ಜೀವನದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ನಾವು ಊಹೆ ಮಾಡಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ನಾವು ಕಷ್ಟದಲ್ಲಿ ಸಿಲುಕಬಹುದು. ಇಂತಹ ಸಂದರ್ಭದಲ್ಲಿ ಹಣ ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಆದರೆ ನಮ್ಮ ತುರ್ತು ಸಂದರ್ಭದಲ್ಲಿ ಹಣವನ್ನು ಹೊಂದಿಸುವುದು ಅತೀ ಕಷ್ಟವಾದ ಕಾರ್ಯ. ನಾವು ಸ್ನೇಹಿತರಿಂದ ಸಾಲ ಪಡೆಯಬಹುದು ಅಥವಾ ವೈಯಕ್ತಿಕ ಸಾಲವನ್ನಾದರೂ ಪಡೆದುಕೊಳ್ಳಬಹುದು. ಆದರೆ ನಾವು ವೈಯಕ್ತಿಕ ಸಾಲ ಪಡೆಯಬೇಕಾದರೆ ಸಿಬಿಲ್ ಸ್ಕೋರ್ ಅತೀ ಮುಖ್ಯವಾಗುತ್ತದೆ.

ನಮ್ಮ ಸಿಬಿಲ್ ಸ್ಕೋರ್ ಅತೀ ಕೆಟ್ಟದಾಗಿದ್ದರೆ ನಮಗೆ ಸಾಲ ಸಿಗುವುದು ಕಷ್ಟ. ಸಿಕ್ಕರೂ ಬಡ್ಡಿದರ ಗಗನದ ತುದಿಯಲ್ಲಿರುವುದಂತು ಖಚಿತ. ಬ್ಯಾಂಕ್ ಸಾಲವು ಇಲ್ಲ, ನಮ್ಮ ಸ್ನೇಹಿತರಿಂದಲೂ ಸಾಲ ಲಭ್ಯವಾಗಿಲ್ಲವೆಂದರೆ ನಾವು ತಲೆ ಬಿಸಿ ಮಾಡಬೇಕಾಗಿಲ್ಲ. ನಾವು ಎಲ್‌ಐಸಿಯಿಂದ ಸಾಲವನ್ನು ಪಡೆಯಬಹುದಾಗಿದೆ.
ಎಲ್‌ಐಸಿಯಿಂದ ಸಾಲ ಪಡೆಯಿರಿ
ಹೌದು, ನಿಮಗೆ ಬೇರೆ ಎಲ್ಲಿಯೂ ಸಾಲ ಲಭ್ಯವಾಗದಿದ್ದರೆ ನೀವು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯಿಂದ ಸಾಲವನ್ನು ಪಡೆಯಬಹುದಾಗಿದೆ. ಆದರೆ ಅದಕ್ಕಾಗಿ ನೀವು ಎಲ್‌ಐಸಿಯಲ್ಲಿ ಪಾಲಿಸಿ ಹೊಂದಿರಬೇಕಾಗುತ್ತದೆ. ಎಲ್‌ಐಸಿಯಲ್ಲಿ ನಿಮ್ಮ ಹೆಸರಿನಲ್ಲಿ ಪಾಲಿಸಿಯಿದ್ದರೆ ನೀವು ಆ ಪಾಲಿಸಿಯಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಎಲ್‌ಐಸಿ ಪಾಲಿಸಿ ಅಡಿಯಲ್ಲಿ ನೀವು ಸಾಲವನ್ನು ಪಡೆಯುವುದಾದರೆ ನಿಮಗೆ ಉತ್ತಮ ಸಿಬಿಲ್ ಸ್ಕೋರ್‌ನ ಅವಶ್ಯಕತೆಯಿಲ್ಲ. ಎಲ್‌ಐಸಿ ಪಾಲಿಸಿ ಮೇಲೆ ನಿಮ್ಮ ಸಿಬಿಲ್ ಸ್ಕೋರ್ ಎಂದಿಗೂ ಕೂಡಾ ಪ್ರಭಾವ ಬೀರದು. ಬಡ್ಡಿದರವು ಕೂಡಾ ವೈಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದರೆ ಅತೀ ಕಡಿಮೆಯಾಗಿದೆ. ಅರ್ಹತೆ, ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಎಲ್‌ಐಸಿ ಪಾಲಿಸಿಯಡಿ ಸಾಲ ಪಡೆಯಲು ಅರ್ಹತೆ
ಎಲ್‌ಐಸಿ ಪಾಲಿಸಿ ಅಡಿಯಲ್ಲಿ ನೀವು ಪಡೆಯುವ ಸಾಲವು ಎಂದಿಗೂ ಸುರಕ್ಷಿತವಾಗಿದೆ. ಯಾಕೆಂದರೆ ಇದು ನಿಮ್ಮ ಪಾಲಿಸಿಯನ್ನು ಅಡಮಾನವಾಗಿಟ್ಟು ಪಡೆಯುವ ಸಾಲವಾಗಿದೆ. ಪಾಲಿಸಿ ಖರೀದಿಸಿದ ಅಥವಾ ತೆರೆದ ನಿಗದಿತ ಅವಧಿಯ ಬಳಿಕ ಮಾತ್ರ ಎಲ್‌ಐಸಿಯಿಂದ ಸಾಲವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ನೀವು ಸಾಲ ಪಡೆಯಲು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಮೂರು ವರ್ಷಗಳ ಅವಧಿಗೆ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿ ಮಾಡಿರತಕ್ಕದು. ಸಾಮಾನ್ಯವಾಗಿ ನಿಮ್ಮ ಎಲ್‌ಐಸಿ ಪಾಲಿಸಿಯ ಮೊತ್ತದ ಶೇಕಡ 90 ರಷ್ಟು ಮೊತ್ತವನ್ನು ನೀವು ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ.
