ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಕೆಲವು ದಿನಗಳ ಹಿಂದೆಯೇ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಯಾಣದ ಅನುಭವವನ್ನು ಹೆಚ್ಚಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ತನ್ನ ಮೊಬೈಲ್ ಕ್ಯೂಆರ್ ಟಿಕೆಟ್ ವ್ಯವಸ್ಥೆಯ ಪ್ರವೇಶವನ್ನು ವಿಸ್ತರಿಸಿದೆ.
ಇದು ಪ್ರಮುಖವಾಗಿ ಜೊತೆಯಾಗಿ ಅಥವಾ ಗುಂಪಾಗಿ ಪ್ರಯಾಣಿಸುವವರಿಗೆ ಸಹಾಯವಾಗಲಿದೆ. ಈಗ ಮೆಟ್ರೋ ರೈಲುಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ಕುಟುಂಬಗಳು ಮತ್ತು ಗುಂಪುಗಳು ಒಂದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಂಡು ಟಿಕೆಟ್ ಖರೀದಿ ಮಾಡಬಹುದಾಗಿದೆ.

ಮೊದಲು, ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಒಬ್ಬ ವ್ಯಕ್ತಿಯ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿತ್ತು. ಈ ಟಿಕೆಟ್ ಅನ್ನು ನಮ್ಮ ಮೆಟ್ರೋ, ಪೇಟಿಎಂ, ವಾಟ್ಸಾಪ್ ಮತ್ತು ಯಾತ್ರದಂತಹ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರವೇಶಿಸಬಹುದು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಕುಟುಂಬಗಳು, ಗುಂಪುಗಳಿಗೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಥವಾ ಬಿಎಂಆರ್‌ಸಿಎಲ್ ಗುರುವಾರದಿಂದ ಜಾರಿಗೆ ಬರುವಂತೆ ಈ ಗುಂಪುಗಳಿಗೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಜಾರಿ ಮಾಡಿದೆ. ಅಂದರೆ ಇಂದಿನಿಂದ (ನವೆಂಬರ್ 16) 6 ಮಂದಿ ಇರುವ ಕುಟುಂಬ ಮತ್ತು ಗುಂಪುಗಳು ಒಟ್ಟಿಗೆ ಪ್ರಯಾಣಿಸಲು ಈ ಕ್ಯೂಆರ್ ಕೋಡ್ ಬಳಸಬಹುದು.
ರಿಯಾಯಿತಿಯು ಕೂಡಾ ಇದೆ ನೋಡಿ
ಬಿಎಂಆರ್‌ಸಿಎಲ್‌ನ ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಟೋಕನ್ ದರದಲ್ಲಿ ಶೇಕಡ 5 ರಷ್ಟು ರಿಯಾಯಿತಿಯನ್ನು ಒದಗಿಸುತ್ತದೆ. ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಎಷ್ಟು ಜನರು ಇದ್ದಾರೆ ಎಂದು ನಮೂದಿಸಿ ಒಂದೇ ಕ್ಯೂಆರ್ ಟಿಕೆಟ್ ಅನ್ನು ಪಡೆಯಬಹುದಾಗಿದೆ. ಪ್ರವೇಶಿಸಲು ಮತ್ತು ನಿರ್ಗಮಿಸಲು, ಈ ಕ್ಯೂಆರ್ ಟಿಕೆಟ್ ಅನ್ನು ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಒಮ್ಮೆ ಮಾತ್ರ ಸ್ಕ್ಯಾನ್ ಮಾಡಬೇಕಾಗುತ್ತದೆ.
ಮೊಬೈಲ್ ಕ್ಯೂಆರ್ ಟಿಕೆಟ್‌ಗೆ ಉತ್ತೇಜನ
ಬಿಎಂಆರ್‌ಸಿಎಲ್ ಪ್ರಯಾಣಿಕರು ತಮ್ಮ ಮನೆ ಅಥವಾ ಕಛೇರಿಯ ಅನುಕೂಲಕ್ಕಾಗಿ ಮುಂಚಿತವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಬಳಸಲು ಉತ್ತೇಜಿಸಿದೆ. ಟೋಕನ್‌ಗಳ ಖರೀದಿಗಾಗಿ ಟಿಕೆಟ್ ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ತಪ್ಪಿಸುವ ಗುರಿಯನ್ನು ಇದು ಹೊಂದಿದೆ.
ಈ ವರ್ಷದ ಆರಂಭದಲ್ಲಿ, ಬಿಎಂಆರ್‌ಸಿಎಲ್ ದೊಡ್ಡ ಮತ್ತು ಮಧ್ಯಮ ಗುಂಪಿನ ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್‌ಗಳನ್ನು ಪ್ರಾರಂಭಿಸಿತು. ದೊಡ್ಡ ಗುಂಪುಗಳಿಗೆ (ಗುಂಪಿನಲ್ಲಿ 1000 ಕ್ಕಿಂತ ಹೆಚ್ಚು ವ್ಯಕ್ತಿಗಳು), ಟೋಕನ್ ದರಕ್ಕಿಂತ ಶೇಕಡ 20 ರಷ್ಟು ರಿಯಾಯಿತಿಯಿದೆ.
ಆದರೆ, ಮಧ್ಯಮ ಗುಂಪಿಗೆ (ಗುಂಪಿನಲ್ಲಿ 100 ರಿಂದ 1000 ವ್ಯಕ್ತಿಗಳು), ಟೋಕನ್ ದರಕ್ಕಿಂತ ಶೇಕಡ 15 ರಷ್ಟು ರಿಯಾಯತಿಯಿದೆ. ಎರಡೂ ಸಂದರ್ಭಗಳಲ್ಲಿ, ಪ್ರಯಾಣಿಕರು ಒಟ್ಟಿಗೆ ನಿಲ್ದಾಣವನ್ನು ಪ್ರವೇಶಿಸಬೇಕು ಮತ್ತು ಸಾಮಾನ್ಯ ಗಮ್ಯಸ್ಥಾನದ ನಿಲ್ದಾಣದಿಂದ ಎಲ್ಲರೂ ಒಟ್ಟಿಗೆ ನಿರ್ಗಮಿಸಬೇಕು.
ಸದ್ಯಕ್ಕೆ, ಬೆಂಗಳೂರು ಮೆಟ್ರೋ ಎರಡು ಕಾರ್ಯಾಚರಣೆಯ ಮಾರ್ಗಗಳನ್ನು ಹೊಂದಿದೆ. ಒಂದು ಪರ್ಪಲ್ ಲೈನ್ ಮತ್ತು ಇನ್ನೊಂದು ಗ್ರೀನ್ ಲೈನ್ ಆಗಿದೆ. 43.49-ಕಿಮೀ ಉದ್ದದ ಪರ್ಪಲ್ ಲೈನ್ 37 ನಿಲ್ದಾಣಗಳನ್ನು ಹೊಂದಿದ್ದರೆ 30.32-ಕಿಮೀ ಉದ್ದದ ಗ್ರೀನ್ ಲೈನ್ 29 ನಿಲ್ದಾಣಗಳನ್ನು ಹೊಂದಿದೆ.


Click it and Unblock the Notifications