ಮುಂಬರುವ ರಾಜ್ಯ ಮತ್ತು ಸಾರ್ವತ್ರಿಕ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಮಂಗಳವಾರ ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು ಎಲ್ಲಾ ಗೃಹಬಳಕೆಯ ಗ್ರಾಹಕರಿಗೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಕಡಿತ ಮಾಡಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಸಿಲಿಂಡರ್ ದರ ಹೆಚ್ಚಾಗಿದ್ದು, ಈಗ ಗ್ರಾಹಕರಿಗೆ ಕೊಂಚ ರಿಲೀಫ್ ಆಗಿದೆ.
ಜುಲೈನಲ್ಲಿ 15 ತಿಂಗಳ ಗರಿಷ್ಠ ಮಟ್ಟ ಶೇಕಡ 7.44ಕ್ಕೆ ಹಣದುಬ್ಬರವು ಏರಿಕೆಯಾಗಿದೆ. ಈ ಮಧ್ಯೆ ಕೇಂದ್ರ ಸಚಿವ ಸಂಪುಟವು ಕೈಗೊಂಡ ಈ ನಿರ್ಧಾರವು ಮಿಲಿಯನ್ ಜನರಿಗೆ ದೊಡ್ಡ ಪರಿಹಾರವನ್ನು ನೀಡುವ ಸಾಧ್ಯತೆಯಿದೆ. 2020ರಲ್ಲಿ ಸರ್ಕಾರವು ಸಬ್ಸಿಡಿಯನ್ನು ಸ್ಥಗಿತಗೊಳಿಸಿದ್ದು, ಅದಾದ ಬಳಿಕ ಗ್ರಾಹಕರಿಗೆ ಅಡುಗೆ ಅನಿಲದಲ್ಲಿ ಸಬ್ಸಿಡಿಯನ್ನು ಈಗ ಮತ್ತೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಉಜ್ವಲ ಯೋಜನೆ ಫಲಾನುಭವಿಗಳಿಗೆ ಅಧಿಕ ಸಬ್ಸಿಡಿ
ಎಲ್ಲ ಎಲ್‌ಪಿಜಿ ಗ್ರಾಹಕರಿಗೆ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತ ಮಾಡಿರುವ ನಡುವೆಯೇ ಉಜ್ವಲ ಯೋಜನೆಯಡಿಯಲ್ಲಿ ಹೆಚ್ಚುವರಿ ಕಡಿತ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ 200 ರೂಪಾಯಿಗಳ ಹೆಚ್ಚುವರಿ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ.
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಂಪೂರ್ಣ ಸಬ್ಸಿಡಿ ಮೊತ್ತವು 400 ರೂಪಾಯಿ ಆಗಿದೆ. ಅಡುಗೆ ಅನಿಲದ ಬೆಲೆ ಇಳಿಕೆಯ ಇತ್ತೀಚಿನ ನಿರ್ಧಾರದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 7,500 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.
"ಎಲ್ಲಾ ಬಳಕೆದಾರರಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಹಿಂದೆ ಎಲ್‌ಪಿಜಿ ಸಿಲಿಂಡರ್ ದರ ಎಷ್ಟಿತ್ತು?
ಈ ಹಿಂದೆ, 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1053 ರೂಪಾಯಿ ಆಗಿದೆ. ಮುಂಬೈನಲ್ಲಿ 1052.50 ರೂಪಾಯಿ, ಚೆನ್ನೈನಲ್ಲಿ 1068.50 ರೂಪಾಯಿ, ಕೋಲ್ಕತ್ತಾದಲ್ಲಿ 1079 ರೂಪಾಯಿ, ಬೆಂಗಳೂರಿನಲ್ಲಿ 1,105.50 ರೂಪಾಯಿ ಆಗಿದೆ. ಕಳೆದ ಬಾರಿ ತೈಲ ಕಂಪನಿಗಳು ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿ ಏರಿಕೆ ಮಾಡಿದೆ.
ಪ್ರಸ್ತುತ ಎಲ್‌ಪಿಜಿ ದರ ಎಷ್ಟಿದೆ?
ಬೆಂಗಳೂರು: 905.50 ರೂಪಾಯಿ
ನವದೆಹಲಿ: 903 ರೂಪಾಯಿ
ಕೋಲ್ಕತ್ತಾ: 929 ರೂಪಾಯಿ
ಮುಂಬೈ: 902.50 ರೂಪಾಯಿ
ಚೆನ್ನೈ: 918.50 ರೂಪಾಯಿ
ಭುವನೇಶ್ವರ: 929 ರೂಪಾಯಿ
ಚಂಡೀಗಡ: 912.50 ರೂಪಾಯಿ
ಹೈದರಾಬಾದ್: 955 ರೂಪಾಯಿ
ಜೈಪುರ: 906.50 ರೂಪಾಯಿ
ಲಕ್ನೋ: 940.50 ರೂಪಾಯಿ
ಪಾಟ್ನಾ: 1001 ರೂಪಾಯಿ


Click it and Unblock the Notifications