ಕ್ರಿಕೆಟಿಗರು 35-40 ವರ್ಷದೊಳಗೆ ನಿವೃತ್ತರಾಗಿ ಬಿಡುತ್ತಾರೆ. ಅದಾದ ಬಳಿಕ ಜೀವನೋಪಾಯಕ್ಕೆ ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ಇರುವ ಸಹಜ ಕುತೂಹಲ. ಒಳ್ಳೆಯ ಅಂತಾರಾಷ್ಟ್ರೀಯ ಕ್ರಿಕೆಟಿಗರಾದರೆ ಆಟದ ಸಂಭಾವನೆ, ಜಾಹೀರಾತುಗಳಿಂದ ದಂಡಿ ದುಡ್ಡು ಸಂಪಾದನೆ ಮಾಡಿರುತ್ತಾರೆ. ಈ ಹಣದಿಂದ ಏನು ಮಾಡುತ್ತಾರೆ? ಅನೇಕ ಕ್ರಿಕೆಟಿಗರು ನಿವೃತ್ತಿ ಬಳಿಕ ಕಾಮೆಂಟರಿ ಅಥವಾ ಕ್ರಿಕೆಟ್ ವಿಶ್ಲೇಷಣೆಗೆ ಇಳಿಯುತ್ತಾರೆ. ಅದು ಕೆಲವರಿಗೆ ಪ್ಯಾಷನ್, ಹವ್ಯಾಸವಾದರೆ, ಕೆಲವರಿಗೆ ವೃತ್ತಿಯಾಗಬಹುದು. ಇನ್ನೂ ಕೆಲವರು ಕ್ರಿಕೆಟ್ ಅಕಾಡೆಮಿ ಆರಂಭಿಸುವುದುಂಟು. ಆದರೆ, ಕೆಲ ಪ್ರಮುಖ ಕ್ರಿಕೆಟಿಗರು ಹೋಟೆಲ್ ಬಿಸಿನೆಸ್ ಆರಂಭಿಸುವುದನ್ನು ಗಮನಿಸಬಹುದು.
ನಿವೃತ್ತಿಗೆ ಮೊದಲೇ ಅನೇಕರು ಹೋಟೆಲ್, ರೆಸ್ಟೋರೆಂಟ್‌ಗಳನ್ನು ತೆರೆಯುವುದನ್ನು ಕಂಡಿದ್ದೇವೆ. ಪುಣೆ, ಕೋಲ್ಕತಾ ಮತ್ತು ಡೆಲ್ಲಿ ನಂತರ ಇತ್ತೀಚೆಗೆ ಮುಂಬೈನಲ್ಲಿ ವಿರಾಟ್ ಕೊಹ್ಲಿಸ್ ಒನ್8 ಕಮ್ಯೂನ್ ಎಂಬ ಹೋಟೆಲ್ ಆರಂಭವಾಗಿದೆ. ವಿರಾಟ್ ಕೊಹ್ಲಿ ಮಾಲಿಕತ್ವದ ಈ ಹೋಟೆಲ್‌ಗೆ ಒಳ್ಳೆಯ ಸ್ಪಂದನೆ ಕೂಡ ಸಿಕ್ಕಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸಚಿನ್ಸ್, ತೆಂಡೂಲ್ಕರ್ಸ್
ಕಿಂಗ್ ಕೊಹ್ಲಿಯೇನೋ ಹೋಟೆಲ್ ಉದ್ಯಮದಲ್ಲಿ ಬೌಂಡರಿಗಳನ್ನು ಸಖತ್ತಾಗಿ ಭಾರಿಸಿ ಬ್ಯಾಟಿಂಗ್ ಮಾಡುತ್ತಿರಬಹುದು. ಅದರೆ ಎಲ್ಲಾ ಕ್ರಿಕೆಟಿಗರೂ ಇದೇ ರೀತಿ ಯಶಸ್ವಿಯಾಗುತ್ತಾರೆ, ಆಗಿದ್ದಾರೆ ಎಂದೇನಿಲ್ಲ. ಸಚಿನ್ ತೆಂಡೂಲ್ಕರ್ ಇದಕ್ಕೆ ಪಕ್ಕಾ ಉದಾಹರಣೆ. ಸಚಿನ್ ತೆಂಡೂಲ್ಕರ್ ಇನ್ನೂ ಕ್ರಿಕೆಟ್ ವೃತ್ತಿಯಲ್ಲಿರುವಾಗಲೇ ಹೋಟೆಲ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದರು.
