ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕೆಂದರೆ ಆಧಾರ್ ಕಾರ್ಡ್ ಹೇಗೆ ಮುಖ್ಯವೋ, ಅದೇ ರೀತಿ ಬಿಪಿಎಲ್ ಕಾರ್ಡ್ (BPL Card) ಕೂಡಾ ಅಷ್ಟೇ ಮುಖ್ಯ. ಅಷ್ಟೇ ಅಲ್ಲ ಅನ್ನಭಾಗ್ಯ ಯೋಜನೆಗಾಗಿ ಜಾರಿಗೆ ತಂದ ಬಿಪಿಎಲ್ ಕಾರ್ಡ್ ಇಂದು ಪ್ರಮುಖ ದಾಖಲೆಗಳಲ್ಲಿ ಒಂದು. ಆದರೆ 2025ರಲ್ಲಿ ಬಿಪಿಎಲ್ ಕಾರ್ಡ್ ಸಂಬಂಧಿಸಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಲವು ಕಾರ್ಡ್‌ಗಳನ್ನು ರದ್ದುಗೊಳಿಸಿದ್ದು, ಇನ್ನೂ ಕೆಲವು ಎಪಿಎಲ್ ಕಾರ್ಡ್‌ನಿಂದ ಬಿಪಿಎಲ್ ಕಾರ್ಡ್‌ಗೆ ವರ್ಗಾಯಿಸಿದೆ. ಆದ್ರೆ ಈ ನಿರ್ಧಾರಗಳು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಆದ್ರೆ ಇದೀಗ ವಿಧಾನ ಸಭಾ ಅಧಿವೇಶನದಲ್ಲಿ ಬಿಪಿಎಲ್ ಕಾರ್ಡ್ ಆದಾಯ ಮಿತಿ ಸಂಬಂಧಿಸಿ ಭಾರೀ ಚರ್ಚೆಯಾಗಿದೆ.

ವಿಧಾನಸಭೆಯಲ್ಲಿ ದಕ್ಷಿಣ ಕನ್ನಡದ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ರಾಜ್ಯ ಸರ್ಕಾ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸಲು ಪ್ಲಾನ್ ಮಾಡಿದೆ ಎಂದು ಹೇಳಿದ್ದಾರೆ.
ಬಿಪಿಎಲ್ ಬಳಕೆದಾರರಿಗೆ ಗುಡ್ ನ್ಯೂಸ್!
ಗುರುವಾರ ವಿಧಾನಸಭೆಯಲ್ಲಿ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ, ಬಿಪಿಎಲ್ ಕಾರ್ಡ್‌ಗಳ ಪ್ರಸ್ತುತ ಆದಾಯ ಮಿತಿ 1.20 ಲಕ್ಷ ರೂಪಾಯಿಗಳನ್ನು ಹೆಚ್ಚಳ ಮಾಡುವ ಅಗತ್ಯವಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಸದ್ಯದ ದಿನದಲ್ಲಿ ಒಬ್ಬ ಕಾರ್ಮಿಕನ ದಿನಗೂಲಿ ಸಂಬಳನೇ 500 ರೂ. ಅಧಿಕ ಇದೆ. ಇದನ್ನೇ ಒಟ್ಟು ಲೆಕ್ಕ ಹಾಕಿದಾಗ ವಾರ್ಷಿಕವಾಗಿ 1.80 ಲಕ್ಷ ರೂಪಾಯಿ ಆಗುತ್ತದೆ. ಆದರೆ ಬಿಪಿಎಲ್ ಕಾರ್ಡ್ ಆದಾಯ ಮಿತಿ 1.20 ಲಕ್ಷ ರೂಪಾಯಿ. ಸದ್ಯದ ನಿಯಮದ ಪ್ರಕಾರ ಅದಕ್ಕಿಂತ ಹೆಚ್ಚಿನ ಆದಾಯ ಇದ್ದವರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗುವುದಿಲ್ಲ ಎಂದರು. ಆದರೆ ಪ್ರಸ್ತುತ ಇರುವ ಮಾನದಂಡದಿಂದಾಗಿ, ಕೆಲವರು ಅಗತ್ಯವಿದ್ದರೂ ಬಿಪಿಎಲ್ ಕಾರ್ಡ್ ಪಡೆಯಲು ವಿಫಲರಾಗುತ್ತಿದ್ದರೆ. ಆದ್ದರಿಂದ ಅಗತ್ಯವಾಗಿ ಆದಾಯ ಮಿತಿ ಪರಿಷ್ಕರಣೆ ಮಾಡಬೇಕಿದೆ ಎಂದು ಹೇಳಿದರು.
ಮರುಪರಿಶೀಲನೆಗೆ ಸೂಚನೆ!
ಇನ್ನು 7.5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ನಿರಂತರ ತೆರಿಗೆ ಪಾವತಿ ಮಾಡುವವರು, ಸರ್ಕಾರಿ ನೌಕರರು, ನಾಮನಿರ್ದೇಶಿತ ನಿರ್ದೇಶಕರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ. ಆದರೆ ಇದರ ಹೊರತಾಗಿ ಈಗಾಗಲೇ ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ವರ್ಗಾವಣೆಯಾಗಿರುವ 5 ಲಕ್ಷ ಕಾರ್ಡ್‌ಗಳನ್ನು ಮರುಪರಿಶೀಲನೆ ನಡೆಸುವಂತೆ ಕೆ.ಹೆಚ್. ಮುನಿಯಪ್ಪ ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಸದ್ಯದ ಮಾನದಂಡದ ಪ್ರಕಾರ, ಯಾರದ್ದಾದರೂ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಮತ್ತೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಅಂದರೆ ಕುಟುಂಬದಲ್ಲೊಬ್ಬರು ಉದ್ಯೋಗದಲ್ಲಿದ್ದು, ಅವರು ಬೇರೆ ಕಡೆ ವಾಸ ಮಾಡುತ್ತಿದ್ದರೆ, ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂದರೆ ಇಲ್ಲಿ ನೀವು ತಂದೆ-ತಾಯಿಗಳ ಆದಾಯವನ್ನು ವರದಿ ಮಾಡಿ, ಕುಟುಂಬದ ನಿರ್ವಹಣೆ ಕಷ್ಟವಾಗುತ್ತಿದೆ ಎಂಬ ಕಾರಣ ನೀಡಬಹುದು. ಪರಿಶೀಲನೆ ನಂತರ ಇದು ಖಚಿತವಾದರೆ, ಫಲಾನುಭವಿಗಳು 15 ದಿನಗಳಲ್ಲಿ ಕಾರ್ಡ್ ಮರಳಿ ಪಡೆಯುತ್ತಾರೆ.


Click it and Unblock the Notifications