ಇನ್ನೇನು ಕೆಲವೇ ತಿಂಗಳಲ್ಲಿ ಹೊಸ ವರ್ಷ ಬರಲಿದೆ. 2025 ಕ್ಕೆ ಅಂತ್ಯ ಹಾಡಿ, 2026ಕ್ಕೆ ಸ್ವಾಗತ ಕೋರಲು ಜನರೂ ಕಾದುಕುಳಿತಿದ್ದಾರೆ. ಆದರೆ ವರ್ಷಾಂತ್ಯದಲ್ಲಿ ಹೆಚ್ಚಿನವರು ಎಲ್ಲಾದರು ಹೋಗಬೇಕೆಂಬ ಪ್ಲಾನ್ ಮಾಡುತ್ತಿರುತ್ತಾರೆ. ಇದೀಗ ಡಿಸೆಂಬರ್‌ನಲ್ಲಿ ಟ್ರಿಪ್ ಪ್ಲಾನ್ (Trip Plan) ಮಾಡಬೇಕೆಂದುಕೊಂಡವರಿಗೆ ಗುಡ್ ನ್ಯೂಸ್ ಒಂದಿದೆ. ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.

ಚಳಿಗಾಲದ ತಂಪಾದ ವಾತಾವರಣದಲ್ಲಿ ಟ್ರಿಪ್ ಹೋಗೋ ಆಸೆ ನಿಮಗಿದ್ಯಾ? ಹಾಗಿದ್ರೆ ಐಆರ್‌ಸಿಟಿಸಿ ಬಂಪರ್ ಆಫರ್ ಘೋಷಿಸಿದೆ. ನೀಲಗಿರಿ ಸೌಂದರ್ಯ ಸವಿಯಲು ಐಆರ್‌ಸಿಟಿಸಿ ವಿಶೇಷ ಊಟಿ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ಆರು ದಿನಗಳ ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ದಟ್ಟವಾದ ಅರಣ್ಯಗಳು, ಹಚ್ಚ ಹಸಿರಿನ ಚಹಾ ತೋಟಗಳು, ಮಂಜು ಮುಸುಕಿದ ಪರ್ವತಗಳನ್ನು ಅನುಭವಿಸಬಹುದು. ಇದು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪ್ರವಾಸವಾಗಿದೆ.
ಎಲ್ಲಿಂದ ಎಲ್ಲಿದೆ?
ಹೈದರಾಬಾದ್‌ನಿಂದ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಪ್ರತಿ ಮಂಗಳವಾರ ಮಧ್ಯಾಹ್ನ 2:25ಕ್ಕೆ ಶಬರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರವಾಸ ಪ್ರಾರಂಭವಾಗುತ್ತದೆ. ಎರಡನೇ ದಿನ ಬೆಳಿಗ್ಗೆ 9:10ಕ್ಕೆ ರೈಲು ಕೊಯಮತ್ತೂರು ತಲುಪಲಿದೆ. ಅಲ್ಲಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಊಟಿಗೆ ಬಸ್ ಮೂಲಕ ಕರೆದೊಯ್ಯಲಾಗುತ್ತದೆ. ಊಟಿ ತಲುಪಿದ ನಂತರ, ಪ್ರವಾಸಿಗರು ಮೂರು ದಿನಗಳ ಕಾಲ ಹೋಟೆಲ್‌ನಲ್ಲಿ ಉಳಿಯಲಿದ್ದಾರೆ. ಅಲ್ಲದೇ ಪ್ಯಾಕೇಜ್‌ನಲ್ಲೇ ಪ್ರತಿದಿನ ಬೆಳಗಿನ ಉಪಾಹಾರವನ್ನು ಸಹ ನೀಡಲಾಗುತ್ತದೆ.
ಮೊದಲ ದಿನ ಊಟಿಯ ಬೊಟಾನಿಕಲ್ ಗಾರ್ಡನ್ ಮತ್ತು ಊಟಿ ಸರೋವರಕ್ಕೆ ಪ್ರಯಾಣ ಬೆಳೆಸಲಾಗುತ್ತದೆ. ಎರಡನೇ ದಿನ, ಪ್ರವಾಸಿಗರು ದೊಡ್ಡಬೆಟ್ಟ ಶಿಖರ, ಟೀ ಮ್ಯೂಸಿಯಂ, ಮತ್ತು ಪೈಕಾರಾ ಫಾಲ್ಸ್ ವೀಕ್ಷಿಸಬಹುದು. ಮೂರನೇ ದಿನ ಕೂನೂರಿಗೆ ಪ್ರವಾಸ ಮಾಡಿ ಊಟಿಗೆ ಮರಳಲಿದ್ದಾರೆ. ಆ ನಂತರ ನಾಲ್ಕನೇ ದಿನ ಮಧ್ಯಾಹ್ನ ಹೋಟೆಲ್‌ನಿಂದ ಚೆಕ್‌ಔಟ್ ಮಾಡಿ, ಕೊಯಮತ್ತೂರಿಗೆ ತೆರಳಿ, ಶಬರಿ ಎಕ್ಸ್‌ಪ್ರೆಸ್ ಮೂಲಕ ರಾತ್ರಿ ಹೈದರಾಬಾದ್‌ಗೆ ಹೊರಡಲಿದ್ದಾರೆ. ಆರನೇ ದಿನ ಬೆಳಿಗ್ಗೆ 11:00ಕ್ಕೆ ಸಿಕಂದರಾಬಾದ್‌ಗೆ ವಾಪಸ್ಸಾಗುವ ಮೂಲಕ ಪ್ರವಾಸ ಕೊನೆಗೊಳ್ಳಲಿದೆ.
