ಗುಡ್ ರಿಟರ್ನ್ಸ್ ಕನ್ನಡ ಓದುಗರೆಲ್ಲರಿಗೂ 2020ನೇ ಇಸವಿಯ ಹೊಸ ವರ್ಷದ ಶುಭಾಶಯ. ಹಣಕಾಸು, ಉದ್ಯಮ, ವ್ಯಾಪಾರ, ಷೇರು ಮಾರುಕಟ್ಟೆ, ಪರ್ಸನಲ್ ಫೈನಾನ್ಸ್ ಇಂಥ ಮಾಹಿತಿ, ವರದಿಗಳನ್ನೇ ಒಳಗೊಂಡ ಈ ವೆಬ್ ಪೋರ್ಟಲ್ ನಲ್ಲಿ ಮೊದಲ ಬಾರಿಗೆ ವರ್ಷ ಭವಿಷ್ಯವನ್ನು ನೀಡಲಾಗುತ್ತಿದೆ. ಇದು ಸಂಪೂರ್ಣವಾಗಿ ಅಂಥ ಸಂಗತಿಗಳಿಗೆ ಸಂಬಂಧಿಸಿದ ಭವಿಷ್ಯವೇ.
ಆದ್ದರಿಂದ ಒಮ್ಮೆ ಓದಿಕೊಂಡು, ಮುಂಜಾಗ್ರತೆಯಿಂದ ಇರಲು ಪ್ರಯತ್ನಿಸಿ. ಉತ್ತಮ ಫಲ ಇದ್ದವರು ಹೂಡಿಕೆಗೆ ಆಲೋಚಿಸಿ. ಎಚ್ಚರಿಕೆ ತೆಗೆದುಕೊಳ್ಳಬೇಕಾದವರು ಮೈ ತುಂಬಾ ಕಣ್ಣಾಗಿರಿ. ಈ ವರ್ಷದ ಭವಿಷ್ಯ ಏನು ಹೇಳುತ್ತದೆ? ಯಾರಿಗೆ ಉತ್ತಮ, ಯಾರಿಗೆ ಮಧ್ಯಮ ಮತ್ತು ಇನ್ಯಾರಿಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂಬುದು ತಿಳಿದುಕೊಳ್ಳಿ.
ಮುಖ್ಯವಾಗಿ ಧನುಸ್ಸು, ಮಕರ, ಕುಂಭ, ಕನ್ಯಾ, ಮಿಥುನ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಹೇಗೆ ಮತ್ತು ಏಕೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ.
ಮೇಷ
ಪಿತ್ರಾರ್ಜಿತವಾದ ಆಸ್ತಿ ವ್ಯವಹಾರಗಳು ಇದ್ದಲ್ಲಿ ಮಾರ್ಚ್ ಒಳಗೆ ಅಥವಾ ಜೂನ್ ನಂತರ ನವೆಂಬರ್ ನೊಳಗೆ ಮುಗಿಸಿಕೊಳ್ಳಿ. ಹೆಲ್ತ್ ಇನ್ಷೂರೆನ್ಸ್ ಮಾಡಿಸದಿದ್ದಲ್ಲಿ ಈ ಸಲ ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಸಾಲ ಮಾಡಿಕೊಂಡು ಹೂಡಿಕೆ ಬೇಡ. ಸಟ್ಟಾ ವ್ಯವಹಾರ ಬೇಡವೇ ಬೇಡ. ಅಗತ್ಯ ಇದ್ದಲ್ಲಿ ಮಾತ್ರ ಗ್ಯಾಜೆಟ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿ. ಯಾರ ಮೇಲೋ ಸವಾಲಿಗೆ ಬಿದ್ದು ಖರೀದಿ ಮಾಡುವುದು ಬೇಡ. ಮಕ್ಕಳ ಸಲುವಾಗಿ ಮ್ಯೂಚ್ಯುವಲ್ ಫಂಡ್ ಗೆ ಹಣ ತೊಡಗಿಸಬೇಕು ಅಂದುಕೊಳ್ಳುತ್ತಿರುವವರು ಬಹಳ ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ಪರಿಚಿತರ- ಸಂಬಂಧಿಗಳ ಸಹಾಯದಿಂದ ಅಥವಾ ಉದ್ಯೋಗದ ಸಲುವಾಗಿ ದೂರಪ್ರಯಾಣ ಯೋಗ ಇದೆ. ವಿದೇಶದಲ್ಲಿ ಉದ್ಯಮ ಆರಂಭಿಸಬೇಕು ಎಂಬ ಉದ್ದೇಶ ಇರುವವರಿಗೆ ಕೆಲಸ ಆಯಿತು, ನಿಂತಿತು ಮತ್ತೆ ಆಯಿತು ಎಂಬ ಸನ್ನಿವೇಶ ಇರುತ್ತದೆ.
