ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆಯ ಹಾಗೂ ವಾಣಿಜ್ಯ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ತಿಂಗಳು ಕೂಡಾ ಮೊದಲ ದಿನ ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆಯನ್ನು ಏರಿಸಲಾಗಿದೆ. ಕಳೆದ ತಿಂಗಳು ಕೂಡಾ ವಾಣಿಜ್ಯ ಎಲ್‌ಪಿಜಿ ಬಳಕೆದಾರರಿಗೆ ತೈಲ ಸಂಸ್ಥೆಗಳು ಶಾಕ್ ನೀಡಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ವಾಣಿಜ್ಯ ಎಲ್‌ಪಿಜಿಯ ರಿಟೇಲ್ ದರವನ್ನು ಡಿಸೆಂಬರ್ 1, ಶುಕ್ರವಾರ, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 21 ರೂಪಾಯಿಗಳಷ್ಟು ಹೆಚ್ಚಿಸಿದೆ. ಇದು ತಕ್ಷಣವೇ ಜಾರಿಗೆ ಬರುತ್ತದೆ.

ಬೆಂಗಳೂರು ಸೇರಿ, ಇತರೆ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ
ಹೆಚ್ಚಳ ಮಾಡಿದ ಬಳಿಕ 19 ಕಿಲೋಗ್ರಾಂಗಳ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ರಿಟೇಲ್ ಮಾರಾಟದ ಬೆಲೆಯು ನವದೆಹಲಿಯಲ್ಲಿ 1,796.5 ರೂಪಾಯಿ ಮತ್ತು ಮುಂಬೈನಲ್ಲಿ 1,749 ರೂಪಾಯಿಗೆ ತಲುಪಿದೆ. ಇನ್ನು ಗುರುಗ್ರಾಮದಲ್ಲಿ 21 ರೂಪಾಯಿ ದರ ಹೆಚ್ಚಳವಾಗಿ 1804 ರೂಪಾಯಿ ಆಗಿದೆ. ಇನ್ನು ನಮ್ಮ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ದರವು 26 ರೂಪಾಯಿ ಜಿಗಿತ ಕಂಡಿದ್ದು, 1883 ರೂಪಾಯಿಗೆ ತಲುಪಿದೆ.
ಭುವನೇಶ್ವರದಲ್ಲಿ 22.50 ರೂಪಾಯಿ ದರ ಏರಿಕೆಯಾಗಿ ಪ್ರಸ್ತುತ 19 ಕೆಜಿ ಸಿಲಿಂಡರ್ ದರ 1945 ರೂಪಾಯಿ ಆಗಿದ್ದರೆ, ಚಂಡೀಗಢದಲ್ಲಿ 1816 ರೂಪಾಯಿ ಆಗಿದೆ. ಇನ್ನು ಜೈಪುರದಲ್ಲಿ 1819 ರೂಪಾಯಿ ವಾಣಿಜ್ಯ ಸಿಲಿಂಡರ್ ಬೆಲೆಯಾಗಿದೆ. ಪಾಟ್ನಾದಲ್ಲಿ 2067.50 ರೂಪಾಯಿ ಪ್ರಸ್ತುತ ಸಿಲಿಂಡರ್ ಬೆಲೆಯಾಗಿದೆ. ಇನ್ನು ತಿರುವನಂತಪುರದಲ್ಲಿ 1827 ರೂಪಾಯಿ, ಚೆನ್ನೈನಲ್ಲಿ 1,968.5 ರೂಪಾಯಿ ಮತ್ತು ಕೋಲ್ಕತ್ತಾದಲ್ಲಿ 1,908 ರೂಪಾಯಿ ವಾಣಿಜ್ಯ ಸಿಲಿಂಡರ್ ಪರಿಷ್ಕೃತ ದರವಾಗಿದೆ.
ಗೃಹ ಬಳಕೆ ಎಲ್‌ಪಿಜಿ ದರ ಏರಿಕೆಯಾಗಿದೆಯೇ?
ವಾಣಿಜ್ಯ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದ್ದರೂ ಕೂಡಾ ಗೃಹ ಬಳಕೆಗೆ ಬಳಸಲಾಗುವ 14.2 ಕೆಜಿ ಎಲ್‌ಪಿಜಿ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿ ಎಲ್‌ಪಿಜಿ ಬೆಲೆ 903.50 ರೂಪಾಯಿ, ಕೋಲ್ಕತ್ತಾದಲ್ಲಿ 929 ರೂಪಾಯಿ, ಮುಂಬೈನಲ್ಲಿ 902.5 ರೂಪಾಯಿ, ಚೆನ್ನೈನಲ್ಲಿ 918.5 ರೂಪಾಯಿ ಆಗಿದೆ.
ಗೃಹ ಬಳಕೆಯ ಎಲ್‌ಪಿಜಿ ದರವನ್ನು ನಿರಂತರವಾಗಿ ಏರಿಕೆ ಮಾಡಲಾಗಿದ್ದು, ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ 200 ರೂಪಾಯಿ ಇಳಿಕೆ ಮಾಡುವ ಘೋಷಣೆ ಮಾಡಿದೆ. ಅದಾದ ಬಳಿಕ ಬೆಂಗಳೂರಿನಲ್ಲಿ 1103.50 ರೂಪಾಯಿ ಆಗಿದ್ದ ಎಲ್‌ಪಿಜಿ ದರವು ಸೆಪ್ಟೆಂಬರ್‌ನಿಂದ 903.50 ರೂಪಾಯಿಗೆ ಇಳಿಕೆಯಾಗಿದೆ.


Click it and Unblock the Notifications