ಪ್ರಸ್ತುತ ಪ್ರತಿದಿನ ಒಂದಲ್ಲ ಒಂದು ಉದ್ಯೋಗ ಕಡಿತದ ಸುದ್ದಿಗಳು ಕೇಳಿಬರುತ್ತಿದೆ. ನಾವು ಮಾಧ್ಯಮ, ವೆಬ್‌ಸೈಟ್‌ಗಳನ್ನು ನೋಡಿದಾಗ ಪ್ರತಿದಿನ ಒಂದಾದರೂ ಉದ್ಯೋಗ ಕಡಿತದ ಸುದ್ದಿ ಇರುತ್ತದೆ. ಈ ನಡುವೆ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯೂ ಕೂಡಾ ಉಳಿದ ಸಂಸ್ಥೆಗಳ ಹಾದಿಯನ್ನು ಹಿಡಿದಿದೆ.
ಹೌದು, ಸ್ವಿಗ್ಗಿಯಲ್ಲಿ ಸುಮಾರು ಶೇಕಡ 10ರಷ್ಟು ಅಥವಾ ಸರಿಸುಮಾರು 600 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲಾಗುತ್ತದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತದ ಆತಂಕ ಕಾಡುತ್ತಿದೆ. ಆರ್ಥಿಕ ಹಿಂಜರಿತವು ಎಲ್ಲ ದೇಶಗಳ ಮೇಲೆ ಪ್ರಭಾವ ಉಂಟು ಮಾಡುತ್ತಿದೆ. ಈ ಮಧ್ಯೆ ಸ್ವಿಗ್ಗಿ 2022ರಲ್ಲೇ ಉದ್ಯೋಗಿಗಳ ಕಾರ್ಯವೈಖರಿ, ಗುಣಮಟ್ಟದ ಪರಿಶೀಲನೆಯನ್ನು ಮಾಡಿಕೊಂಡು, ಸುಮಾರು 600 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಲು ಮುಂದಾಗಿದೆ.
ಸಂಸ್ಥೆಯ ಉತ್ಪನ್ನ, ಇಂಜಿಯರಿಂಗ್ ಹಾಗೂ ಆಪರೇಷನ್ ವಿಭಾಗದ ಮೇಲೆ ಈ ಉದ್ಯೋಗ ಕಡಿತ ಹೆಚ್ಚಾಗಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವಿಗ್ಗಿ ಕಾಮರ್ಸ್ ಡೆಲಿವರಿ ಸೇವೆ ಕೂಡಾ ಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಸ್ವಿಗ್ಗಿ ಸಂಸ್ಥೆಯಲ್ಲಿ ಈ ಹಿಂದೆ ಎಷ್ಟು ಮಂದಿಯನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ, ಈ ಉದ್ಯೋಗ ಕಡಿತಕ್ಕೆ ಕಾರಣವೇನು ತಿಳಿಯೋಣ ಮುಂದೆ ಓದಿ....
ಎಷ್ಟು ಉದ್ಯೋಗ ಕಡಿತ, ಉದ್ಯೋಗಿಗಳ ಸಂಖ್ಯೆ?
ಸಂಸ್ಥೆಯಲ್ಲಿ 600 ಮಂದಿಯನ್ನು ವಜಾಗೊಳಿಸಲಾಗುತ್ತದೆ ಎಂಬ ವರದಿಗೆ ಸಂಸ್ಥೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಡಿಸೆಂಬರ್‌ನಲ್ಲಿ ಬಂದ ವರದಿಯ ಪ್ರಕಾರ ಸ್ವಿಗ್ಗಿ ಜನವರಿಯಲ್ಲಿ ಸರಿಸುಮಾರು 250 ಮಂದಿಯನ್ನು ಅಥವಾ ಶೇಕಡ 5ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಬಹುದು. ಇನ್ನು ಮಾಹಿತಿ ಪ್ರಕಾರ ಉದ್ಯೋಗ ಕಡಿತ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ಉದ್ಯೋಗ ಕಡಿತಕ್ಕೆ ಕಾರಣವೇನು?
ಆನ್‌ಲೈನ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯು ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ವೆಚ್ಚ ಕಡಿತ ಮಾಡುವುದು ಎಂದು ಹೇಳಿದೆ. ಈ ಹಿಂದೆಯೂ ಹಲವಾರು ಸಂಸ್ಥೆಗಳು ಇದೇ ಕಾರಣವನ್ನು ನೀಡಿದೆ. ಕಡಿಮೆ ಆದಾಯವಿರುವಾಗ ವೆಚ್ಚವನ್ನು ಕೂಡಾ ಕಡಿಮೆ ಮಾಡುವುದು ಮುಖ್ಯವಾಗುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಆದರೆ ವೆಚ್ಚವನ್ನು ನಿಭಾಯಿಸುವಷ್ಟು ಬಂಡವಾಳ ನಮ್ಮ ಸಂಸ್ಥೆಯಲ್ಲಿದೆ ಎಂದು ಕೂಡಾ ಈ ಸಂದರ್ಭದಲ್ಲೇ ಹೇಳಿದೆ.
ಸ್ವಿಗ್ಗಿ ನಷ್ಟ ಜಿಗಿತ
ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯ ನಷ್ಟವು ಈ ವರ್ಷ ದುಪ್ಪಟ್ಟಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸ್ವಿಗ್ಗಿಯು ಸುಮಾರು 1,617 ಕೋಟಿ ರೂಪಾಯಿಯ ನಷ್ಟವನ್ನು ಕಂಡಿತ್ತು. ಆದರೆ ಈ ಹಣಕಾಸು ವರ್ಷದಲ್ಲಿ ಸ್ವಿಗ್ಗಿಯ ಆದಾಯ ನಷ್ಟ ದುಪ್ಪಟ್ಟಾಗಿ, 3,629 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2022ರಲ್ಲಿ ಒಟ್ಟು ವೆಚ್ಚವು ಶೇಕಡ 131ರಷ್ಟು ಏರಿಕೆಯಾಗಿ 9,574.5 ಕೋಟಿ ರೂಪಾಯಿ ಆಗಿದೆ. ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯು ನೀಡಿದ ವಾರ್ಷಿಕ ಹಣಕಾಸು ಹೇಳಿಕೆ ಪ್ರಕಾರ ಸ್ವಿಗ್ಗಿ ಪ್ರಸ್ತುತ ಡೆಕಾಕಾರ್ನ್ ಆಗಿದೆ. ಅಂದರೆ 10 ಬಿಲಿಯನ್ ಡಾಲರ್‌ಗಿಂತ ಅಧಿಕ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ನಡುವೆ ಹಣಕಾಸು ವರ್ಷ 2022ರಲ್ಲಿ ಸ್ವಿಗ್ಗಿ ಆದಾಯ ಶೇಕಡ 2.2ರಷ್ಟು ಏರಿಕೆಯಾಗಿ 5,705 ಕೋಟಿ ರೂಪಾಯಿಗೆ ತಲುಪಿದೆ. ಆದರೆ ಹಣಕಾಸು ವರ್ಷ 2021ರಲ್ಲಿ ಸ್ವಿಗ್ಗಿ ಆದಾಯವು 2,547 ಕೋಟಿ ರೂಪಾಯಿ ಆಗಿತ್ತು. ವೆಚ್ಚವು ಶೇಕಡ 24.5ರಷ್ಟಿದೆ.


Click it and Unblock the Notifications