ವೃಷಭ
ಯಾವುದೋ ಔಟ್ ಡೇಟೆಡ್ ಕೋರ್ಸ್ ಗಳಿಗೆ ಸೇರಿಕೊಂಡು ಹಣ ಕಳೆದುಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಅತ್ಯುತ್ಸಾಹದಲ್ಲಿ ಭವಿಷ್ಯದ ಚಿಂತನೆ, ವಿವೇಚನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೆಯಲ್ಲಿ ಚಿನ್ನಾಭರಣ, ಹಣಕಾಸು ದೊಡ್ಡ ಮಟ್ಟದಲ್ಲಿ ಇಟ್ಟುಕೊಳ್ಳಬೇಡಿ. ಬ್ಯಾಂಕ್ ಲಾಕರ್ ತೆಗೆದುಕೊಂಡು, ಅದರಲ್ಲಿ ಇಡಿ. ಯಾವ ಕೆಲಸವೂ ಒಂದು ಸಲಕ್ಕೆ ಆಗುವುದಿಲ್ಲ. ಇನ್ನು ಡೇರಿ ವ್ಯವಹಾರ ಮಾಡುತ್ತಿರುವವರಿಗೆ ವಂಚನೆ ಆಗುವ ಸಾಧ್ಯತೆಗಳಿವೆ. ಮನೆಯ ಹಿರಿಯರ ಸಲುವಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ವಾಹನಗಳ ರಿಪೇರಿಗೆ ಹಣ ಪೋಲಾಗುತ್ತದೆ. ವಾಹನ ಖರೀದಿ ಮಾಡುವ ಆಲೋಚನೆ ಇದ್ದಲ್ಲಿ ಹೊಸದನ್ನೇ ಕೊಂಡುಕೊಳ್ಳಿ. ಆಗದಿದ್ದಲ್ಲಿ ಖರೀದಿ ಮಾಡದಿದ್ದರೂ ನಷ್ಟವಿಲ್ಲ. ಸೆಕೆಂಡ್ ಹ್ಯಾಂಡ್ ವಾಹನ- ಕಡಿಮೆಗೆ ಸಿಕ್ಕಿತೋ ಅಂತ ಕೈ ಹಾಕಿದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ, ಎಚ್ಚರ.