2002ರಲ್ಲಿ ತೆಂಡೂಲ್ಕರ್ಸ್ ಎನ್ನುವ ರೆಸ್ಟೋರೆಂಟ್ ಅನ್ನು ತೆರೆದರು. ಸ್ವಲ್ಪ ವರ್ಷಗಳ ಬಳಿಕ ಸಚಿನ್ಸ್ ಎನ್ನುವ ಇನ್ನೊಂದು ರೆಸ್ಟೋರೆಂಟ್ ಅನ್ನು ಮುಂಬೈ ಮತ್ತು ಬೆಂಗಳೂರಿನಲ್ಲಿ ತೆರೆದರು. ಇವರ ಬೆನ್ನಿಗೆ ಇದ್ದದ್ದು ಸಂಜಯ್ ನಾರಂಗ್ ಎಂಬ ಹೋಟೆಲ್ ಉದ್ಯಮಿಯೇ. ಹಲವಾರು ದೇಶಗಳನ್ನು ಸುತ್ತಿದ್ದ ಸಚಿನ್ ತೆಂಡೂಲ್ಕರ್‌ಗೆ ಇಷ್ಟವಾದ ಖಾದ್ಯಗಳನ್ನು ಈ ರೆಸ್ಟೋರೆಂಟ್‌ನಲ್ಲಿ ಬಡಿಸಲಾಗುತ್ತಿತ್ತು. ಆದರೆ ಈ ಹೋಟೆಲ್‌ಗಳು ಜನರಿಗೆ ಇಷ್ಟವಾಗದೇ ಹೋಯಿತು. ಈಗ ಇವು ಬಂದ್ ಆಗಿವೆ. ಸಚಿನ್ ಹೆಸರಿನ ಖ್ಯಾತಿ ಇದ್ದರೂ, ವೃತ್ತಿಪರ ಹೋಟೆಲಿಗರೇ ಈ ರೆಸ್ಟೋರೆಂಟ್‌ಗಳನ್ನು ನಿರ್ವಹಿಸಿದ್ದರೂ ಯಶಸ್ಸು ಬರಲಿಲ್ಲ. ಗ್ರಾಹಕರನ್ನು ತೃಪ್ತಿಪಡಿಸಲು ಆಗಲಿಲ್ಲ.
ವೀರೇಂದ್ರ ಸೆಹ್ವಾಗ್
ಭಾರತದ ಮಾಜಿ ಓಪನಿಂಗ್ ಬ್ಯಾಟರ್ ವೀರೇಂದರ್ ಸೆಹ್ವಾಗ್ 2006ರಲ್ಲಿ ದೆಹಲಿಯ ಮೋತಿನಗರ್‌ನಲ್ಲಿ ಸೆಹ್ವಾಗ್ಸ್ ಫೇವರಿಟ್ಸ್ ಎನ್ನುವ ಶುದ್ಧ ಶಾಖಾಹಾರಿ ರೆಸ್ಟೋರೆಂಟ್ ಅನ್ನು ಆರಂಭಿಸಿದರು. ಆರಂಭದಲ್ಲಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೂ ನಂತರದಲ್ಲಿ ವಿಫಲವಾಯಿತು. ಕೊನೆಗೆ ಅವರು ರೆಸ್ಟೋರೆಂಟ್ ಮುಚ್ಚಬೇಕಾಯಿತು.
ನಂತರ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆ ಆರಂಭಿಸಿ ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿ ಕಂಡಿದ್ದಾರೆ. ಹೋಟೆಲ್ ಉದ್ಯಮ ಯಾಕೋ ವೀರೂ ಕೈಹಿಡಿಯಲಿಲ್ಲ.
ಸೌರವ್ ಗಂಗೂಲಿ
ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 2004ರಲ್ಲಿ ಕೋಲ್ಕತಾದಲ್ಲಿ ನಾಲ್ಕು ಮಹಡಿಯ ಬೃಹತ್ ರೆಸ್ಟೋರೆಂಟ್ ಆರಂಭಿಸಿದರು. ಸೌರವ್ಸ್ ಫುಡ್ ಪೆವಿಲಿಯನ್ ಹೆಸರಿನ ಈ ರೆಸ್ಟೋರೆಂಟ್ ಏಳು ವರ್ಷಗಳ ನಂತರ ಬಂದ್ ಆಯಿತು. ಗಂಗೂಲಿಗೆ ಬಿಡುವು ಇಲ್ಲದ ಕಾರಣ ರೆಸ್ಟೋರೆಂಟ್ ಅನ್ನು ಸರಿಯಾಗಿ ಮುನ್ನಡೆಸಲು ಆಗಲಿಲ್ಲ ಎಂಬ ಅಭಿಪ್ರಾಯ ಇದೆ.
