ಎಲ್‌ಪಿಜಿ ಗ್ರಾಹಕರಿಗೆ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸಲು ನಿರ್ಧಾರ ಮಾಡಿದೆ. ಕಳೆದ ಹಲವಾರು ತಿಂಗಳುಗಳಿಂದ ಎಲ್‌ಪಿಜಿ ಸಿಲಿಂಡರ್ ದರವನ್ನು ಸ್ಥಿರವಾಗಿರಿಸಲಾಗಿದೆ ಎಂದು ವರದಿಯಾಗಿದೆ.
"ಎಲ್ಲಾ ಬಳಕೆದಾರರಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇದು ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಪ್ರಸ್ತುತ, 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1053 ರೂಪಾಯಿ ಆಗಿದೆ. ಮುಂಬೈನಲ್ಲಿ 1052.50 ರೂಪಾಯಿ, ಚೆನ್ನೈನಲ್ಲಿ 1068.50 ರೂಪಾಯಿ, ಕೋಲ್ಕತ್ತಾದಲ್ಲಿ 1079 ರೂಪಾಯಿ, ಬೆಂಗಳೂರಿನಲ್ಲಿ 1,105.50 ರೂಪಾಯಿ ಆಗಿದೆ. ಕಳೆದ ಬಾರಿ ತೈಲ ಕಂಪನಿಗಳು ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿ ಏರಿಕೆ ಮಾಡಿದೆ.
ಈ ಹಿಂದೆ ಮೇ ತಿಂಗಳಿನಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಲಾಗಿತ್ತು. ಈ ವರ್ಷಾಂತ್ಯದಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಎಲ್‌ಪಿಜಿ ದರವನ್ನು 200 ರೂಪಾಯಿಯಷ್ಟು ಕಡಿತ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಕೈಗೊಂಡಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 1, 2016 ರಂದು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಮಹಿಳೆಯರಿಗೆ 50 ಮಿಲಿಯನ್ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸುವ ನಿಟ್ಟಿನಲ್ಲಿ ಪ್ರಾರಂಭ ಮಾಡಿದ್ದಾರೆ.
ವಾಣಿಜ್ಯ ಸಿಲಿಂಡರ್ ದರ ಇಳಿಕೆ
ಈ ತಿಂಗಳ ಆರಂಭದಲ್ಲಿ, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡಿದೆ. ಆಗಸ್ಟ್ 1 ರಂದು ದೇಶೀಯ ಅಡುಗೆ ಅನಿಲ ದರಗಳನ್ನು ಸ್ಥಿರವಾಗಿರಿಸಲಾಗಿದೆ. ಇನ್ನು ಪರಿಷ್ಕರಣೆಯ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 99.75 ರೂಪಾಯಿ ಇಳಿಕೆಯಾಗಿದೆ. ಈ ಹಿಂದೆಯೂ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿತಗೊಳಿಸಲಾಗಿದೆ.


Click it and Unblock the Notifications