಮ್ಮ ಖರೀದಿಯ ಮೇಲೆ ಬೆಲೆ ಎರಿಕೆ ಪ್ರಭಾವ ಬೀರುತ್ತಿದೆ ಎಂದು ಹೇಳಿದ್ದಾರೆ. ಯುಎಸ್ 50 ಪ್ರತಿಶತ, ಕೆನಡಾ 52 ಪ್ರತಿಶತ, ಯುಕೆ 42 ಪ್ರತಿಶತ, ಫ್ರಾನ್ಸ್ 40 ಪ್ರತಿಶತ ಪ್ರಭಾವ ಬೀರಿದೆ ಎಂದಿದ್ದಾರೆ.
ಭಾರತದಲ್ಲಿ ಎಷ್ಟು ಜನರ ಮೇಲೆ ಪ್ರಭಾವ?
ಭಾರತದಲ್ಲಿ, ಇದು ಕಡಿಮೆ-ಆದಾಯ ಗಳಿಸುವವರ ಮೇಲೆ ಹೆಚ್ಚು (ಶೇ. 72) ಪರಿಣಾಮ ಬೀರುತ್ತದೆ, ನಂತರ ಕೊಂಚ ಅಧಿಕ ಆದಾಯದ ಗುಂಪು 60 ಪ್ರತಿಶತ ಮತ್ತು ಮಧ್ಯಮ-ಆದಾಯದ ಗುಂಪು ಶೇಕಡಾ 58 ರಷ್ಟಿದೆ ಎಂದು ಅದು ಹೇಳಿದೆ. "ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸುವ ಕಷ್ಟದ ನಡುವೆ ಭಾರತದಲ್ಲಿ ಹಿಂದಿನದಕ್ಕಿಂತ ಹೆಚ್ಚಿನ ಹಣವನ್ನು ಉಳಿಸಲು ಶೇಕಡಾ 80 ಕ್ಕಿಂತ ಹೆಚ್ಚು ಜನರು ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಾ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 50 ರಷ್ಟು ಜನರು ಖರ್ಚು ಮಾಡುವ ಬದಲು ಉಳಿಸುವ ಗುರಿಯನ್ನು ಈಗಾಗಲೇ ಮಾಡಿದ್ದಾರೆ ಎಂದು ಹೇಳಿದ್ದಾರೆ," ಎಂದು ಸಂಶೋಧನಾ ವರದಿ ಉಲ್ಲೇಖ ಮಾಡಿದೆ.
ಆರೋಗ್ಯದ ಮೇಲೆ ಹೆಚ್ಚು ಗಮನ
ಇದಲ್ಲದೆ, ಆರೋಗ್ಯ ಮತ್ತು ಕ್ಷೇಮಕ್ಕಾಗಿ ಜನರು ಅಧಿಕ ಖರ್ಚು ಮಾಡುತ್ತಿದ್ದಾರೆ. ಹಣದುಬ್ಬರದ ಒತ್ತಡದ ನಡುವೆಯೂ ಭಾರತೀಯ ಗ್ರಾಹಕರು ಉತ್ತಮ ಗುಣಮಟ್ಟದ ಮತ್ತು ಸಾವಯವ ಆಹಾರಕ್ಕಾಗಿ ಪಾವತಿ ಮಾಡಲು ಸಿದ್ದರಾಗಿದ್ದಾರೆ. ಭಾರತದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು (54 ಪ್ರತಿಶತ) 2-3 ವರ್ಷಗಳಲ್ಲಿ ದೈಹಿಕ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅಧಿಕ ಖರ್ಚು ಮಾಡುತ್ತಿದ್ದಾರೆ. 80 ಪ್ರತಿಶತ ಭಾರತೀಯರು ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. 78 ರಷ್ಟು ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.


Click it and Unblock the Notifications