ಎಲ್‌ಐಸಿ ಪಾಲಿಸಿ ಸಾಲದ ಬಡ್ಡಿದರ
ಎಲ್‌ಐಸಿ ಪಾಲಿಸಿಯಡಿಯಲ್ಲಿ ಪಡೆಯುವ ಸಾಲದ ಬಡ್ಡಿದರವು ಸಾಮಾನ್ಯವಾಗಿ ಶೇಕಡ 10 ರಿಂದ ಶೇಕಡ 13 ರ ನಡುವೆ ಇರುತ್ತದೆ. ವೈಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದಾಗ ಈ ಬಡ್ಡಿದರವು ಅತೀ ಕಡಿಮೆಯಾಗಿದೆ. ಇನ್ನು ನೀವು ಪ್ರತಿ ತಿಂಗಳು ಇಎಂಐ ಪಾವತಿ ಮಾಡುವ ತಲೆಬಿಸಿ ಮಾಡಬೇಕಾಗಿಲ್ಲ.
ನಿಮಗೆ ಹೇಗೆ ಸಾಧ್ಯವಾಗುತ್ತದೋ ಹಾಗೆ ನೀವು ಇನ್‌ಸ್ಟಾಲ್‌ಮೆಂಟ್‌ನಲ್ಲಿ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಪಾಲಿಸಿದಾರರು ಸಾಲವನ್ನು ಮರುಪಾವತಿ ಮಾಡದಿದ್ದರೆ, ಪಾಲಿಸಿ ಮೆಚ್ಯೂರ್ ಆದಾಗ, ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ. ಸಾಲದ ಮೊತ್ತ ಕಡಿತ ಮಾಡಿ ಬಾಕಿ ಮೊತ್ತ ಮರುಪಾವತಿಸಲಾಗುತ್ತದೆ.
ಎಲ್‌ಐಸಿ ಪಾಲಿಸಿಗೆ ಹೀಗೆ ಅರ್ಜಿ ಸಲ್ಲಿಸಿ
ನೀವು ಆನ್‌ಲೈನ್‌ನಲ್ಲಿ ಅಥವಾ ಆಪ್‌ಲೈನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಎಲ್‌ಐಸಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಕೆವೈಸಿ ದಾಖಲೆಗಳೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಂತ 1: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೀವು ಎಲ್‌ಐಸಿ ಇ-ಸರ್ವಿಸ್‌ಗೆ ರಿಜಿಸ್ಟಾರ್ ಮಾಡಬೇಕಾಗುತ್ತದೆ.
ಹಂತ 2: ನಿಮ್ಮ ಖಾತೆಗೆ ಲಾಗಿನ್ ಆಗಿ, ಪಾಲಿಸಿ ಅಡಿಯಲ್ಲಿ ನೀವು ಎಷ್ಟು ಸಾಲ ಪಡೆಯಲು ಅರ್ಹರು ಎಂದು ಚೆಕ್ ಮಾಡಿಕೊಳ್ಳಿ.
ಹಂತ 3: ನೀವು ಸಾಲ ಪಡೆಯಲು ಅರ್ಹರಾಗಿದ್ದರೆ, ನೀವು ನಿಯಮ, ಷರತ್ತು, ಬಡ್ಡಿದರ, ಇತರೆ ಮಾಹಿತಿ ಪರಿಶೀಲಿಸಿ.
ಹಂತ 4: ಅದಾದ ಬಳಿಕ ಕೆವೈಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಸಲ್ಲಿಸಿ
ಹಂತ 5: ಎಲ್‌ಐಸಿ ಪಾಲಿಸಿಯ ಸರೆಂಡರ್ ಮೌಲ್ಯದ ಆಧಾರದಲ್ಲಿ ಸಾಲದ ಮೊತ್ತ ನಿರ್ಧರಿಸಲಾಗುತ್ತದೆ.


Click it and Unblock the Notifications