ಹೋಟೆಲ್ ಆರಂಭಿಸಿ ವಿಫಲರಾದವರಲ್ಲಿ ಇನ್ನೂ ಬಹಳ ಮಂದಿ ಇದ್ದಾರೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮತ್ತು ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಮೊಮ್ಮಗ ದಿವಾಕರ್ ಶಾಸ್ತ್ರಿ ಇಬ್ಬರೂ ಸೇರಿ ದೆಹಲಿಯಲ್ಲಿ ಸೆನ್ಸೋ ಎನ್ನುವ ಇಟಾಲಿಯನ್ ರೆಸ್ಟೋರೆಂಟ್ ಆರಂಭಿಸಿದರು. ಆದರೆ, ಅದು ಹೆಚ್ಚು ದಿನ ನಡೆಯದೇ ಮುಚ್ಚಿಹೋಯಿತು.
ವಿರಾಟ್ ಕೊಹ್ಲಿ ಒನ್8 ಕಮ್ಯೂನ್ ಎನ್ನುವ ಹೋಟೆಲ್ ಆರಂಭಿಸಿ ಯಶಸ್ಸು ಕಂಡಿದ್ದಾರಾದರೂ 2017ರಲ್ಲಿ ದೆಹಲಿಯಲ್ಲಿ ಅವರು ಆರಂಭಿಸಿ ನ್ಯೂವಾ ಎನ್ನುವ ರೆಸ್ಟೋರೆಂಟ್ ಇತ್ತೀಚೆಗೆ ಮುಚ್ಚಿಹೋಯಿತು.
ಈ ವೈಫಲ್ಯಗಳ ಮಧ್ಯೆ ಕೆಲ ಕ್ರಿಕೆಟಿಗರು ಹೋಟೆಲ್ ಉದ್ಯಮದಲ್ಲಿ ಯಶಸ್ಸು ಗಳಿಸಿರುವುದುಂಟು. ಕೊಹ್ಲಿಸ್ ಒನ್8 ಕಮ್ಯೂನ್‌ನಂತೆ ಗೆಲುವು ಪಡೆದಿರುವುದನ್ನು ನೋಡಿದರೆ ಕಪಿಲ್, ಜಹೀರ್ ಮೊದಲಾದವರ ಹೆಸರು ಮುನ್ನೆಲೆಗೆ ಬರುತ್ತದೆ. ಹೋಟೆಲ್ ಉದ್ಯಮದಲ್ಲಿ ಯಶಸ್ಸು ಪಡೆದ ಕ್ರಿಕೆಟಿಗರು ಇಲ್ಲಿದ್ದಾರೆ:
ಕಪಿಲ್ ದೇವ್
ಭಾರತದ ಚೊಚ್ಚಲ ವರ್ಲ್ಡ್ ಕಪ್ ವಿನಿಂಗ್ ಕ್ಯಾಪ್ಟನ್ ಕಪಿಲ್ ದೇವ್ ಬಹಳ ವರ್ಷಗಳ ಹಿಂದೆ ಕಪಿಲ್ ಹೋಟೆಲ್ ಆರಂಭಿಸಿದರು. ನಂತರ ಈ ಹೋಟೆಲ್ ಹೆಸರನ್ನು ಕ್ಯಾಪ್ಟನ್ಸ್ ರಿಟ್ರೀಟ್ ಎಂದು ಬದಲಿಸಲಾಯಿತು. ಚಂಡೀಗಡದಲ್ಲಿ ಆರಂಭವಾದ ಈ ಹೋಟೆಲ್ ಬಹಳ ಯಶಸ್ಸು ಕಂಡಿದೆ. ಹೋಟೆಲ್ ಒಳಗೆ ಎಲವೆನ್ಸ್ ಎನ್ನುವ ರೆಸ್ಟೋರೆಂಟ್ ಬಹಳ ಜನಪ್ರಿಯ ಎನಿಸಿದೆ. ಕಪಿಲ್ ದೇವ್ ಅವರ ನೆಚ್ಚಿನ ಖಾದ್ಯಗಳು ಇಲ್ಲಿನ ಸ್ಪೆಷನ್ ಐಟಮ್ಸ್. ಪಟ್ನಾದಲ್ಲೂ ಇಲವೆನ್ಸ್ ರೆಸ್ಟೋರೆಂಟ್‌ವೊಂದನ್ನು ಆರಂಭಿಸಲಾಗಿದೆ.
