ಆನ್‌ಲೈನ್ ಕೌಶಲ್ಯಾಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ Zupee ಕಂಪೆನಿಯು ತನ್ನ ಮಹಿಳಾ ಉದ್ಯೋಗಿಗಳಿಗೆ ಪೇಡ್ ಲೀವ್ ಅಥವಾ ವೇತನ ಸಹಿತ ರಜಾ ನೀತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಪ್ರತಿ ತಿಂಗಳು ಮನೆಯಿಂದ ಅಥವಾ ಕಚೇರಿಯಿಂದ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಒಂದು ದಿನವನ್ನು ಮುಟ್ಟಿನ ರಜಾ ದಿನವಾಗಿ ಬಳಸಿಕೊಳ್ಳಬಹುದು.
ಮುಟ್ಟಿನ ಕುರಿತಂತೆ ಸುದೀರ್ಘ ಕಾಲದಿಂದ ಇರುವ ಸ್ಟಿಗ್ನಾವನ್ನು ದೂರ ಮಾಡಿ ಮಹಿಳಾ ಉದ್ಯೋಗಿಗಳಿಗೆ ಆರೋಗ್ಯಕರ ಹಾಗೂ ಆರಾಮದಾಯಕವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸುವುದಕ್ಕೆ ಈ ಹೊಸ ರಜಾ ನೀತಿ ಸಹಕಾರಿಯಾಗಲಿದೆ ಎಂದು ಕಂಪೆನಿ ತಿಳಿಸಿದೆ.

"Zupee ಈ ರೀತಿಯ ನೀತಿಯನ್ನು ಜಾರಿಗೊಳಿಸುವುದರಿಂದ ಮಹಿಳಾ ಉದ್ಯೋಗಿಗಳ ಆರೋಗ್ಯ ಸುರಕ್ಷತೆಯನ್ನಷ್ಟೇ ಕಾಪಾಡುವುದಲ್ಲ; ಜತೆಗೆ ಮುಟ್ಟಿನ ಕುರಿತಂತೆ ಇರುವ ತಪ್ಪು ಕಲ್ಪನೆಗಳನ್ನು ಕೂಡ ಹೋಗಲಾಡಿಸುವುದಕ್ಕೆ ಜಾಗೃತಿ ಮೂಡಿಸಲಿದೆ," ಎಂದು ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ಸುರಭಿ ಸಂಚಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ನೀತಿಯು ಮಹಿಳಾ ಉದ್ಯೋಗಿಗಳ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುವ ಮೂಲಕ ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಅವಕಾಶ ನೀಡುತ್ತದೆ ಎನ್ನುವ ನಂಬಿಕೆ ನಮಗಿದೆ" ಎಂದು ಅವರು ಹೇಳಿದರು.
Zupeeಯು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಅಥವಾ ಪಿರಿಯಡ್ಸ್ ರಜೆಯನ್ನು ಹೊರ ತರುತ್ತಿರುವ ಮೊದಲ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಕಂಪೆನಿಯು ಈ ನೀತಿಯನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ ಎಂದು ತಿಳಿಸಿದೆ. ಹಲವಾರು ಇತರೆ ಸ್ಟಾರ್ಟ್‌ಅಪ್‌ಗಳು ಕೂಡ ಇತ್ತೀಚೆಗೆ ಮಹಿಳಾ ಉದ್ಯೋಗಿಗಳಿಗಾಗಿ ಈ ರೀತಿಯ ಉಪಕ್ರಮವನ್ನು ಪ್ರಾರಂಭಿಸಿವೆ.
ಆನ್‌ಲೈನ್ ಆಹಾರ ವಿತರಣಾ ಕಂಪೆನಿಯಾದ ಸ್ವಿಗ್ಗಿ ತನ್ನ ಮಹಿಳಾ ಡೆಲಿವರಿ ಪಾಟ್ನರ್ಸ್‌ಗೆ ತಿಂಗಳಿಗೆ ಎರಡು ದಿನ 'ಟೈಮ್ ಆಫ್' ವ್ಯವಸ್ಥೆ ಜಾರಿಗೊಳಿಸಿದೆ. ಇನ್ನು ಝೊಮೆಟೊ ಮುಟ್ಟಿನ ದಿನಕ್ಕೆ ಸಂಬಂಧಿಸಿದಂತೆ ವರ್ಷದಲ್ಲಿ 10 ದಿನಗಳ ವೇತನ ಸಹಿತ ರಜೆಯನ್ನು ನೀಡುತ್ತಿದೆ. ಎಜ್‌ಟೆಕ್ ಪ್ಲಾಟ್‌ಫಾರ್ಮ್ ಬೈಜೂಸ್ ಕೂಡ ತನ್ನ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ವೇತನ ಸಹಿತ ರಜೆಯನ್ನು ಮಂಜೂರು ಮಾಡಿದೆ.


Click it and Unblock the Notifications