ಆಗಸ್ಟ್ ತಿಂಗಳು ಅಂತ್ಯವಾಗಿದ್ದು, ಸೆಪ್ಟೆಂಬರ್ ತಿಂಗಳು ಆರಂಭವಾಗಿದೆ. ಈ ಹೊಸ ತಿಂಗಳ ಆರಂಭದಲ್ಲೇ ಹಲವಾರು ಬದಲಾವಣೆ ಆಗಿದೆ. ಇನ್ನು ತಿಂಗಳ ಮಧ್ಯದಲ್ಲಿ ಕೆಲವು ದರ, ನಿಯಮ ಬದಲಾವಣೆ ಆಗಲಿದೆ. ತಿಂಗಳ ಮೊದಲ ದಿನವೇ ಎಲ್‌ಪಿಜಿ ದರದಲ್ಲಿ ಬದಲಾವಣೆಯಾಗಿದೆ. ವಾಣಿಜ್ಯ ಎಲ್‌ಪಿಜಿ ದರವು ಇಳಿಕೆಯಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ.
ಹೊಸ ತಿಂಗಳಿನಲ್ಲಿ ಆದ ಹಲವಾರು ಬದಲಾವಣೆಗಳು ಖಂಡಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸು ಜೀವನದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಹಣಕಾಸು ಸಂಬಂಧಿತ ಯಾವುದೇ ಬದಲಾವಣೆಯು ನಮ್ಮ ವೈಯಕ್ತಿಕ ಬಜೆಟ್ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಕೆಲವು ಬ್ಯಾಂಕಿಂಗ್ ಅಥವಾ ಹಣಕಾಸು ಸಂಬಂಧಿತ ಕಾರ್ಯಗಳನ್ನು ಮಾಡಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್‌ಬಿ ಬ್ಯಾಂಕ್ ತನ್ನ ಗ್ರಾಹಕರು ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡುವಂತೆ ಈ ಹಿಂದೆ ತಿಳಿಸಿದ್ದು ಆಗಸ್ಟ್ 31 ಕೆವೈಸಿ ಮಾಡಲು ಕೊನೆಯ ದಿನಾಂಕವಾಗಿದೆ. ಕೆವೈಸಿ ಮಾಡದಿದ್ದರೆ ವಹಿವಾಟು ನಡೆಸಲು ಅಡೆತಡೆ ಉಂಟಾಗಬಹುದು. ಇನ್ನು ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಕೊನೆಯ ದಿನಾಂಕ ಕೂಡಾ ಆಗಸ್ಟ್ 31 ಆಗಿದೆ. ರೈತರು ಕೆವೈಸಿ ಮಾಡದಿದ್ದರೆ ಯೋಜನೆಯ ಮೊತ್ತ ಜಮೆ ಆಗದೆ ಇರಬಹುದು. ಇನ್ನುಳಿದಂತೆ ಈ ಹೊಸ ತಿಂಗಳಿನಲ್ಲಿ ಯಾವೆಲ್ಲ ದರ ಏರಿಕೆ, ಇಳಿಕೆಯಾಗಿದೆ, ಏನೆಲ್ಲ ಹಣಕಾಸು ಸಂಬಂಧಿತ ಬದಲಾವಣೆಯಾಗಿದೆ ಎಂದು ತಿಳಿಯೋಣ ಮುಂದೆ ಓದಿ....
ಜನರಲ್ ವಿಮಾ ಪ್ರೀಮಿಯಂ
ಐಆರ್‌ಟಿಎಐ ಜನರೆಲ್ ವಿಮೆಯ ನಿಯಮವನ್ನು ಬದಲಾವಣೆ ಮಾಡಿದೆ. ಈ ಹಿಂದೆ ವಿಮಾ ಏಜೆಂಟ್‌ಗಳು ಸುಮಾರು ಶೇಕಡ 30ರಿಂದ 35ರಷ್ಟು ಕಮಿಷನ್ ಅನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಶೇಕಡ 20ರಷ್ಟು ಮಾತ್ರ ಕಮಿಷನ್ ಲಭ್ಯವಾಗಲಿದೆ. ಇದರಿಂದಾಗಿ ವಿಮೆ ಪಡೆಯುವವರ ಪ್ರೀಮಿಯಂ ಮೊತ್ತ ಇಳಿಕೆಯಾಗಲಿದೆ. ಈ ನಿಯಮವು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಜಾರಿಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಟೋಲ್ ತೆರಿಗೆ ಏರಿಕೆ