ಕ್ಯಾಪ್ಟನ್ಸ್ ರಿಟ್ರೀಟ್ ಹೋಟೆಲ್ ಕೂಡ ಕೆಲ ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡಿದೆ. ಬೇರೆಲ್ಲೆಡೆಯಂತೆ ಈ ಹೋಟೆಲ್‌ನಲ್ಲಿ ರೂಮುಗಳಿಗೆ ನಂಬರ್ ಕೊಡಲಾಗುವುದಿಲ್ಲ. ಬದಲಾಗಿ ಕಪಿಲ್ ದೇವ್ ಕ್ರಿಕೆಟ್ ವೃತ್ತಿಜೀವನದ ಮಹತ್ವದ ಮೈಲಿಗಲ್ಲುಗಳನ್ನು ರೂಮುಗಳಿಗೆ ಹೆಸರಾಗಿ ಇಡಲಾಗಿದೆ. ಉದಾಹರಣೆಗೆ, ಪೋರ್ಟ್ ಎಲಿಜಬೆತ್, ಟೈಡ್ ಟೆಸ್ಟ್, 4 ಸಿಕ್ಸಸ್, 9 ವಿಕೆಟ್ಸ್, 434, ಕಪಿಲ್ಸ್ ರಿಟ್ರೀಟ್ ಇತ್ಯಾದಿ ಹೆಸರುಗಳಿವೆ.
ಜಹೀರ್ ಖಾನ್
ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ 2005ರಲ್ಲಿ ಪುಣೆಯಲ್ಲಿ ಜಹೀರ್ ಖಾನ್ಸ್ ಡೈನ್ ಫೈನ್ ಎನ್ನುವ ರೆಸ್ಟೋರೆಂಟ್ ಅನ್ನು ಆರಂಭಿಸಿದರು. ಇದು ಚೆನ್ನಾಗಿ ನಡೆಯುತ್ತಿದೆ. ಗಾಯದ ಕಾರಣ ಕ್ರಿಕೆಟ್ ವೃತ್ತಿ ಅನುಮಾನಾಸ್ಪದಗೊಂಡಾಗ ಹೋಟೆಲ್ ವ್ಯವಹಾರದ ಬಗ್ಗೆ ಯೋಚಿಸಿ ಕಾರ್ಯಗತಗೊಳಿಸಿದ್ದರು ಜಹೀರ್. ತನಗೆ ಒಳ್ಳೆಯ ತಂಡ ಸಿಕ್ಕು ಎಲ್ಲವೂ ಸಲೀಸಾಗಿ ನಡೆದುಹೋಯಿತು ಎಂದು ಜ್ಯಾಕ್ ಒಮ್ಮೆ ಹೇಳಿಕೊಂಡಿದ್ದುಂಟು.
ಜಡೇಜಾ
ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ 2012 ಡಿ. 12ರಂದು ರಾಜಕೋಟ್‌ನಲ್ಲಿ ಜಡ್ಡೂಸ್ ಫೂಡ್ ಫೀಲ್ಡ್ ಎನ್ನುವ ರೆಸ್ಟೋರೆಂಟ್ ಶುರು ಮಾಡಿದರು. ಇಲ್ಲಿ ಪಂಜಾಬೀ, ಮೆಕ್ಸಿಕನ್, ಚೈನೀಸ್, ಕಾಂಟಿನೆಂಟಲ್, ಥಾಯ್ ಶೈಲಿಯ ಆಹಾರವನ್ನು ಒದಗಿಸಲಾಗುತ್ತದೆ. ಇದೂ ಕೂಡ ಯಶಸ್ಸು ಕಂಡಿದೆ.
ಹೋಟೆಲ್ ಯಶಸ್ಸಿನ ರಹಸ್ಯಗಳೇನು?
