ಇದು ಕೇವಲ ಮೂರ್ನಾಲ್ಕು ತಿಂಗಳ ಹಿಂದಿನ ಮಾತು. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಷೇರು ಮಾರ್ಕೆಟ್ ನಲ್ಲಿ ದಿನವೂ ಭರ್ಜರಿ ಫಸಲು ಕಾಣುತ್ತಿದ್ದ ಸಮಯ. "ಮನೆ- ಸೈಟು ಅಂತ ದುಡ್ಡು ಹಾಕುವ ಬದಲಿಗೆ ಷೇರಿನ ಮೇಲೆ ಹಣ ಹಾಕಿದರೆ ಸಿಕ್ಕಾಪಟ್ಟೆ ಲಾಭ ಮಾಡಬಹುದು. ಅದಕ್ಕೆ ನಾನೇ ಉದಾಹರಣೆ" ಎಂದು ಕೆಲವರು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದರು.
ಕೊರೊನಾ ಅಟ್ಟಾಡಿಸಿ ಬಂದಿತು ನೋಡಿ, ನೋಡನೋಡುತ್ತಲೇ ಒಂದೆರಡು ತಿಂಗಳಲ್ಲಿ ಸೆನ್ಸೆಕ್ಸ್ ಸೂಚ್ಯಂಕ 15 ಸಾವಿರ ಪಾಯಿಂಟ್ ಬಿದ್ದುಹೋಯಿತು. ಆ ನಂತರ ಮತ್ತೆ ಚೇತರಿಸಿಕೊಂಡು, ಮತ್ತೆ ಬಿದ್ದು... ಹೀಗೆ ಒಂದು ಅನಿಶ್ಚಿತತೆ ಇದ್ದೇ ಇದೆ. ಇನ್ನು ಚಿನ್ನದ ಮೇಲೆ ಹಣ ಹೂಡಬಹುದಾ ಅಂದರೆ, ಅದರ ಏಳು- ಬೀಳು ಕೂಡ ಸಿಕ್ಕಾಪಟ್ಟೆ ಇದೆ. ಹಾಗಿದ್ದರೆ ಸದ್ಯಕ್ಕೆ ಹಣ ಇಟ್ಟುಕೊಂಡು, ಹೂಡಿಕೆಗೆ ಎದುರು ನೋಡುತ್ತಿರುವವರು ಏನು ಮಾಡಬೇಕು?
ಹೀಗೊಂದು ಆಲೋಚನೆ ಹಲವರಲ್ಲಿದೆ. ಅಂಥವರ ಗೊಂದಲಕ್ಕೆ ಈ ಲೇಖನದಲ್ಲಿ ಉತ್ತರ ಇದೆ.
ಎಫ್.ಡಿ. ಮೇಲಿನ ಬಡ್ಡಿ ತುಂಬಾ ಕಡಿಮೆ ಇದೆ
ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ ಗಳಲ್ಲಿ ಎಫ್.ಡಿ. ಮೇಲಿನ ಬಡ್ಡಿ ತುಂಬಾ ಕಡಿಮೆ ಇದೆ. ಇನ್ನು ಮೊದಲೇ ಹೇಳಿದ ಹಾಗೆ ಷೇರು ಮಾರ್ಕೆಟ್, ಚಿನ್ನ, ಫೈನಾನ್ಸ್ ಕಂಪೆನಿಗಳ ಬಾಂಡ್... ಇವ್ಯಾವುದನ್ನೂ ಧೈರ್ಯವಾಗಿ ನಂಬುವ ಸ್ಥಿತಿಯಲ್ಲಿ ಈ ಬಗ್ಗೆ ಪ್ರಾಥಮಿಕ ಜ್ಞಾನ ಇರುವಂಥವರು ಇಲ್ಲ. ಹಾಗಿದ್ದರೆ ರಿಯಲ್ ಎಸ್ಟೇಟ್ ಮೇಲೆ ದುಡ್ಡು ಹಾಕಿದರೆ ಹೇಗೆ ಎಂಬ ಬಲ್ಬ್ ತಲೆಯಲ್ಲಿ ಉರಿಯಬಹುದು. ಆದರೆ ಕ್ಷಮಿಸಿ, ಇದು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆಗೂ ಸೂಕ್ತವಲ್ಲದ ಕೊರೊನಾ ಕಾರ್ಪಣ್ಯದ ಕಾಲವಿದು. ಏಕೆಂದರೆ, ಮತ್ತೆ ರಿಯಲ್ ಎಸ್ಟೇಟ್ ಗೆ ಯಾವಾಗ ಬೇಡಿಕೆ ಬರುತ್ತದೋ ಬೆಲೆ ದಕ್ಕುತ್ತದೋ ಗೊತ್ತಿಲ್ಲ. ಈಗ ಕೈಯಲ್ಲಿ ಇರುವ ಹಣವನ್ನೋ ಅಥವಾ ಸಾಲ ತಂದು, ಅದಕ್ಕೆ ಬಡ್ಡಿ ಕಟ್ಟಿ, ಲಾಭ ಸಿಗಬಹುದು ಎಂದು ನಿರೀಕ್ಷೆ ಇಡುವುದು ಬಹಳ ದುಬಾರಿ ಆಗುತ್ತದೆ. ಹಾಗಿದ್ದರೆ ಏನು ಮಾಡಬಹುದು, ಯಾವುದಕ್ಕೆ ಸೂಕ್ತ.