ಯಮುನಾ ಎಕ್ಸ್‌ಪ್ರೆಸ್‌ನಿಂದ ದೆಹಲಿಗೆ ಪ್ರವಾಸ ಮಾಡುವವರು ಇಂದಿನಿಂದ (ಸೆಪ್ಟೆಂಬರ್ 1) ಅಧಿಕ ಟೋಲ್ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಕಾರು, ಜೀಪು, ವಾನುಗಳು, ಮೋಟಾರು ವಾಹನಗಳ ಟೋಲ್ ಅನ್ನು 2.65 ಕಿಲೋ ಮೀಟರ್‌ಗೆ ರೂಪಾಯಿ 2.50ರಷ್ಟು ಹೆಚ್ಚಳ ಮಾಡಲಾಗಿದೆ. ಕಿಲೋ ಮೀಟರ್‌ಗೆ ಹತ್ತು ಪೈಸೆಯಂತೆ ಹೆಚ್ಚಿಸಲಾಗಿದೆ. ವಾಣಿಜ್ಯ ವಾಹನಗಳು, ಕಾರ್ಗೊ ಟ್ರಕ್‌ಗಳು, ಮಿನಿ ಬಸ್‌ಗಳ ಟೋಲ್ ಕಿಲೋಮೀಟರ್‌ಗೆ 4.15 ರೂಪಾಯಿಗೆ ಏರಳಿದೆ. ಈ ಹಿಂದೆ ರೂಪಾಯಿ 3.90 ಆಗಿತ್ತು. ಟ್ರಕ್, ಬಸ್‌ಗಳ ಟೋಲ್ ರೂಪಾಯಿ 7.90ರಿಂದ ರೂಪಾಯಿ 8.45ಕ್ಕೆ ಹೆಚ್ಚಾಗಿದೆ.
ಎಲ್‌ಪಿಜಿ ಸಿಲಿಂಡರ್ ದರ ಏರುತ್ತಾ, ಇಳಿಯುತ್ತಾ?
ಸೆಪ್ಟೆಂಬರ್ 1ರಂದೇ ವಾಣಿಜ್ಯ ಸಿಲಿಂಡರ್ ದರವು ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ದೊರೆತಿದೆ. ದೆಹಲಿಯಲ್ಲಿ ಗುರುವಾರದಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ರೂಪಾಯಿ ಇಳಿಕೆ ಬಳಿಕ 1,976.50 ರು ನಿಂದ 1885 ರು ಗೆ ಇಳಿದಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ತಿಂಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಗೃಹ ಬಳಕೆಯ ಎಲ್‌ಪಿಜಿ ದರ ಪರಿಷ್ಕರಣೆ ಸಾಧ್ಯತೆ ಇದೆ.
ಆಡಿ ಕಾರು ದರ ಹೆಚ್ಚಳ
ನೀವು ಈ ತಿಂಗಳ 20ರ ಬಳಿಕ ಆಡಿ (Audi) ಕಾರು ಖರೀದಿ ಮಾಡಲು ನಿರ್ಧಾರ ಮಾಡಿದ್ದರೆ ನಿಮ್ಮ ಬಜೆಟ್ ಕೊಂಚ ಅಧಿಕವಾಗಲಿದೆ. ಯಾಕೆಂದರೆ ಆಡಿ ಕಾರು ಸೆಪ್ಟೆಂಬರ್‌ನಿಂದ ದುಬಾರಿಯಾಗಲಿದೆ. ಆಡಿ ಕಾರು ದರ ಶೇಕಡ 2.5ರಷ್ಟು ಹೆಚ್ಚಳವಾಗಲಿದೆ. ಸೆಪ್ಟೆಂಬರ್ 20ರಿಂದ ಹೊಸ ದರ ಜಾರಿಗೆ ಬರಲಿದೆ. ಭಾರತದಲ್ಲಿ ಆಡಿ A4, A6, A8 L, Q5, Q7, Q8, S5 ಸ್ಪೋರ್ಟ್ಸ್‌ಬಾಕ್, RS 5 ಸ್ಪೋರ್ಟ್ಸ್‌ಬಾಕ್, RS Q8 ಇದೆ.
ನ್ಯಾಷನಲ್ ಪಿಂಚಣಿ ಯೋಜನೆ
ಪೆನ್ಶನ್ ಫಂಡ್ ರೆಗ್ಯೂಲೇಟರ್ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ (ಪಿಎಫ್‌ಆರ್‌ಡಿಎ) ನ್ಯಾಷನಲ್ ಪಿಂಚಣಿ ಯೋಜನೆ (ಎನ್‌ಪಿಎಸ್) ನ ಕ್ರೆಡಿಟ್ ಕಾರ್ಡ್ ಮೂಲಕ ಕೊಡುಗೆ ಸ್ವೀಕಾರವನ್ನು ಸ್ಥಗಿತ ಮಾಡಿದೆ. ಆದರೆ ಎನ್‌ಪಿಎಸ್ ಖಾತೆ ಹೊಂದಿರುವವರು ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಖಾತೆಗೆ ಹಣ ಜಮೆ ಮಾಡಬಹುದು.


Click it and Unblock the Notifications