ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವು ಸಮೀಪದಲ್ಲಿದೆ. ಹಣಕಾಸು ವರ್ಷ 2021-22 ಅಥವಾ ಮೌಲ್ಯಮಾಪನ ವರ್ಷ 2022-23ರ ಐಟಿಆರ್ ಅನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕವು ಜುಲೈ 31, 2022 ಆಗಿದೆ.
ವಿವಿಧ ರೀತಿಯ ತೆರಿಗೆದಾರರಿಗೆ ವಿಭಿನ್ನ ಐಟಿಆರ್ ದಿನಾಂಕಗಳು ಅಥವಾ ಗಡುವುಗಳು ಇರುತ್ತದೆ. ಸಂಬಳ ಪಡೆಯುವವರಿಗೆ ಐಟಿಆರ್ ಸಲ್ಲಿಕೆ ಮಾಡಲು ಕೊನೆಯ ದಿನಾಂಕವು ಹತ್ತಿರದಲ್ಲಿದೆ. ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡುವ ಅಗತ್ಯವಿಲ್ಲದ ವ್ಯಕ್ತಿಗಳು ಮತ್ತು ಸಂಬಳ ಪಡೆಯುವ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಕೊನೆಯ ದಿನಾಂಕ ಜುಲೈ 31 ಆಗಿದೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ, ಹಿಂದೂ ಅವಿಭಜಿತ ಕುಟುಂಬಗಳಿಗೆ (HUF) ಐಟಿಆರ್ ಅನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕವೂ ಕೂಡಾ ಇದೇ ಜುಲೈ 31 ಆಗಿದೆ. ಹಾಗಾದರೆ ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಐಟಿಆರ್ ಸಲ್ಲಿಕೆ
ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ತೆರಿಗೆದಾರರು ಅಕ್ಟೋಬರ್ 31, 2022ರ ಒಳಗೆ ತಮ್ಮ ಐಟಿಆರ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ತೆರಿಗೆದಾರರು ಕಂಪನಿ, ಸಂಸ್ಥೆಯ ಕೆಲಸದ ಪಾಲುದಾರ ಅಥವಾ ಮಾಲೀಕತ್ವವನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಅವರ ಖಾತೆಯನ್ನು ಆಡಿಟ್ ಮಾಡಬೇಕಾಗುತ್ತದೆ.
ನಿಗದಿತ ದಿನಾಂಕದ ನಂತರ ದಂಡ
ತೆರಿಗೆದಾರರು ಜುಲೈ 31, 2022 ರ ನಂತರ ಐಟಿಆರ್ ಅನ್ನು ಸಲ್ಲಿಕೆ ಮಾಡಿದರೆ ಐದು ಸಾವಿರ ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ವ್ಯಕ್ತಿಯ ಒಟ್ಟು ಆದಾಯವು 5 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಸೆಕ್ಷನ್ 92E
ಯಾವುದೇ ತೆರಿಗೆದಾರರು, ಅಂತರಾಷ್ಟ್ರೀಯ ವಹಿವಾಟಿನಲ್ಲಿ ತೊಡಗಿದ್ದರೆ, ಅವರು ಸೆಕ್ಷನ್ 92E ಅಡಿಯಲ್ಲಿ ರಿಪೋರ್ಟ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅಂತಹ ತೆರಿಗೆದಾರರಿಗೆ ಐಟಿಆರ್ ಗಡುವು ನವೆಂಬರ್ 30, 2022 ಆಗಿದೆ.
ಎಲ್ಲಿ ಐಟಿಆರ್ ಸಲ್ಲಿಕೆ ಮಾಡುವುದು?
ತೆರಿಗೆದಾರರು ತಮ್ಮ ಐಟಿಆರ್ ಅನ್ನು ಹಣಕಾಸು ವರ್ಷ 2022-2023 ಕ್ಕೆ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ (https://incometaxindia.gov.in) ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಹೊಸ ಫಾರ್ಮ್ ಅನ್ನು ಪ್ರಕಟಿಸಿದೆ. ಅಪ್‌ಡೇಟೆಡ್ ಐಟಿಆರ್ ಫಾರ್ಮ್‌ನಲ್ಲಿ ತೆರಿಗೆದಾರರು ಸಲ್ಲಿಸುವ ಉದ್ದೇಶವನ್ನು ಮತ್ತು ತೆರಿಗೆ ವಿಧಿಸಬೇಕಾದ ಆದಾಯದ ಮೊತ್ತವನ್ನು ಘೋಷಿಸಬೇಕಾಗುತ್ತದೆ.


Click it and Unblock the Notifications