ಈ ಪ್ಯಾಕೇಜ್ ಎರಡು ವಿಭಾಗಗಳಲ್ಲಿ ಲಭ್ಯವಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 31 ರವರೆಗೆ ಕಂಫರ್ಟ್ ವಿಭಾಗಕ್ಕೆ ₹17,340 ಮತ್ತು ಸ್ಟ್ಯಾಂಡರ್ಡ್ ವಿಭಾಗಕ್ಕೆ ₹14,790 ಇರುತ್ತದೆ. ನವೆಂಬರ್ 4 ರಿಂದ ಡಿಸೆಂಬರ್ 19 ರ ಚಳಿಗಾಲದ ಅವಧಿಯಲ್ಲಿ, ಕಂಫರ್ಟ್ ವಿಭಾಗಕ್ಕೆ ₹15,850 ಮತ್ತು ಸ್ಟ್ಯಾಂಡರ್ಡ್ ವಿಭಾಗಕ್ಕೆ ₹13,300 ನಿಗದಿಯಾಗಿದೆ. ಡಿಸೆಂಬರ್ 30 ರ ವಿಶೇಷ ಹೊಸ ವರ್ಷದ ಪ್ರವಾಸಕ್ಕೆ ಗಾಲಾ ಡಿನ್ನರ್ ಮತ್ತು ಡಿಜೆ ಮ್ಯೂಸಿಕ್‌ಗಾಗಿ ಕಂಫರ್ಟ್ ವಿಭಾಗಕ್ಕೆ ₹19,810 ಮತ್ತು ಸ್ಟ್ಯಾಂಡರ್ಡ್ ವಿಭಾಗಕ್ಕೆ ₹17,260 ಇರಲಿದೆ.
ಏನೆಲ್ಲ ಸೌಲಭ್ಯ?
ಇನ್ನು ಈ ಪ್ಯಾಕೇಜ್ ಪಡೆದವರಿಗೆ, ರೈಲು ಪ್ರಯಾಣ (ಸ್ಲೀಪರ್ ಅಥವಾ 3ಎಸಿ), ಮೂರು ದಿನಗಳ ಹೋಟೆಲ್ ವಸತಿ, ಪ್ರತಿದಿನ ಬೆಳಗಿನ ಉಪಾಹಾರ, ಪ್ರಯಾಣ ವಿಮೆ, ಟೋಲ್ ಶುಲ್ಕಗಳು ಮತ್ತು ಪರ್ಮಿಟ್‌ಗಳು ಸಹ ಸೇರಿದೆ. ಉಳಿದ ಊಟ, ರೈಲಿನಲ್ಲಿ ಆಹಾರ, ಪ್ರವೇಶ ಟಿಕೆಟ್‌ಗಳು, ಬೋಟಿಂಗ್, ಕುದುರೆ ಸವಾರಿ ಮುಂತಾದ ಖರ್ಚುಗಳನ್ನು ಪ್ರವಾಸಿಗರು ಸ್ವತಃ ಭರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ https://www.irctctourism.com ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಈ ಪ್ರವಾಸದಿಂದ ಪ್ರಯಾಣಿಕರು ಊಟಿಯ ಪ್ರಕೃತಿಯನ್ನು ಹತ್ತಿರದಿಂದ ಅನುಭವಿಸಬಹುದು. ಪರ್ವತಗಳ ನಡುವಿನ ಶಾಂತ ವಾತಾವರಣ, ತಂಪಾದ ಹವಾಮಾನ, ಮತ್ತು ಹಚ್ಚ ಹಸಿರಿನಿಂದ ಕೂಡಿದ ಪೃಕೃತಿ ಸೌಂದರ್ಯವನ್ನು ಇಲ್ಲಿ ಸವಿಯಬಹುದು. ಬೇಸಿಗೆಗಿಂತಲೂ, ಚಳಿಗಾಲದಲ್ಲಿ ಊಟಿ ಮತ್ತಷ್ಟು ಸೌಂದರ್ಯದಿಂದ ಕೂಡಿರುತ್ತದೆ. ಇದೇ ಕಾರಣಕ್ಕೆ ಭಾರತೀಯ ರೈಲ್ವೇ ಈ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ.


Click it and Unblock the Notifications