ಕಟ್ಟಿರುವ ಮನೆ ಖರೀದಿಸುವುದು ಸೂಕ್ತ
ಈ ಸಲಹೆ ಏನಿದ್ದರೂ ಸ್ವಂತ ಮನೆ ಇಲ್ಲ, ಒಂದು ಮನೆ ಬೇಕಿದೆ ಅನ್ನುವವರಿಗೆ ಸೂಕ್ತ. ನೆನಪಿಡಿ, ಸಾಧ್ಯವಾದಷ್ಟೂ ಕಟ್ಟಿರುವ ಮನೆಯನ್ನೇ ಖರೀದಿ ಮಾಡುವುದು ಸೂಕ್ತ. ತಿಂಗಳ ಬಾಡಿಗೆ ಹಣ ಉಳಿತಾಯವಾದಲ್ಲಿ ಅದನ್ನು ಕಂತಿಗೆ ಹೊಂದಾಣಿಕೆ ಮಾಡಬಹುದು. ಏಕೆಂದರೆ, ಮನೆ ಕಟ್ಟುವುದು ನಗರ ವ್ಯಾಪ್ತಿಯಲ್ಲಿ ಕಷ್ಟ ಕಷ್ಟ. ಇನ್ನು ಅದಕ್ಕೆ ಬೇಕಾದ ಇಟ್ಟಿಗೆ, ಮರಳು, ಸಿಮೆಂಟ್ ಹೊಂದಿಸಿಕೊಂಡು, ಕೂಲಿಯವರೂ ಸಿಕ್ಕಿ, ಮನೆ ಪೂರ್ಣಗೊಳಿಸುವುದೂ ಬಹಳ ಕಷ್ಟದ ಕೆಲಸ. ಜತೆಗೆ ಬ್ಯಾಂಕ್ ನಿಂದ ನಿರ್ಮಾಣದ ಆಧಾರದಲ್ಲಿ ಹಂತಹಂತವಾಗಿ ಸಾಲದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ನಿರ್ಮಾಣ ಕಾರ್ಯವೇ ತಡವಾದರೆ ಸಮಸ್ಯೆಗಳು ಸೇರ್ಪಡೆಯಾಗುತ್ತಾ ಹೋಗುತ್ತದೆ. ಸದ್ಯಕ್ಕಂತೂ ನಿರ್ಮಾಣ ಕಾರ್ಯಕ್ಕೆ ನಗರ ಪ್ರದೇಶಗಳಿಂದ ಹೊರಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಕಟ್ಟಿರುವ ಮನೆಯನ್ನೇ ಖರೀದಿ ಮಾಡಿ, ತಕ್ಷಣಕ್ಕೆ ಅಲ್ಲಿಗೆ ವಾಸ್ತವ್ಯ ಬದಲಿಸುವುದಕ್ಕೆ ಅನುಕೂಲವಾದಲ್ಲಿ ಹಲವು ಪ್ಲಸ್ ಪಾಯಿಂಟ್ ಗಳು ಇರುತ್ತವೆ ಎಂಬುದನ್ನು ಗಮನದಲ್ಲಿ ಇಡಬೇಕು.
ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಇದೆ
ಸದ್ಯಕ್ಕೆ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಸಾಲ ನೀಡುತ್ತಿವೆ. ಈ ಹಿಂದೆ ಸಾಲ ನೀಡಬೇಕಾದಾಗ ಇರುತ್ತಿದ್ದ ಕಠಿಣ ನಿಯಮಗಳು ಇಲ್ಲ. ಇನ್ನು ರಿಯಲ್ ಎಸ್ಟೇಟ್ ಮುಂಚಿನ ಹೊಳಪಿನಲ್ಲಿ ಇಲ್ಲ. ರೀ ಸೇಲ್ ಗಾಗಿ ಹಾಕಿಕೊಂಡಿದ್ದವರು ಸಹ ಒತ್ತಡದಲ್ಲಿ ಇದ್ದಾರೆ. ಅಪಾರ್ಟ್ ಮೆಂಟ್ ಗಳಾದರೂ ಸರಿ, ಶೀಘ್ರವಾಗಿ ಪೂರ್ಣಗೊಳಿಸಿ, ಫ್ಲ್ಯಾಟ್ ಗಳನ್ನು ಮಾರಾಟ ಮಾಡಿ, ಹೊರಬಂದರೆ ಸಾಕು ಎಂಬಂತಾಗಿದೆ. ಇಂಥ ಸನ್ನಿವೇಶದಲ್ಲಿ ಚೌಕಾಸಿ ಮಾಡುವುದಕ್ಕೆ ಅವಕಾಶ ಹೆಚ್ಚಿರುತ್ತದೆ. ನೆನಪಿನಲ್ಲಿಡಿ, ಸ್ವಂತ ಮನೆಯೊಂದನ್ನು ಮಾಡಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ ಅಂತ ಯೋಚಿಸಬಹುದೇ ಹೊರತು ಮತ್ತೆ ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಥರ ಆಲೋಚನೆ ಮಾಡಬೇಡಿ. ಕೈಯಲ್ಲಿ ಹಣವಿದೆ. ಒಂದು ಸೈಟು ಖರೀದಿ ಮಾಡಿದ ಮೇಲೂ ಆಪತ್ತಿನ ಸಮಯ ಬಂದಲ್ಲಿ ಹಣಕ್ಕೆ ಸಮಸ್ಯೆ ಆಗಲಾರದು ಎಂದಿದ್ದಲ್ಲಿ ಮಾತ್ರ ಸೈಟು ಖರೀದಿ ಮಾಡಬಹುದು. ಅದು ಕೂಡ ಆ ಸ್ಥಳದಲ್ಲಿ ಮುಂದೆ ಮನೆ ಕಟ್ಟಬೇಕು ಎಂಬ ಉದ್ದೇಶವಿದ್ದಲ್ಲಿ ಮಾತ್ರ.


Click it and Unblock the Notifications