ಆಧಾರ್ ಕಾರ್ಡ್ ಏಜೆನ್ಸಿಯೂ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ವು ಬಳಕೆದಾರರಿಗೆ ಮಹತ್ವದ ಒಂದು ಹೊಸ ಫೀಚರ್ ನ್ನು ಹೊರತಂದಿದೆ. ಈ ಹೊಸ ವೈಶಿಷ್ಟ್ಯದಿಂದ ತಮ್ಮ ಆಧಾರ್ ನ ಒಟಿಪಿ ಬೇರೆ ಯಾವುದಾದರೂ ಮೊಬೈಲ್ ಸಂಖ್ಯೆಗೆ ಹೋಗುತ್ತಿದೆಯೇ ಎಂಬ ಚಿಂತೆ ಬಿಟ್ಟುಬಿಡಬಹುದು.
ಯಾಕೆಂದರೆ ಹೊಸ ಫೀಚರ್‌ನಲ್ಲಿ ಆಧಾರ್ ಕಾರ್ಡ್ ಹೊಂದಿರುವವರು ಆಧಾರ್‌ನೊಂದಿಗೆ ಸೀಡ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ತಮ್ಮ ಆಧಾರ್‌ನೊಂದಿಗೆ ಸೀಡ್ ಮಾಡಿದ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಬಳಕೆದಾರರು ಇನ್ಮುಂದೆ ಪರಿಶೀಲಿಸಬಹುದಾಗಿದೆ.

ಕೆಲವು ಸಂದರ್ಭಗಳಲ್ಲಿ ಬಳಕೆದಾರರಿಗೆ ತಮ್ಮ ಆಧಾರ್‌ಗೆ ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೆ ಎಂಬುದೇ ತಿಳಿದಿರುವುದಿಲ್ಲ ಅಥವಾ ಮೊಬೈಲ್ ನಂಬರ್ ಬಗ್ಗೆ ಖಚಿತತೆ ಇರುವುದಿಲ್ಲ. ಹೀಗಾಗಿ ಒಟಿಪಿ ಬೇರೆ ಯಾವುದಾದರೂ ಮೊಬೈಲ್ ಸಂಖ್ಯೆ ಹೋಗುತ್ತಿರಬಹುದೇ ಎಂಬ ಆತಂಕ, ಸಂದೇಹವನ್ನುಹುಟ್ಟುಹಾಕುತ್ತದೆ.
ಈ ಕಾರಣವನ್ನೇ ಗಮನದಲ್ಲಿ ಇರಿಸಿಕೊಂಡು ಈ ವೈಶಿಷ್ಟ್ಯವನ್ನು ಕಲ್ಪಿಸಿಕೊಡಲಾಗಿದೆ. ಈ ಹೊಸ ಸೌಲಭ್ಯದಿಂದಾಗಿ, ಆಧಾರ್ ಕಾರ್ಡ್ ಹೊಂದಿರುವವರು ಸೀಡ್ ಮಾಡಿರುವ ಮೊಬೈಲ್ ನಂಬರ್ ಮತ್ತು ಇಮೇಲ್‌ಗಳನ್ನು ಸುಲಭವಾಗಿ ಪರಿಶೀಲಿಸಬಹುದು ಎಂದು ಐಟಿ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.
ಈ ಸೌಲಭ್ಯ ಪಡೆದುಕೊಳ್ಳುವುದು ಹೇಗೆ?
ಆಧಾರ್ ಕಾರ್ಡ್ ಬಳಕೆದಾರರು ಯುಐಡಿಎಐನ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಅಥವಾ mAadhaar ಅಪ್ಲಿಕೇಶನ್ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. 'ವೆರಿಫೈ ಇಮೇಲ್/ಮೊಬೈಲ್ ನಂಬರ್' ಟ್ಯಾಬ್ ಅಡಿಯಲ್ಲಿ ಈ ಹೊಸ ಫೀಚರ್ ಕ್ಲಿಕ್ ಮಾಡಿ ಪ್ರವೇಶಿಸಬಹುದು. ಆಧಾರ್‌ನೊಂದಿಗೆ ಅವರ ಸ್ವಂತ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಸೀಡ್ ಮಾಡಲಾಗಿದೆಯೇ ಎಂಬುವುದು ಚೆಕ್ ಮಾಡಬಹುದಾಗಿದೆ.
ನಿರ್ದಿಷ್ಟ ಮೊಬೈಲ್ ಸಂಖ್ಯೆಯನ್ನು ಲಿಂಕ್ ಆಗದಿದ್ದರೆ ಇದು ಬಳಕೆದಾರರಿಗೆ ಸೂಚನೆ ನೀಡುತ್ತದೆ ಮತ್ತು ಒಂದು ವೇಳೆ ಅವರು ಬಯಸಿದಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬೇಕಾಗಿರುವ ಅಗತ್ಯ ಕ್ರಮಗಳ ಮಾಹಿತಿಯನ್ನು ಒದಗಿಸುತ್ತದೆ. ಮಾತ್ರವಲ್ಲದೇ ಒಂದು ವೇಳೆ ಮೊಬೈಲ್ ನಂಬರ್ ನೀವು ಚೆಕ್ ಈಗಾಗಲೇ ಮಾಡಿದ್ದರೆ, ನೀವು ನಮೂದಿಸಿದ ಮೊಬೈಲ್ ಸಂಖ್ಯೆಯನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದು ಸಂದೇಶವು ಬರುತ್ತದೆ.
ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಲಿಂಕ್ ಮಾಡಲು ಅಥವಾ ನವೀಕರಿಸಲು, ಆಧಾರ್ ಕಾರ್ಡ್ ಹೊಂದಿರುವವರು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು.
ಆಧಾರ್ ಡೌನ್ ಲೋಡ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ-
1. UIDAI ಅಧಿಕೃತ ವೆಬ್ ಸೈಟ್ www.uidai.gov.in ಗೆ ಭೇಟಿ ನೀಡಿ ಮತ್ತು ಅಲ್ಲಿ ಕಾಣಿಸುತ್ತಿರುವ 'ಡೌನ್ ಲೋಡ್ ಆಧಾರ್' ಕ್ಲಿಕ್ ಮಾಡಿ
2. ನಿಮ್ಮ ಆಧಾರ್ ಸಂಖ್ಯೆ, ಅಥವಾ ದಾಖಲಾತಿ ಐಡಿ ಅಥವಾ ವರ್ಚುವಲ್ ಐಡಿ ಇವುಗಳಲ್ಲಿ ಯಾವುದರೋ ಒಂದನ್ನು ನಮೂದಿಸಿ
3. ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿ ಬಳಿಕ 'ಸೆಂಡ್ ಒಟಿಪಿ' ಮೇಲೆ ಕ್ಲಿಕ್ ಮಾಡಿ. ಇದೇ ವೇಳೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ ವರ್ಡ್ ( ಓಟಿಪಿ) ಬಂದಿರುತ್ತದೆ.
4. ಈಗ ಓಟಿಪಿ ಎಂಟ್ರಿ ಮಾಡಿ ನಂತರ 'ವೆರಿಫೈ ಆಂಡ್ ಡೌನ್ ಲೋಡ್' ಕ್ಲಿಕ್ ಮಾಡಿ


Click it and Unblock the Notifications