ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ (ಕೆ.ವಿ.ಜಿ.ಬಿ) ರೈತರಿಗೆ ಗರಿಷ್ಠ 50,000 ಸಾವಿರ ರುಪಾಯಿ ಸಾಲ ನೀಡಲಾಗುತ್ತಿದೆ. ಅನಿರೀಕ್ಷಿತವಾಗಿ ಉದ್ಭವಿಸುವ ಖರ್ಚುಗಳನ್ನು ಭರಿಸುವ ಸಲುವಾಗಿ ಈ ಯೋಜನೆ ತರಲಾಗಿದೆ. ಅಂದಹಾಗೆ ಕೆವಿಜಿಬಿ ಮುಖ್ಯ ಕಚೇರಿಯು ಧಾರವಾಡದಲ್ಲಿದ್ದು, ರೈತರ ತುರ್ತಿಗಾಗಿಯೇ ಈ ಸಾಲ ಯೋಜನೆ ಪರಿಚಯಿಸಿದೆ.
ಬ್ಯಾಂಕ್ ನ ಅಧ್ಯಕ್ಷರಾದ ಗೋಪಿ ಕೃಷ್ಣ ಬುಧವಾರ ಪತ್ರಿಕಾಹೇಳಿಕೆಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಐವತ್ತು ಸಾವಿರ ರುಪಾಯಿ ತನಕ ನೀಡುವ ಗರಿಷ್ಠ ಸಾಲವನ್ನು 3 ವರ್ಷದೊಳಗೆ ರೈತರು ಮರುಪಾವತಿಸಬೇಕು. ಕೊರೊನಾದ ಕಾಣಕ್ಕೆ ಸಣ್ಣ ಪ್ರಮಾಣದ ಭೂಮಿ ಹೊಂದಿರುವ ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಟುಂಬ ಹಾಗೂ ಕೃಷಿಯ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳಲು ಈ ಸಾಲ ನೀಡಲಾಗುತ್ತಿದೆ.
ಹೆಲ್ಪ್ ಲೈನ್ ಸಂಖ್ಯೆ ಸಂಪರ್ಕಿಸಿ
ಸಾಲದ ಅಗತ್ಯ ಇರುವ ರೈತರು ತಮಗೆ ಹತ್ತಿರದ ಕೆವಿಜಿಬಿ ಶಾಖೆಗಳಿಗೆ ಭೇಟಿ ನೀಡಬಹುದು. ಇನ್ನು ಬ್ಯಾಂಕ್ ನ ಹೆಲ್ಪ್ ಲೈನ್ ಸಂಖ್ಯೆ 9108699803 ಅನ್ನು ಬೆಳಗ್ಗೆ 10ರಿಂದ ಸಂಜೆ 5ರ ಮಧ್ಯೆ ಸಂಪರ್ಕಿಸಿ, ಸಾಲ ಯೋಜನೆ ಬಗೆಗಿನ ಮಾಹಿತಿಯನ್ನು ಕೇಳಿಕೊಳ್ಳಬಹುದು. ಈ ಹೆಲ್ಪ್ ಲೈನ್ ಏಕೆ ಮಾಡಲಾಗಿದೆ ಅಂದರೆ, ಯಾವುದೇ ಅರ್ಹ ಗ್ರಾಹಕರು, ಅದರಲ್ಲೂ ರೈತರಿಗೆ ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಸಾಲ ನಿರಾಕರಿಸಬಾರದು ಎಂಬ ಉದ್ದೇಶ ಇಟ್ಟುಕೊಳ್ಳಲಾಗಿದೆ.
2,00,633 ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ಇನ್ನು ಸಾರ್ವಜನಿಕರು ಕೂಡ ತಮ್ಮ ಸಮೀಪದ ಶಾಖೆಗಳಿಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ. ಇನ್ನು ಬ್ಯಾಂಕ್ ನೀಡಿರುವ ಮಾಹಿತಿಯಂತೆ, ಈ ತನಕ ಬ್ಯಾಂಕ್ ನಿಂದ 2,00,633 ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಿಸಲಾಗಿದೆ. ಇನ್ನು 2019-20ನೇ ಸಾಲಿಗೆ 3,299 ಕೋಟಿ ಸಾಲ ವಿತರಿಸಲಾಗಿದೆ. 2020-21ನೇ ಸಾಲಿಗೆ 3700 ಕೋಟಿ ಸಾಲ ವಿತರಿಸುವ ಗುರಿ ಇದೆ.
ಬೆಳೆ ಸಾಲ ಪಡೆಯಲು ಬ್ಯಾಂಕ್ ಶಾಖೆಗೆ ಭೇಟಿ
ಹೊಸದಾಗಿ ಬೆಳೆ ಸಾಲ ಪಡೆಯುವುದಕ್ಕೆ ಹಾಗೂ ಈಗಿರುವ ಸಾಲದ ನವೀಕರಣಕ್ಕೆ ರೈತರು ಹತ್ತಿರದ ಕೆವಿಜಿಬಿ ಶಾಖೆಯನ್ನು ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ. ಬ್ಯಾಂಕ್ ನ ಎಲ್ಲ ಶಾಖೆಗಳು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಕಾರ್ಯ ನಿರ್ವಹಿಸುತ್ತವೆ. ಜತೆಗೆ ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಎಲ್ಲ ವಲಯಗಳಿಗೂ ಆದ್ಯತೆ ಮೇಲೆ ಸಾಲ ವಿತರಣೆ ಕ್ರಮಗಳನ್ನು ಹೆಚ್ಚಿಸುವಂತೆ ಕೂಡ ಸೂಚನೆ ನೀಡಲಾಗಿದೆ.


Click it and Unblock the Notifications