ತರಕಾರೀ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೊಟೇಲ್ ಉದ್ಯಮದಾರರಿಗೆ ಸರ್ಕಾರ ಮತ್ತೊಂದು ಶಾಕ್ ಅನ್ನು ನೀಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಿದೆ.
ದೇಶದ ವಿವಿಧ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 7 ರೂ.ಗಳಷ್ಟು ಹೆಚ್ಚಿಸಿವೆ. ದೆಹಲಿ ಹೊರತಾಗಿ ದೇಶದ ವಿವಿಧ ಭಾಗಗಳಲ್ಲಿ ಕಳೆದ ಶನಿವಾರವೇ (ಜುಲೈ 1) ಸಿಲಿಂಡರ್ ಬೆಲೆ ಎಂಟು ರೂಪಾಯಿಗಳಷ್ಟು ಹೆಚ್ಚಳವಾಗಿದ್ದವು.

ಬೆಲೆ ಹೆಚ್ಚಳದ ನಂತರ, ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಚಿಲ್ಲರೆ ಮಾರಾಟದ ಬೆಲೆ ಪ್ರತಿ ಸಿಲಿಂಡರ್‌ಗೆ 1,773 ರೂ.ನಿಂದ 1,780 ರೂ.ಗೆ ಏರಿಕೆಯಾಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇದಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್ ಒಂದಕ್ಕೆ 83.50 ರೂಪಾಯಿ ಕಡಿತಗೊಳಿಸಿದ್ದವು. ಬೆಲೆ ಏರಿಕೆಯಿಂದ ಹೊಟೇಲ್ ಮಾಲೀಕರು ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಜೂನ್ ತಿಂಗಳಲ್ಲಿ ಬೆಲೆ ಕಡಿತದ ನಂತರ, 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ರೂ 1,773, ಮುಂಬೈನಲ್ಲಿ ರೂ 1,725, ಕೋಲ್ಕತ್ತಾದಲ್ಲಿ ರೂ 1,875.50 ಮತ್ತು ಚೆನ್ನೈನಲ್ಲಿ ರೂ 1,937 ಆಗಿತ್ತು.
19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ, 5 ಕೆಜಿ ಮತ್ತು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳು ಹೆಚ್ಚಾಗಿ ಗೃಹಬಳಕೆಗೆ ಉಪಯೋಗಿಸಲಾಗುತ್ತದೆ. ಎಲ್‌ಪಿಜಿ ಸಿಲಿಂಡರ್ ದರಗಳನ್ನು ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ, ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಕಡಿತದ ನಂತರ ಜುಲೈ ತಿಂಗಳಲ್ಲಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಮಾರ್ಚ್ 1 ರಂದು ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಯಿತು, ಅದರ ನಂತರ ದರವನ್ನು ಏಪ್ರಿಲ್‌ನಲ್ಲಿ 91.50 ರೂ.ಗಳಷ್ಟು ಕಡಿತಗೊಳಿಸಲಾಯಿತು. ಮೇ ತಿಂಗಳಲ್ಲಿ 171.50 ರೂ ಮತ್ತು ಜೂನ್‌ನಲ್ಲಿ 83.50 ರಷ್ಟು ಕಡಿತಗೊಳಿಸಲಾಗಿತ್ತು.


Click it and Unblock the Notifications