ಮಿಥುನ
ಮುಖ್ಯವಾಗಿ ಯಾರಿಗೂ ಸಾಲ ನೀಡಬೇಡಿ. ಇನ್ನೊಬ್ಬರಿಗೆ ಜಾಮೀನಾಗಿ ನಿಲ್ಲಬೇಡಿ. ಒಂದು ವೇಳೆ ಈಗಾಗಲೇ ಜಾಮೀನಾಗಿ ನಿಂತಿದ್ದರೆ ಅವರಿಂದ ಸಾಲ ವಾಪಸ್ ಕೊಡಿಸಿ. ಅತಿಯಾದ ವಿಶ್ವಾಸದಿಂದ ಬಿಜಿನೆಸ್ಸೋ ಅಥವಾ ಸೈಡ್ ಬಿಜಿನೆಸ್ಸೋ ಶುರು ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಭಾರೀ ನಷ್ಟ ಅನುಭವಿಸುತ್ತೀರಿ. ಕೆಲಸ ಬಿಡಬೇಡಿ. ಪ್ರಮೋಷನ್- ವೇತನ ಜಾಸ್ತಿ ಮಾಡದಿದ್ದರೂ ಪರವಾಗಿಲ್ಲ. ಇದ್ದಲ್ಲಿಂದ ಬಿಟ್ಟರೆ ಆಮೇಲೆ ಪರಿತಪಿಸುವಂತಾಗುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳು ಬೇಕಾದಷ್ಟು ಬರುತ್ತವೆ. ಆದರೆ ಆಯ್ಕೆ ವಿಚಾರದಲ್ಲಿ ನೀವು ಎಡವುವ ಸಾಧ್ಯತೆ ಹೆಚ್ಚಿದೆ. ಷೇರು, ಮ್ಯೂಚ್ಯುವಲ್ ಫಂಡ್, ಚಿನ್ನದ ಮೇಲಿನ ಹೂಡಿಕೆ ಇಂಥದ್ದರ ಬಗ್ಗೆ ಈ ರಾಶಿಯವರಿಗೆ ಆಸಕ್ತಿ ಹೆಚ್ಚು. ಆದರೆ ಈ ವರ್ಷ ಪೂರಕವಾದ ವಾತಾವರಣ ಇಲ್ಲ. ಆದ್ದರಿಂದ ಯಾವ ನಿರ್ಧಾರವೂ ದಿಢೀರ್ ತೆಗೆದುಕೊಳ್ಳಬೇಡಿ.
ಕರ್ಕಾಟಕ
ಇಷ್ಟು ಸಮಯ ಎಲ್ಲ ಸರಿ ಇದ್ದ ಹಾಗೇ ಇತ್ತು. ಏಕಾಏಕಿ ಎಲ್ಲ ಕೈ ಕೊಡುತ್ತಿರುವಂತಿದೆ ಅನಿಸಿದರೆ ವಾಸ್ತವ ಒಪ್ಪಿಕೊಳ್ಳಿ. ಮಧ್ಯ ಮಧ್ಯೆ ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಆಗುವ ಲಾಭ, ಅದೃಷ್ಟದ ಮೂಲಕ ಬರುವ ಆದಾಯವನ್ನು ಹಾಗೇ ಎತ್ತಿಟ್ಟುಕೊಳ್ಳಿ. ಅದನ್ನು ಬಿಟ್ಟು ಆಕ್ರಮಣಕಾರಿ ಧೋರಣೆ ತೋರಿಸಿದರೆ ಹೊಡೆತ ಬೀಳುತ್ತದೆ. ಕೋರ್ಟ್- ಕಚೇರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಿತವಂಚಕರ ಕೈಲಿ ನೀವಾಗಿಯೇ ಸಿಲುಕಿಕೊಂಡು ಹಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ವೈದ್ಯಕೀಯ ಉಪಕರಣಗಳ ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಇಂಟಿರೀಯರ್ ಡೆಕೋರೇಷನ್ ಮಾಡುವಂಥವರು ಪ್ರಗತಿ ಕಾಣುತ್ತೀರಿ. ಮೆಡಿಕಲ್ ಶಾಪ್, ಬ್ಯೂಟಿ ಪಾರ್ಲರ್, ಫ್ಯಾನ್ಸಿ ಸ್ಟೋರ್ ನಡೆಸುವಂಥವರಿಗೆ ಚಿಂತೆಯ ಅಗತ್ಯ ಏನಿಲ್ಲ. ಆದರೆ ಯಾವ ಕಾರಣಕ್ಕೂ ದುಂದು ವೆಚ್ಚ ಮಾಡಕೂಡದು.
