ಫಿನ್‌ಟೆಕ್ ದೈತ್ಯ ಸಂಸ್ಥೆಯಾದ ಪೇಟಿಎಂ ಸರ್ಕಾರ ಬೆಂಬಲಿತ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದೊಂದಿಗೆ (ಎನ್‌ಸಿಸಿಎಫ್) ಪಾಲುದಾರಿಕೆ ಹೊಂದಿದ್ದು, ಈಗ ಈರುಳ್ಳಿ ಮತ್ತು ಬೇಳೆಕಾಳುಗಳನ್ನು ಒಳಗೊಂಡಂತೆ ದಿನಸಿ ಸಾಮಾನುಗಳನ್ನು ಮಾರಾಟ ಮಾಡುತ್ತಿದೆ. ಪೇಟಿಎಂನಿಂದ ಒಎನ್‌ಡಿಸಿ ಮೂಲಕವಾಗಿ ಇದನ್ನು ಮಾಡಲಾಗುತ್ತಿದೆ.
ನಾವು ಪೇಟಿಎಂನಲ್ಲಿ ಒಎನ್‌ಡಿಸಿ ನೆಟ್‌ವರ್ಕ್ ಮೂಲಕವಾಗಿ ಕಡಿಮೆ ಮತ್ತು ಕೈಗೆಟುಕುವ ಬೆಲೆಯಲ್ಲಿ ದಿನಸಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಒಪ್ಪಂದದೊಂದಿಗೆ, ಸದ್ಯಕ್ಕೆ ಪೇಟಿಎಂ ದೆಹಲಿಯಲ್ಲಿ 100 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಿನಸಿ ಮಾರಾಟ ಮಾಡುತ್ತಿದೆ. ಈ ಸೇವೆ ದೇಶದ ಇತರೆ ನಗರಗಳಿಗೂ ವಿಸ್ತರಣೆಯಾಗುತ್ತಾ ಎಂಬ ಮಾಹಿತಿ ಲಭ್ಯವಾಗಿಲ್ಲ.

2 ಕೆಜಿ ಕಡಲೆಬೇಳೆಯನ್ನು ಬರೀ 120 ರೂಪಾಯಿಗೆ ಮತ್ತು ಈರುಳ್ಳಿ 2 ಕೆಜಿಯನ್ನು ಬರೀ 50 ರೂಪಾಯಿಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಇದರ ಹೊರತಾಗಿ, ಬಳಕೆದಾರರು ಅದರ ನೆಟ್‌ವರ್ಕ್‌ನೊಂದಿಗೆ ಆಶೀರ್ವಾದ್ ಹಿಟ್ಟು, ಸನ್‌ಫೀಸ್ಟ್ ಬಿಸ್ಕೆಟ್‌ಗಳು, ಸೋಪ್‌ಗಳು, ಕ್ಲಾಸ್‌ಮೇಟ್ ಸ್ಟೇಷನರಿ ಉತ್ಪನ್ನಗಳ ಮೇಲೆ ಸುಮಾರು 125 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ.
ಈ ನಡುವೆ ದೇಶದ ಇತರೆ ಭಾಗಗಳಲ್ಲಿಯೂ ಕೂಡಾ ಪೇಟಿಎಂ ಮೂಲಕ ಕಡಿಮೆ ದರಕ್ಕೆ ಆಹಾರ ಉತ್ಪನ್ನಗಳು ಲಭ್ಯವಾಗುವಂತೆ ಆಗಬೇಕು ಎಂಬ ಬೇಡಿಕೆ ಗ್ರಾಹಕರದ್ದಾಗಿದೆ. ಪೇಟಿಎಂನಲ್ಲಿ ಮೊದಲ ಬಾರಿಗೆ ಬಳಕೆದಾರರು 'WELCOME100' ಕೋಡ್ ಅನ್ನು ಬಳಸಿಕೊಂಡು 200 ರೂಪಾಯಿಗಿಂತ ಅಧಿಕ ಆರ್ಡರ್‌ಗೆ 100 ರೂಪಾಯಿ ರಿಯಾಯಿತಿ ಪಡೆಯಲು ಸಾಧ್ಯವಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೇಟಿಎಂ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ವಕ್ತಾರರು, "ಒಎನ್‌ಡಿಸಿ ನೆಟ್‌ವರ್ಕ್ ಹೆಚ್ಚು ಆದ್ಯತೆಯ ಖರೀದಿದಾರ ಅಪ್ಲಿಕೇಶನ್ ಆಗಿರುವುದರಿಂದ, ನಮ್ಮ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ," ಎಂದು ಹೇಳಿದ್ದಾರೆ.
"ಪೇಟಿಎಂ ಸೆ ಒಎನ್‌ಡಿಸಿ (ಪೇಟಿಎಂನಿಂ ಒಎನ್‌ಡಿಸಿ) ನೆಟ್‌ವರ್ಕ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ನಡುವಿನ ಈ ಪಾಲುದಾರಿಕೆಯು ಸಣ್ಣ ನೆರೆಹೊರೆಯ ಅಂಗಡಿಗಳಿಂದ ಹಿಡಿದು ದೊಡ್ಡ ಸೂಪರ್‌ಮಾರ್ಕೆಟ್‌ವರೆಗೆ ಬೇರೆ ಬೇರೆ ಶ್ರೇಣಿಯ ಮಾರಾಟಗಾರರಿಂದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ," ಎಂದು ತಿಳಿಸಿದರು.
ದೇಶದ ಅಸ್ತಿತ್ವದಲ್ಲಿರುವ ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸರ್ಕಾರವು ಒಎನ್‌ಡಿಸಿ ಅನ್ನು ರಚಿಸಿದೆ. ಇದು ಸಂಪೂರ್ಣವಾಗಿ ಸರ್ಕಾರ ಬೆಂಬಲಿತ ಆಪ್ ಆಗಿದೆ. ಬೆಂಗಳೂರಿನಲ್ಲಿ ಆರಂಭವಾದ ಈ ಆಪ್, ದೆಹಲಿ-ಎನ್‌ಸಿಆರ್, ಮುಂಬೈ, ಕೋಲ್ಕತ್ತಾ, ಚೆನ್ನೈ, ಕಾಂಚೀಪುರಂ, ಹೈದರಾಬಾದ್, ಬಾಗಲಕೋಟ್ ಮತ್ತು ಲಕ್ನೋವರೆಗೆ ವಿಸ್ತರಿಸಿದೆ.
ಪೇಟಿಎಂ ಒಎನ್‌ಡಿಸಿಯಲ್ಲಿ ಮುಂಚೂಣಿಯಲ್ಲಿದೆ. ಆಹಾರ ಮತ್ತು ಪಾನೀಯ, ದಿನಸಿ, ಮನೆ ಮತ್ತು ಅಡುಗೆಮನೆ, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಆರೋಗ್ಯ ಮತ್ತು ಕ್ಷೇಮ, ಬ್ಯೂಟಿ ಪ್ರಾಡೆಕ್ಟ್ಸ್ ಮೊದಲಾದವುಗಳ ಉತ್ಪನ್ನಗಳು ಈ ಆಪ್‌ನಲ್ಲಿ ಲಭ್ಯವಾಗುತ್ತದೆ.


Click it and Unblock the Notifications