ಹೋಟೆಲ್ ಉದ್ಯಮದಲ್ಲಿ ಕೆಲ ಕ್ರಿಕೆಟಿಗರು ಯಶಸ್ಸು ಕಂಡಿದ್ದಾರೆ, ಕೆಲವರು ವಿಫಲರಾಗಿದ್ದಾರೆ. ಸಚಿನ್ ತೆಂಡೂಲ್ಕರ್‌ರಂಥ ಖ್ಯಾತನಾಮರ ಹೋಟೆಲ್‌ಗಳು ಯಾಕೆ ವಿಫಲವಾದವು ಎಂಬುದು ಕುತೂಹಲ ಮೂಡಿಸುತ್ತದೆ. ಹೋಟೆಲ್ ಉದ್ಯಮದ ಅನುಭವಿಗಳು ಹೇಳುವ ಪ್ರಕಾರ, ಒಬ್ಬ ಸೆಲಬ್ರಿಟಿಯ ಹೆಸರನ್ನು ಇಟ್ಟುಕೊಂಡು ಬ್ರ್ಯಾಂಡ್ ಇಮೇಜ್ ರೂಪಿಸಿದಾಕ್ಷಣ ರೆಸ್ಟೋರೆಂಟ್ ಬೆಳೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇಲ್ಲ. ಫಿಲಂ ಸ್ಟಾರ್ ಅಥವಾ ಕ್ರಿಕೆಟ್ ಸ್ಟಾರ್‌ನ ಅಭಿಮಾನಿಗಳು ಹೋಟೆಲ್‌ಗೆ ಬಂದು ತಿಂದು ಹೋಗಬಹುದು. ಆದರೆ, ಅವರು ಮತ್ತೊಮ್ಮೆ ಆ ಹೋಟೆಲ್‌ಗೆ ಬರಬೇಕಾದರೆ ಹೋಟೆಲ್‌ನ ವಾತಾವರಣ, ಆಹಾರ ಗುಣಮಟ್ಟ, ಸ್ಥಳ, ಬೆಲೆ ಇತ್ಯಾದಿ ಅನೇಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.
ಜನರಿಗೆ ಬೆಲೆಗೆ ತಕ್ಕಂತಹ ಗುಣಮಟ್ಟದ ಆಹಾರ ಸಿಕ್ಕರೆ ಸಂತೃಪ್ತರಾಗುತ್ತಾರೆ. ಇದು ಈ ಉದ್ಯಮದ ಬೇಸಿಕ್ ಸಕ್ಸಸ್ ಫಾರ್ಮುಲಾ. ನಿರಂತರವಾಗಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದರೆ ಒಳ್ಳೆಯ ತಂಡ (ಸಿಬ್ಬಂದಿ) ಇರಬೇಕು. ನಮ್ಮಲ್ಲಿ ಕಿಚ್ಚ ಸುದೀಪ್ ಯಡಿಯೂರು ಬಳಿ ಹೋಟೆಲ್ ನಡೆಸಿ ಸಿಕ್ಕಾಪಟ್ಟೆ ಯಶಸ್ಸು ಕಂಡಿರುವುದು ನಮ್ಮ ಕಣ್ಮುಂದೆಯೇ ಇದೆ. ವಿರಾಟ್ ಕೊಹ್ಲಿ ಆರಂಭದಲ್ಲಿ ವಿಫಲರಾದರೂ ಕಿಶೋರ್ ಕುಮಾರ್ ಅವರ ನಿವಾಸವನ್ನು ಖರೀದಿಸಿ ಅದನ್ನೇ ಒನ್8 ಕಮ್ಯೂನ್ ಎಂದು ಹೋಟೆಲ್ ಆಗಿ ಪರಿವರ್ತಿಸಿ ತಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಉತ್ಕೃಷ್ಟ ಗುಣಮಟ್ಟದ ಹೋಟೆಲ್ ಸೇವೆಯನ್ನು ನೀಡುತ್ತಾ ಯಶಸ್ಸು ಗಿಟ್ಟಿಸಿಕೊಂಡಿದ್ದಾರೆ.
ಇದು ಸೆಲಬ್ರಿಟಿಗಳಿಗೆ ಮಾತ್ರವಲ್ಲ, ನಮ್ಮ ನಿಮ್ಮಂಥ ಸಾಮಾನ್ಯರಿಗೂ ಅನ್ವಯ ಆಗುವ ವ್ಯವಹಾರ ಸೂತ್ರ.


Click it and Unblock the Notifications