ಸಿಂಹ
ಅಂದುಕೊಂಡ ಕೆಲಸಗಳು, ಕೈಗೆತ್ತಿಕೊಂಡ ಯೋಜನೆಗಳು ಹೂವು ಎತ್ತಿದಷ್ಟು ಸರಾಗವಾಗಿ ಆಗುತ್ತವೆ. ವಿದೇಶದಿಂದ ಹಣ ಬರುವ ಸಾಧ್ಯತೆ ಹೆಚ್ಚಿದೆ. ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರ, ಹಣ ಹೂಡಿಕೆ ಹೀಗೆ ನಾನಾ ವಿಧದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಲಿದ್ದೀರಿ. ಉದ್ಯೋಗದಲ್ಲೂ ಬಡ್ತಿ, ವೇತನ ಹೆಚ್ಚಳದಂಥ ಶುಭ ಫಲಗಳನ್ನು ಕಾಣುತ್ತೀರಿ. ಸೈಟು ಖರೀದಿ, ಮನೆ ನಿರ್ಮಾಣ, ತೋಟ- ಜಮೀನು ಅಭಿವೃದ್ಧಿ ಯಾವುದಕ್ಕಾದರೂ ಕೈ ಹಾಕಬಹುದು. ಯಶಸ್ಸಿನ ಬಗ್ಗೆ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳುವ ಅಗತ್ಯ ಇಲ್ಲ. ಈ ಸಮಯದಲ್ಲಿ ಸಲಹೆಗಳನ್ನು ಅಳೆದು ತೂಗುವ ಸ್ವಭಾವವನ್ನು ರೂಢಿಸಿಕೊಂಡರೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಇಷ್ಟು ಸಮಯದ ಕೆಟ್ಟ ಅನುಭವಗಳ ಕಾರಣಕ್ಕೆ ನಕಾರಾತ್ಮಕ ಮನೋಭಾವ ಬೆಳೆದಿದ್ದರೆ ಅದರಿಂದ ಹೊರಬಂದು ಸಕಾರಾತ್ಮಕವಾದ ಚಿಂತನೆ ಆರಂಭಿಸಿ. ಈ ಹೊಸ ವರ್ಷದಲ್ಲಿ ಹೊಸ ಎತ್ತರಕ್ಕೆ ಏರಿ.
ಕನ್ಯಾ
ಎಲ್ಲವೂ ಗೆರೆ ಕೊಯ್ದಂತೆ ಆಗಬೇಕು ಅಂದುಕೊಂಡರೆ ಇನ್ನು ಮುಂದೆ ಆಗಲ್ಲ. ನೀವು ಸ್ವಭಾವತಃ ಜವಾಬ್ದಾರಿಗಳನ್ನು ಇಷ್ಟಪಡುವವರು. ಜತೆಗೆ ಲೆಕ್ಕಾಚಾರದಂತೆ ನಡೆಯಬೇಕು ಎಂಬ ಶಿಸ್ತು, ಅತಿಯಾದ ವಿಶ್ವಾಸ ನಿಮ್ಮದು. ಆದರೆ ವೃತ್ತಿಯಲ್ಲಿ ದಿಢೀರನೇ ಅಡೆತಡೆಗಳು ಎದುರಾಗುತ್ತವೆ. ಹಣದ ಹರಿವಿನಲ್ಲಿ ಸಟಕ್ಕನೆ ಇಳಿಮುಖವಾಗುತ್ತದೆ. ನೋಡನೋಡುತ್ತಾ ಬ್ಯಾಂಕ್ ಬ್ಯಾಲೆನ್ಸ್ ಕರಗಿ, ಸಾಲ ಏರಿಕೆ ಆಗುತ್ತದೆ. ನಿಮಗೆ ಗೊತ್ತಿಲ್ಲದ ಕ್ಷೇತ್ರದಲ್ಲಿ ದೊಡ್ಡ ಮೊತ್ತದ ಹಣ ಹೂಡಲು ಮುಂದಾಗುತ್ತೀರಿ. ಗೆಳೆಯ/ಗೆಳತಿಯರನ್ನು ನಂಬಿ, ಸಾಲಕ್ಕೆ ಹಣ ತಂದೋ ಅಥವಾ ನಿಮ್ಮದೇ ಉಳಿತಾಯವನ್ನು ಹೂಡಿಕೆ ಮಾಡಿ ಕೈ ಕಚ್ಚುತ್ತದೆ. ಇಂತಹದ್ದರಿಂದ ತಪ್ಪಿಸಿಕೊಳ್ಳಲು ಆಗಲ್ಲವಾ? ಖಂಡಿತಾ ಪ್ರಯತ್ನಿಸಬಹುದು. ನಿಮಗೆ ಗೊತ್ತಿಲ್ಲದ ಕೆಲಸದಲ್ಲಿ ಅಥವಾ ಗೊತ್ತಿರುವ ಕೆಲಸದಲ್ಲೂ ವಿಸ್ತರಣೆಗೆ ವಿಪರೀತ ಹೂಡಿಕೆ ಮಾಡಬೇಡಿ. ಸುಲಭಕ್ಕೆ ಹಣ ಬರುತ್ತದೆ ಎಂಬ ದಾರಿ ತಪ್ಪಿಸುವ ಸಲಹೆಗಳಿಗೆ ಬೆಲೆ ಕೊಡಬೇಡಿ.
