ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ವಿವಾಹ ಮುಂದಿನ ವಾರ ನಡೆಯಲಿದೆ. 29 ವರ್ಷದ ಈ ಬಿಲಿಯನೇರ್ ಉದ್ಯಮಿಯ ಆರಕ್ಷತೆಯು ಮಾ.7ರಂದು ದೆಹಲಿಯ ಪಂಚತಾರಾ (5 ಸ್ಟಾರ್) ಹೋಟೆಲ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಅಗರ್ವಾಲ್ ಅವರು ತಾವು ಮದುವೆಯಾಗುವ ಹುಡುಗಿ ಹಾಗೂ ತಮ್ಮ ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನ ನೀಡಿದ್ದರು.
ಅಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಏರ್‌ಬಿಎನ್‌ಬಿ ಇಂಕ್, ಲೈಟ್‌ಸ್ಪೀಡ್ ಕಾಮರ್ಸ್ ಇಂಕ್ ಸೇರಿದಂತೆ ಓಯೋ ಸಮೂಹದ ಹಲವು ಮಂದಿ ಸಪೋರ್ಟರ್ಸ್ ಈ ಆರಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್ ಅವರು ಕೂಡ ಓಯೋ ಸಂಸ್ಥಾಪಕರ ಮದುವೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಜಪಾನ್ ಮೂಲದ ಸಾಫ್ಟ್‌ಬ್ಯಾಂಕ್ ಓಯೋ ಹಾಸ್ಪಿಟಾಲಿಟಿ ಚೈನ್‌ನಲ್ಲಿ ಅತಿದೊಡ್ಡ ಹೂಡಿಕೆದಾರ.

ಅಗರ್ವಾಲ್ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಅವರು 2013ರಲ್ಲಿ ಥಿಯೆಲ್ ಫೆಲೋಶಿಪ್ ಪ್ರೋಗ್ರಾಮ್‌ನಲ್ಲಿ ಗೆದ್ದ ಹಣದ ಸಹಾಯದಿಂದ ಓಯೊ ರೂಮ್‌ಗಳನ್ನು ಪ್ರಾರಂಭಿಸಿದ್ದರು. ಅವರು ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿರಿಸುವ ಮೂಲಕ ಹೊಸ ಪಯಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಆದರೆ, ಸದ್ಯಕ್ಕೆ ಅವರು ಮದುವೆಯಾಗುವ ಹುಡುಗಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ರಿತೇಶ್ ಅಗರ್ವಾಲ್ ಒಡಿಶಾದ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದು, ಇಲ್ಲಿನ ಸಣ್ಣ ಪಟ್ಟಣವೊಂದರಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದರು. ಅವರ ಕುಟುಂಬವು ದಕ್ಷಿಣ ಒಡಿಶಾದ ರಾಯಗಡ ಎಂಬ ನಗರದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆಯಲ್ಲಿ ಮಾಡಿದ್ದು, ಬಳಿಕ ಕಾಲೇಜು ಶಿಕ್ಷಣಕ್ಕಾಗಿ 2011ರಲ್ಲಿ ದೆಹಲಿಗೆ ಶಿಫ್ಟ್ ಆಗಿದ್ದರು. ಆದರೆ ಎರಡು ವರ್ಷಗಳ ಬಳಿಕ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು.
ಇತ್ತೀಚೆಗೆ ಅವರು ತಮ್ಮ ನವೀನ ಐಡಿಯಾಗಳನ್ನು ಪೋಡ್‌ಕಾಸ್ಟ್‌ವೊಂದರಲ್ಲಿ ಹಂಚಿಕೊಂಡಿದ್ದು, ಯಾವುದೇ ಯೋಚನೆಗಳನ್ನು ಮಾಡಿದರೂ ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದಿದ್ದರು. "ಎಲ್ಲ ಐಡಿಯಾಗಳಿಗೂ ದಿನಾಂಕ ನಿಗದಿಯಾಗಿರುತ್ತದೆ. ನೀವು ಅದನ್ನು ಮಾಡದಿದ್ದರೆ, ಬೇರೆ ಯಾರಾದರೂ ಮಾಡುತ್ತಾರೆ. ಏನಾಗಿರಬಹುದು ಎಂಬುದನ್ನು ಹೇಳುವುದಕ್ಕಿಂತ ಏನಾಗಬಹುದು ಎಂಬುದನ್ನು ಮಾಡಿ ತೋರಿಸುವುದು ಯಾವಾಗಲೂ ಉತ್ತಮವಾಗಿರುತ್ತದೆ" ಎಂದು ಅವರು ಹೇಳಿದ್ದರು.


Click it and Unblock the Notifications