ಪ್ರತಿ ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ದರದ ಪರಿಷ್ಕರಣೆ ಮಾಡುತ್ತದೆ. ಅದರಂತೆ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದೆ. ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಸುಮಾರು 50 ರೂಪಾಯಿ ಹೆಚ್ಚಿಸಲಾಗಿದ್ದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 350.5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಯಿಂದಾಗಿ ಹಲವಾರು ವ್ಯಾಪಾರಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್, "ಈ ರೀತಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಿರುವುದು ಅತೀ ಅಸಹಜವಾಗಿದೆ ಮತ್ತು ಇದು ಪ್ರಮುಖವಾಗಿ ಹೋಟೆಲ್ ಇಂಡಸ್ಟ್ರೀಯ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟು ಮಾಡುತ್ತದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆಗೆ ಸಭೆ ನಡೆಸುವುದಾಗಿದೆ ಎಂದು ಕೂಡಾ ಹೇಳಿದ್ದಾರೆ.

ಪ್ರಮುಖ ಎರಡು ಬೇಡಿಕೆಗಳು
"ನಾವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದೇವೆ. ಹಾಗೆಯೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯನ್ನು ಕೂಡಾ ಭೇಟಿಯಾಗಲಿದ್ದೇವೆ. ನಾವು ಮಾರ್ಚ್ 16 ಅಥವಾ 17ರಂದು ಸಭೆ ನಡೆಯಲಿದೆ. ನಮ್ಮಲ್ಲಿ ಪ್ರಮುಖವಾಗಿ ಎರಡು ಬೇಡಿಕೆಗಳು ಇದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ರಷ್ಟು ಇಳಿಕೆ ಮಾಡಬೇಕು, ವಾಣಿಜ್ಯ ಅನಿಲದ ಮೇಲಿನ ವಿನಾಯಿತಿಯನ್ನು ನೀಡಬೇಕು ಎಂಬುವುದು ನಮ್ಮ ಬೇಡಿಕೆಯಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟೋ ರಿಕ್ಷಾ ಚಾಲಕರು, "ಜೀವನವನ್ನು ದೂಡಲು ನಾವು ಹೆಚ್ಚುವರಿ ಮೊತ್ತವನ್ನು ಸಂಪಾದನೆ ಮಾಡಬೇಕಾಗುತ್ತದೆ, ಅದಕ್ಕಾಗಿ ಹಗಲು ರಾತ್ರಿ ದುಡಿಯಬೇಕಾಗಿದೆ. ಈಗ ದರ ಏರಿಕೆಯಿಂದಾಗಿ ನಮಗೆ ಸಂಕಷ್ಟ ಉಂಟಾಗಿದೆ," ಎಂದು ತಿಳಿಸಿದ್ದಾರೆ. ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ ಸಂಪತ್, "6 ರೂಪಾಯಿಗಳ ಗ್ಯಾಸ್ ಹೆಚ್ಚಳವು ಆಟೋ ಚಾಲಕರಿಗೆ ಸಾಕಷ್ಟು ಕಡಿವಾಣವನ್ನು ಹಾಕಿದೆ. ಪ್ರತಿ ಲೀಟರ್‌ಗೆ 62.57 ರಿಂದ 68.92 ಕ್ಕೆ ಏರಿಕೆಯಾಗಿದೆ. ಈಗಾಗಲೇ ಹೆಣಗಾಡುತ್ತಿರುವ ಆಟೋ-ರಿಕ್ಷಾ ಚಾಲಕರಿಗೆ ಇದು ಅತೀ ಕಷ್ಟಕರವಾಗಿದೆ," ಎಂದು ತಿಳಿಸಿದ್ದಾರೆ.
ನೂತನ ದರದ ಬಗ್ಗೆ ಮಾಹಿತಿ
ಮಾರ್ಚ್ 1, 2023ರಿಂದ ಜಾರಿಗೆ ಬರುವಂತೆ ಅಡುಗೆ ಅನಿಲ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿಗರು ಪ್ರತಿ ಸಿಲಿಂಡರ್ 14.2 ಕೆಜಿ ಎಲ್‌ಪಿಜಿಗೆ 1,105.50 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಹಿಂದೆ ಎಲ್‌ಪಿಜಿ ದರವು 1,055.50 ರೂಪಾಯಿ ಆಗಿತ್ತು. ಎಲ್‌ಪಿಜಿ ದರ ಬೆಂಗಳೂರಿನಲ್ಲಿ 1,105.50 ರೂಪಾಯಿಗೆ ತಲುಪಿದೆ. ಮಂಗಳೂರಿನಲ್ಲಿ ಈ ಹಿಂದೆ 1,053.50 ರೂಪಾಯಿ ಆಗಿದ್ದ ಅಡುಗೆ ಅನಿಲ ದರ ಈಗ 1,103.50 ರೂಪಾಯಿಗೆ ಏರಿಕೆಯಾಗಿದೆ.


Click it and Unblock the Notifications