ತುಲಾ
ನಿಮ್ಮ ಮಾತಿನಿಂದ ಹೆಚ್ಚು ಕಳೆದುಕೊಳ್ಳಲಿದ್ದೀರಿ. ಇನ್ನು ಮಕ್ಕಳ ಮೇಲಿನ ಅತಿಯಾದ ವ್ಯಾಮೋಹದಿಂದ ಕೂಡ ಒಂದಿಷ್ಟು ನಷ್ಟ ಅನುಭವಿಸಲಿದ್ದೀರಿ. ಉಳಿದಂತೆ ಮನೆಯಲ್ಲಿ ದೊಡ್ಡ ಮಟ್ಟದ ಪೂಜೆ- ಪುನಸ್ಕಾರ, ಹೋಮ- ಹವನ, ಸಮಾರಾಧನೆಗೆ ಖರ್ಚುಗಳಾಗಲಿವೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಸೋದರ- ಸೋದರಿಯರ ಜತೆ ಭಿನ್ನಾಭಿಪ್ರಾಯ ಮೂಡಲಿದೆ. ನೀವು ಈಗಾಗಲೇ ಸೈಟು ಖರೀದಿಗೋ ಮನೆ ಖರೀದಿಗೋ ಅಡ್ವಾನ್ಸ್ ಕೊಟ್ಟಿದ್ದರೆ ಆ ವ್ಯವಹಾರ ಪೂರ್ತಿ ಆಗುವುದು ಕಷ್ಟ ಆಗುತ್ತದೆ. ತುಲಾ ರಾಶಿಯ ಕೆಲವರು ಮಂಡಿ ನೋವಿನ ಕಾರಣಕ್ಕೆ ಟ್ರಾನ್ಸ್ ಪ್ಲಾಂಟೇಷನ್ ಮಾಡಿಸಿಕೊಳ್ಳುವುದು ಅನಿವಾರ್ಯ ಆಗಲಿದೆ. ಹೆಲ್ತ್ ಇನ್ಷೂರೆನ್ಸ್ ಇದ್ದು, ಅದರಲ್ಲಿ ಈ ಖರ್ಚು ಒಳಗೊಂಡಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ವೆಚ್ಚವನ್ನು ನಿಭಾಯಿಸಬೇಕಾಗುತ್ತದೆ. ಆದರೆ ವಿದೇಶ ಪ್ರಯಾಣದ ಅವಕಾಶಗಳು ಸಿಗಲಿವೆ.
