ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿಯನ್ನು 200 ರೂಪಾಯಿಯಿಂದ 300 ರೂಪಾಯಿಗೆ ಏರಿಕೆ ಮಾಡಿದೆ. ಸಬ್ಸಿಡಿ ಮೊತ್ತವನ್ನು ಏರಿಕೆ ಮಾಡಲು ಪ್ರಧಾನ ಮಂತ್ರಿ ಮೋದಿ ಸರ್ಕಾರವು ಬುಧವಾರ ಅನುಮೋದನೆಯನ್ನು ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನು 100 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳೆಯರು ಮತ್ತು ಬಡವರ ಕಲ್ಯಾಣಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕಳೆದ ತಿಂಗಳು ರಕ್ಷಾಬಂಧನದ ಮುನ್ನಾ ದಿನ ದೇಶೀಯ ಎಲ್‌ಪಿಜಿ ಬೆಲೆ 200 ರೂಪಾಯಿ ಇಳಿಕೆ ಮಾಡಲಾಗಿದೆ. ಇದರಿಂದಾಗಿ ದರವು ಸುಮಾರು 900 ರೂಪಾಯಿಗೆ ತಲುಪಿದೆ. ಆದರೆ, ಉಜ್ವಲ ಫಲಾನುಭವಿಗಳಿಗೆ ದರವು 700 ರೂಪಾಯಿಗೆ ತಲುಪಿದೆ.
ಉಜ್ವಲ ಫಲಾನುಭವಿಗಳು ಈಗ ಪ್ರತಿ ಸಿಲಿಂಡರ್‌ಗೆ 100 ರೂಪಾಯಿ ಹೆಚ್ಚುವರಿ ಸಬ್ಸಿಡಿಗೆ ಅರ್ಹರಾಗಿರುತ್ತಾರೆ. ಕೇಂದ್ರ ಸಚಿವ ಸಂಪುಟವು ಆಗಸ್ಟ್‌ನಲ್ಲಿ ಎಲ್‌ಪಿಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಎಲ್ಲಾ ಗ್ರಾಹಕರಿಗೆ 200 ರೂಪಾಯಿ ಕಡಿತ ಮಾಡಿದೆ.
ಉದಾಹರಣೆಗೆ ದೆಹಲಿಯಲ್ಲಿ, ಈ ನಿರ್ಧಾರವು 14.2 ಕೆಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ಅಸ್ತಿತ್ವದಲ್ಲಿದ್ದ 1,103 ರೂಪಾಯಿಯಿಂದ 903 ರೂಪಾಯಿಗೆ ಇಳಿಸಿದೆ. ಕೇಂದ್ರ ಸಚಿವ ಸಂಪುಟವು ಕಳೆದ ತಿಂಗಳು ಪಿಎಂಯುವೈ ಅನ್ನು ವರ್ಷ 2023-24 ರಿಂದ 2025-26 ರ ಮೂರು ವರ್ಷಗಳವರೆಗೆ 75 ಲಕ್ಷ ಎಲ್‌ಪಿಜಿ ಸಂಪರ್ಕವನ್ನು ಬಿಡುಗಡೆ ಮಾಡಲು ಅನುಮೋದಿಸಿದೆ.
ಈ ಹಿಂದೆ ಮೇ ತಿಂಗಳಿನಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಲಾಗಿತ್ತು. ಈ ವರ್ಷಾಂತ್ಯದಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಎಲ್‌ಪಿಜಿ ದರವನ್ನು 200 ರೂಪಾಯಿಯಷ್ಟು ಕಡಿತ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಕೈಗೊಂಡಿದೆ. ಈಗ ಉಜ್ವಲಾ ಯೋಜನೆಗೆ ಸಬ್ಸಿಡಿಯನ್ನು ಏರಿಕೆ ಮಾಡಲಾಗುತ್ತಿದೆ.


Click it and Unblock the Notifications