ಭಾರತದ ಜನಸಂಖ್ಯೆ 120 ಕೋಟಿಗೂ ಹೆಚ್ಚಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆ ಇರುವ ದೇಶದಲ್ಲಿ ವಾರ್ಷಿಕವಾಗಿ ವೃತ್ತಿಪರವಾಗಿ ಆದಾಯ 1 ಕೋಟಿ ರುಪಾಯಿಗೂ ಹೆಚ್ಚು ಇರುವುದಾಗಿ ಟಾಕ್ಸ್ ರಿಟರ್ನ್ಸ್ ಫೈಲ್ ಮಾಡಿರುವವರು ಎಷ್ಟು ಮಂದಿ ಗೊತ್ತೆ? 2200 ಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೇ.
ಈ ಅಂಶವನ್ನು ಆದಾಯ ತೆರಿಗೆ ಇಲಾಖೆಯ ಸರಣಿ ಟ್ವೀಟ್ ನಲ್ಲಿ ಬಹಿರಂಗ ಮಾಡಿದೆ. 2018-19ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ದತ್ತಾಂಶವನ್ನು ಹಂಚಿಕೊಳ್ಳಲಾಗಿದೆ. "ಪ್ರಸಕ್ತ ಆರ್ಥಿಕ ವರ್ಷದಲ್ಲಿ ITR ಫೈಲ್ ಮಾಡಿರುವ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲರು ಮತ್ತು ಇಂಥದ್ದೇ ಇತರ ವೃತ್ತಿಪರರು 2200ಕ್ಕೂ ಸ್ವಲ್ಪ ಹೆಚ್ಚು ಮಂದಿ ವಾರ್ಷಿಕ ವೃತ್ತಿಪರ ಆದಾಯ 1 ಕೋಟಿಗೂ ಹೆಚ್ಚು ತೋರಿಸಿದ್ದಾರೆ" ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಭಾರತದ ಅಭಿವೃದ್ಧಿಗಾಗಿ ತೆರಿಗೆಯನ್ನು ಪಾವತಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಂದಿ ತೆರಿಗೆ ತಪ್ಪಿಸಿಕೊಂಡರೆ ಯಾರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಿರುತ್ತಾರೋ ಅಂಥವರ ಮೇಲೆ ಹೊರೆ ಬೀಳುತ್ತದೆ. ಇದು ನಂಬಲಸಾಧ್ಯ. ಆದರೆ ಸತ್ಯ. ದೇಶದಲ್ಲಿ ಕೇವಲ 2200 ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯ 1 ಕೋಟಿ ರುಪಾಯಿಗೂ ಹೆಚ್ಚು ಘೋಷಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು 2018-19ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಐಟಿಆರ್ ಫೈಲಿಂಗ್ ನ ಅಂಕಿ- ಅಂಶವನ್ನು ಬಹಿರಂಗ ಮಾಡಿದೆ. ಆ ಮಾಹಿತಿ ಇಂತಿದೆ:
* 2018-19 ಆರ್ಥಿಕ ವರ್ಷದ ಆದಾಯಕ್ಕೆ 5.78 ಕೋಟಿ ವೈಯಕ್ತಿಕ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಿದ್ದಾರೆ.
* ಇದರಲ್ಲಿ 1.03 ಕೋಟಿ ಮಂದಿ ತಮ್ಮ ಆದಾಯವನ್ನು 2.5 ಲಕ್ಷಕ್ಕಿಂತ ಕಡಿಮೆ ತೋರಿಸಿದ್ದಾರೆ. 3.29 ಕೋಟಿ ಮಂದಿ 2.5 ಲಕ್ಷ ರುಪಾಯಿಯಿಂದ 5 ಲಕ್ಷದ ತನಕ ಆದಾಯ ತೋರಿಸಿದ್ದಾರೆ.
* 5.78 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದವರಲ್ಲಿ 4.32 ಕೋಟಿ ಮಂದಿ 5 ಲಕ್ಷ ರುಪಾಯಿಯೊಳಗೆ ಆದಾಯ ತೋರಿಸಿದ್ದಾರೆ.
* ಫೈನಾನ್ಸ್ ಕಾಯ್ದೆ 2019ರ ಅಡಿಯಲ್ಲಿ 5 ಲಕ್ಷದೊಳಗಿನ ಆದಾಯ ಇರುವ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ವಿನಾಯ್ತಿ ನೀಡಲಾಗಿದೆ. ಆದ್ದರಿಂದ 2019-20ರ ಮತ್ತು ಆ ನಂತರದ ಆರ್ಥಿಕ ವರ್ಷಕ್ಕೆ ಈ 4.32 ಕೋಟಿ ವೈಯಕ್ತಿಕ ತೆರಿಗೆ ಪಾವತಿದಾರರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಆದ್ದರಿಂದ 1.46 ಕೋಟಿ ದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
* ಇನ್ನು ಆ ನಂತರದ 1 ಕೋಟು ಮಂದಿ 5ರಿಂದ 10 ಲಕ್ಷ ರುಪಾಯಿ, 46 ಲಕ್ಷ ಮಂದಿ 10 ಲಕ್ಷಕ್ಕೂ ಹೆಚ್ಚು ಆದಾಯ ಘೋಷಿಸಿಕೊಂಡಿದ್ದಾರೆ.
* ಕೇವಲ 3.16 ಲಕ್ಷ ವೈಯಕ್ತಿಕ ತೆರಿಗೆ ಪಾವತಿದಾರರು 50 ಲಕ್ಷಕ್ಕೂ ಹೆಚ್ಚು ಆದಾಯವನ್ನು ಘೋಷಿಸಿಕೊಂಡಿದ್ದಾರೆ.
* ಇಡೀ ದೇಶದಲ್ಲಿ 5 ಕೋಟಿ ರುಪಾಯಿಗೂ ಹೆಚ್ಚು ಆದಾಯವನ್ನು ಘೋಷಿಸಿಕೊಂಡಿರುವವರು 8600 ಮಂದಿ ಮಾತ್ರ.


Click it and Unblock the Notifications