ವೃಶ್ಚಿಕ
ಚಿನ್ನ ಖರೀದಿ, ಮನೆ- ಸೈಟು- ವಾಹನ ಖರೀದಿ ಹೀಗೆ ಯಾವುದಕ್ಕಾದರೂ ಧೈರ್ಯವಾಗಿ ಮುಂದುವರಿಯಬಹುದು. ಐ.ಟಿ, ಬಿಪಿಒ, ಆಟೋಮೊಬೈಲ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ವಿದೇಶ ಪ್ರಯಾಣ, ಬಡ್ತಿ, ವೇತನ ಹೆಚ್ಚಳದ ಯೋಗ ಇದೆ. ಬಹಳ ಕಾಲದಿಂದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದ ವ್ಯವಹಾರಗಳು ಇತ್ಯರ್ಥವಾಗುತ್ತವೆ. ಆದರೆ ಮಾತಿನ ಮೇಲೆ ಹಿಡಿತ ಇರಲಿ. ಜತೆಗೆ ಅನುಕೂಲ ಆದ ಕಾಲಕ್ಕೆ ಅಹಂಕಾರ ತಲೆಗೆ ಏರಿಸಿಕೊಳ್ಳಬೇಡಿ. ಹೂಡಿಕೆ ಅವಕಾಶಗಳು ದೊರೆತಲ್ಲಿ ತಪ್ಪಿಸಿಕೊಳ್ಳಬೇಡಿ. ಷೇರು ವ್ಯವಹಾರಗಳಲ್ಲಿ ಈ ತನಕ ನಷ್ಟ ಕಂಡಿದ್ದಲ್ಲಿ ಆದರಿಂದ ಲಾಭ ಪಡೆಯುವ ಸಮಯ ಇದು. ಮ್ಯೂಚ್ಯುವಲ್ ಫಂಡ್ ಗಳಲ್ಲಿ ಮಾಡಿದ್ದ ಹೂಡಿಕೆಗೆ ಅತ್ಯುತ್ತಮ ರಿಟರ್ನ್ಸ್ ಸಿಗಲಿದೆ. ಸಂಗಾತಿಯ ಮನೆಯ ಕಡೆಯವರಿಂದ ಧನ ಲಾಭ, ಆಸ್ತಿ ಲಾಭ ಆಗುವ ಯೋಗ ಇದೆ. ಒಟ್ಟಾರೆ ನಿಮ್ಮ ಜೀವನದ ಅತ್ಯುತ್ತಮ ವರ್ಷ ಇದಾಗಲಿದೆ.
ಧನುಸ್ಸು
ಚೀಟಿ ವ್ಯವಹಾರ ನಡೆಸುತ್ತಿರುವವರು, ಬೇರೆಯವರ ಬಳಿ ಚೀಟಿ ಹಾಕಿರುವವರಿಗೆ ನಷ್ಟ- ಅವಮಾನ ಅನುಭವಿಸುವ ಯೋಗ ಇದೆ. ಕುಟುಂಬದ ಆರ್ಥಿಕ ಸಮಸ್ಯೆ- ವ್ಯವಹಾರಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ. ವರ್ಷದ ಒಂದೆರಡು ತಿಂಗಳು ಬರುವ ಲಾಭವನ್ನು ನೆಚ್ಚಿಕೊಂಡು, ದೊಡ್ಡ ಮಟ್ಟದ ಸಾಲ ಮಾಡಬೇಡಿ. ಆದರೂ ಈ ವರ್ಷ ಜೂಜಾಟದಲ್ಲಿ ಅಥವಾ ಸಟ್ಟಾ ವ್ಯವಹಾರದಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ಧನುಸ್ಸು ರಾಶಿಯ ಕೆಲವರು ಕಾನೂನು ಬಾಹಿರವಾದ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಕೂಡ ಇದ್ದು, ನಿಮ್ಮ ಜತೆಗೆ ಇರುವವರು ಯಾರು, ಅವರು ಮಾಡುತ್ತಿರುವ ಕೆಲಸಗಳೇನು ಎಂಬ ಬಗ್ಗೆ ಗೊತ್ತಿರಲಿ. ಇನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ, ದಾನ ಕಾರ್ಯಗಳಿಗೆ ಹಣ ನೀಡಲು ಮನಸ್ಸು ಮಾಡುತ್ತೀರಿ. ಗುರುತರವಾದ ಜವಾಬ್ದಾರಿಗಳು ವಹಿಸಿದರೆ, ಅದರಲ್ಲೂ ಮದುವೆ ಮೊದಲಾದ ಶುಭ ಕಾರ್ಯಗಳಿಗೆ ಸಾಲ ಮಾಡಲೇಬೇಕಾಗುತ್ತದೆ.
ಮಕರ
ಈಗಾಗಲೇ ಸಾಡೇಸಾತ್ ಪ್ರಭಾವದಿಂದ ಗೊಂದಲದಲ್ಲಿ ಇರುವ ನಿಮಗೆ ಅದು ಇನ್ನೂ ಹೆಚ್ಚಾಗಲಿದೆ. ಮುಖ್ಯವಾಗಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗಲಿದೆ. ಅನಗತ್ಯವಾದ ಖರ್ಚು, ನೀವಾಗಿಯೇ ಸಮಸ್ಯೆಗಳನ್ನು ಹುಡುಕಿಕೊಂಡು ಹೋಗುತ್ತೀರಿ. ಹೇಗಾದರೂ ಹಣ ಮಾಡಬೇಕು ಅನ್ನೋ ಆಲೋಚನೆಯಲ್ಲಿ ಸದ್ಯಕ್ಕೆ ಕೈಲಿರುವ ಆಪದ್ಧನವನ್ನು ಕಳೆದುಕೊಳ್ಳಬಹುದು, ಎಚ್ಚರ. ಈ ವರ್ಷ ನಿಮಗೆ ಯಾರ ಸಲಹೆ- ಬುದ್ಧಿ ಮಾತು ಸಹ ರುಚಿಸುವುದಿಲ್ಲ. ಇನ್ನು ಮಕ್ಕಳ ಸಲುವಾಗಿಯೂ ವಿಪರೀತ ಖರ್ಚು- ವೆಚ್ಚವನ್ನು ಮಾಡಲಿದ್ದೀರಿ. ಇಷ್ಟಾದರೂ ಅಸಮಾಧಾನ ಇದ್ದೇ ಇರುತ್ತದೆ. ನಿಮ್ಮ ಮಿತಿಯನ್ನು ಅರಿತುಕೊಂಡು ಜವಾಬ್ದಾರಿ ತೆಗೆದುಕೊಳ್ಳಿ. ಯಾರ ಮೇಲಿನ ಹಗೆಯೋ ಅಥವಾ ಸಿಟ್ಟಿನಿಂದಲೋ ದುಡ್ಡು ಖರ್ಚು ಮಾಡಲು ಹೊರಟರೆ ವರ್ಷದ ಕೊನೆಗೆ ದೊಡ್ಡ ಮೊತ್ತದ ಸಾಲ ಮಾತ್ರ ಉಳಿಯುತ್ತದೆ ವಿನಾ ಮತ್ತೇನೂ ಅಲ್ಲ.
ಕುಂಭ
ದುಡ್ಡು ಬರುತ್ತಿದೆ, ಆದರೆ ಎಲ್ಲಿ ಖರ್ಚಾಗುತ್ತಿದೆ ಗೊತ್ತಿಲ್ಲ. ನಾಳೆ ಬಾ ಕೆಲಸ ಕೊಡ್ತೀನಿ ಅಂದ ವ್ಯಕ್ತಿ ಮತ್ತೆ ಫೋನ್ ಸ್ವೀಕರಿಸುತ್ತಿಲ್ಲ ಅಂತೆಲ್ಲ ಅನುಭವಗಳು ನಿಮಗಾಗಲಿವೆ. ಈ ಎರಡು- ಎರಡೂವರೆ ವರ್ಷದ ಕಥೆ ಬೇರೆ, ಈಗಿನದೇ ಬೇರೆ ಎಂಬ ಸಂಗತಿಯನ್ನು ತಿಳಿದುಕೊಳ್ಳಿ. ಕೈಲಿರುವ ಹಣವನ್ನು ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ಖರ್ಚು ಮಾಡಬೇಡಿ. ನಿಮ್ಮ ಕೈಗೆ ಪೂರ್ತಿ ಹಣ ಬರುವ ತನಕ ಖರ್ಚಿನ ದಾರಿ ಮಾಡಿಕೊಳ್ಳಬೇಡಿ. ವಿಪರೀತ ಆತ್ಮವಿಶ್ವಾಸಕ್ಕೆ ಕೊನೆಯಲ್ಲಿ ಸಾಲ ಮಾತ್ರ ಉಳಿಯುತ್ತದೆ. ಈ ವರ್ಷ ಮಿಶ್ರ ಫಲಿತಾಂಶ ಇರುವುದರಿಂದ ಏರಿಳಿತ ಮಾತ್ರ ಅನುಭವಕ್ಕೆ ಬರುತ್ತದೆ. ಆದರೆ ಇದರ ಪರಿಣಾಮ ಇನ್ನು ಆರು ವರ್ಷ ಅನುಭವಿಸಬೇಕಾಗುತ್ತದೆ. ಮನೆಯ ದುರಸ್ತಿ ಮತ್ತೊಂದು ಇದ್ದಲ್ಲಿ ಆಡಂಬರ ಮಾಡದಂತೆ ಕೆಲಸ ಮುಗಿಸಿಕೊಳ್ಳಿ. ಮಕ್ಕಳ ಆಸಕ್ತಿ ಗಮನಿಸಿದ ನಂತರವೇ ವಿದ್ಯಾಭ್ಯಾಸಕ್ಕೆ ಹಣ ಖರ್ಚು ಮಾಡಿ.
ಮೀನ
ಕಳೆದುಕೊಂಡಿದ್ದ ಆತ್ಮವಿಶ್ವಾಸ ಮರಳಿ ಪಡೆಯುತ್ತೀರಿ. ಉತ್ತಮವಾದ ಸಂಸ್ಥೆಯಲ್ಲಿ ಉದ್ಯೋಗ ದೊರೆತು, ಹಣಕಾಸಿನ ಸ್ಥಿತಿಯೂ ಉತ್ತಮವಾಗುತ್ತದೆ. ಈ ಹಿಂದೆ ಷೇರು- ಭೂಮಿ ಮೇಲೆ ಹೂಡಿಕೆ ಮಾಡಿದ್ದರೆ ಅದಕ್ಕೆ ಅತ್ಯುತ್ತಮ ಫಲಿತ ಸಿಗಲಿದೆ. ಇಷ್ಟು ಸಮಯ ಭವಿಷ್ಯದ ಬಗ್ಗೆ ಇದ್ದ ಗೊಂದಲಕ್ಕೆ ಪರಿಹಾರ ದೊರೆಯುತ್ತದೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಮೂಲಕ ದೊಡ್ಡ ದೊಡ್ಡ ವ್ಯವಹಾರಗಳನ್ನು ಸುಲಭವಾಗಿ ಮಾಡಿ ಮುಗಿಸಲು ದಾರಿ ದೊರೆಯುತ್ತದೆ. ಹಳೆ ಪರಿಚಯವೊಂದು ಲಾಭದಾಯಕವಾಗಿ ಪರಿಣಮಿಸುತ್ತದೆ. ಲಾಟರಿ ರೀತಿಯ ಅದೃಷ್ಟದಾಟ ನಿಮ್ಮ ಜೀವನದಲ್ಲೂ ನಡೆಯಲಿದ್ದು, ಲಾಭ- ಅನುಕೂಲ ಎಲ್ಲವನ್ನೂ ಪಡೆಯಲಿದ್ದೀರಿ. ಆದರೆ ನಿಮಗಿಂತ ಕಿರಿಯರ ಜತೆ ಹಣಕಾಸಿನ ವಿಚಾರವನ್ನು ಹಂಚಿಕೊಳ್ಳಬೇಡಿ. ಯಾವುದೇ ಕೆಲಸ ಪೂರ್ಣ ಆಗುವ ತನಕ ಗುಟ್ಟನ್ನು ಹೊರಗೆ ಬಿಡಬೇಡಿ. ಈ ವರ್ಷ ಅತ್ಯುತ್ತಮ ಸಮಯ ಇದ್ದು, ಹಣದ ಉಳಿತಾಯ ಮಾಡಿ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications