ಕೆಲವರಿಗೆ ಇದೊಂದು ಅಭ್ಯಾಸ. ಕಣ್ಣಿಗೆ ಏನಾದರೂ ಚೆನ್ನಾಗಿ ಕಂಡರೆ ಅದನ್ನು ಖರೀದಿಸಿ ಬಿಡುತ್ತಾರೆ. ಮತ್ತೂ ಕೆಲವರಿಗೆ ಆ ತಕ್ಷಣಕ್ಕೆ ಹಣ ಕೊಡುವ ಅಗತ್ಯ ಇಲ್ಲ ಅಂದರೆ ಕೊಂಡುಕೊಳ್ಳುತ್ತಾರೆ. ಇವೆರಡಕ್ಕಿಂತ ವಿಭಿನ್ನವಾದ ಮತ್ತೊಂದು ಬಗೆಯ ಜನರಿದ್ದಾರೆ. ಅವರಿಗೆ ಏನಾದರೂ ಸರಿ, ಆಗಾಗ ಶಾಪಿಂಗ್ ಮಾಡುತ್ತಲೇ ಇರಬೇಕು. ಇಲ್ಲದಿದ್ದಲ್ಲಿ ಜೀವ ಚಡಪಡಿಸಿ ಹೋಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಈ ಮೇಲಿನ ಎಲ್ಲ ಬಗೆಯ ಜನರಿಗೂ ಒಂದು ಪಾಠ ಸಿಕ್ಕಿದ್ದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಮತ್ತೆ ತಿದ್ದುಕೊಳ್ಳುವುದಕ್ಕೆ ಅವಕಾಶ ಸಿಗುವುದೇ ಅನುಮಾನ. ಉದ್ಯೋಗ ನಷ್ಟದಿಂದ ಯುವ ಜನರಿಗೆ ಮಾನಸಿಕ ಕ್ಷೋಭೆ ಹೆಚ್ಚಾಗುತ್ತಿದೆ ಎಂಬುದು ಹಲವು ಅಧ್ಯಯನಗಳು, ಸಮೀಕ್ಷೆಗಳಿಂದ ಗೊತ್ತಾಗುತ್ತಿದೆ.
ಇಂಥ ಸ್ಥಿತಿಗೆ ಮುಖ್ಯ ಕಾರಣ ಉಳಿತಾಯಕ್ಕಿಂತ ಹೆಚ್ಚಾಗಿ ಖರ್ಚಿನ ಕಡೆಗೆ ಇವರಿಗಿದ್ದ ಗಮನ ಹಾಗೂ ಸರಿಯಾಗಿ ಯೋಜನೆ ಇಲ್ಲದಿರುವುದು. ಖರ್ಚಿನಲ್ಲೂ ನಾನಾ ಬಗೆ ಇದೆ. ಅದನ್ನು ಮೊದಲು ಗುರುತಿಸಿಕೊಳ್ಳಬೇಕು. ಈ ಲೇಖನದಲ್ಲಿ ನಾಲ್ಕು ಖರ್ಚನ್ನು ಪಟ್ಟಿ ಮಾಡಲಾಗುತ್ತಿದೆ. ಇವುಗಳಿಗೆ ನೀವು ಎಷ್ಟು ವೆಚ್ಚ ಮಾಡುತ್ತಿದ್ದೀರಿ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಈ ಮನೋಭಾವ ಹಾಗೂ ಖರ್ಚು ನಿಮಗೆಷ್ಟು ಲಾಭ ಮಾಡಿಕೊಟ್ಟಿದೆ ವಿಮರ್ಶೆ ಮಾಡಿಕೊಳ್ಳಿ.
ಗ್ಯಾಜೆಟ್, ಮೊಬೈಲ್ ಫೋನ್, ಲ್ಯಾಪ್ ಟಾಪ್, ಎಲೆಕ್ಟ್ರಾನಿಕ್ ವಸ್ತುಗಳು
ಈ ವಿಭಾಗದಲ್ಲಿ ಬರುವ ಗ್ಯಾಜೆಟ್, ಮೊಬೈಲ್ ಫೋನ್ ಇತ್ಯಾದಿಗಳನ್ನು ಆಗಾಗ ಬದಲಾವಣೆ ಮಾಡಿಕೊಳ್ಳುತ್ತಿರಬೇಕು ಎಂಬುದು ಕೆಲವರ ಮನಸ್ಥಿತಿ. ತಮ್ಮ ಬಳಿ ಇರುವ ಮೊಬೈಲ್, ಲ್ಯಾಪ್ ಟಾಪ್ ಇವುಗಳೆಲ್ಲ ಹೊಸ ತಂತ್ರಜ್ಞಾನದ್ದೇ ಆಗಿರಬೇಕು ಎಂಬ ಕಾರಣಕ್ಕೆ ಆರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಹೊಸದನ್ನು ಖರೀದಿಸುತ್ತಲೇ ಇರುತ್ತಾರೆ. ಉದಾಹರಣೆಗಾಗಿ ಮಾತ್ರ ಹೇಳುವುದಾದರೆ ಆಪಲ್ ಐಫೋನ್. ಅದು ಬಿಡುಗಡೆ ಆದಾಗಿನಿಂದ ಇಲ್ಲಿಯ ತನಕ ಎಲ್ಲ ಮಾಡೆಲ್ ಅನ್ನು ಪ್ರತಿ ವರ್ಷ ಖರೀದಿ ಮಾಡುತ್ತಿರುವವರು ಅದೆಷ್ಟು ಹಣವನ್ನು ಇದಕ್ಕಾಗಿಯೇ ಖರ್ಚು ಮಾಡಿರಬಹುದು ಲೆಕ್ಕ ಹಾಕಿಕೊಳ್ಳಿ. ಅದೇ ರೀತಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಹೊಸದು ಖರೀದಿ ಮಾಡುವುದಕ್ಕೆ ಎಷ್ಟು ಹಣ ನಿಮ್ಮ ಜೇಬಿಂದ ಹೊರಹೋಗಿದೆ ಎಂದು ಆಲೋಚಿಸಿ. ಹೊಸ ಟೆಕ್ನಾಲಜಿ ಎಂಬುದನ್ನು ಬೆನ್ನಟ್ಟಿ ಹೊರಟರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ.
ಹೊಸ ಬಟ್ಟೆ, ಶೂ, ವಾಹನಗಳು
ಪ್ರತಿ ತಿಂಗಳು ಬಟ್ಟೆ, ಶೂಗಳ ಶಾಪಿಂಗ್ ಗಾಗಿಯೇ ಸಾವಿರಾರು ರುಪಾಯಿ ಖರ್ಚು ಮಾಡುವವರಿದ್ದಾರೆ. ಅದೇ ರೀತಿ ಆಗಾಗ ವಾಹನಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಹೀಗೆ ಬದಲಾವಣೆಯ ಘಟ್ಟದಲ್ಲಿ ಕ್ರೆಡಿಟ್ ಕಾರ್ಡ್ ನಿಂದ ಪಾವತಿಸುತ್ತಾರೆ. ಇಲ್ಲದಿದ್ದರೆ ಇಎಂಐ ಮೂಲಕ ಸಾಲ ಪಾವತಿಸುತ್ತಾರೆ. ಒಟ್ಟಾರೆ ಪ್ರತಿ ತಿಂಗಳು ಒಂದಲ್ಲ ಒಂದು ಇಎಂಐ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಇದ್ದೇ ಇರುತ್ತದೆ. ನಿಮಗೆ ನೆನಪಿರಲಿ, ಕ್ರೆಡಿಟ್ ಕಾರ್ಡ್ ಮಿತಿಯನ್ನು ಸಂಪೂರ್ಣವಾಗಿ ಬಳಸಿದಲ್ಲಿ ಹಾಗೂ ಹೀಗೆ ಪದೇಪದೇ ಮಾಡುತ್ತಿದ್ದಲ್ಲಿ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಆಗುತ್ತದೆ. ಇನ್ನು ಯಾವುದೇ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಅಕಸ್ಮಾತ್ ಆಗಿ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದಲ್ಲಿ ದೊಡ್ಡ ಮೊತ್ತ ಬಡ್ಡಿಯಾಗಿ ಬೀಳುತ್ತದೆ. ಇದು ಕೂಡ ಕ್ರೆಡಿಟ್ ಕಾರ್ಡ್ ವರದಿಯಲ್ಲಿ ನೆಗೆಟಿವ್ ಪರಿಣಾಮವನ್ನು ಬೀರುತ್ತದೆ.
ರೆಸ್ಟೋರೆಂಟ್, ಬಾರ್, ಪಬ್- ಪಾರ್ಟಿ
ಕುಟುಂಬದವರು, ಸ್ನೇಹಿತರ ಜತೆಗೆ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಅಪರೂಪಕ್ಕೆ ತೆರಳುವುದನ್ನು ಯಾರೂ ಆಕ್ಷೇಪಿಸುವುದಿಲ್ಲ. ಆದರೆ ವಾರಕ್ಕೆ ಎರಡರಿಂದ ಮೂರು ದಿನ, ಎಲ್ಲ ವಾರಾಂತ್ಯಗಳಲ್ಲಿ ಹಾಗೂ ತಿಂಗಳಲ್ಲಿ ಬಹುತೇಕ ಸಲ ಹೋಟೆಲ್, ರೆಸ್ಟೋರೆಂಟ್, ಬಾರ್- ಪಬ್ ಗಳಿಗೆ ತೆರಳಿದರೆ ಖರ್ಚುಗಳನ್ನು ನಿಭಾಯಿಸುವುದು ಬಹಳ ಕಷ್ಟವಾಗುತ್ತದೆ. ಎಷ್ಟೇ ಆದಾಯ ಇದ್ದರೂ ಖರ್ಚಿನ ಬಾಬ್ತು ಹೆಚ್ಚಾಗುತ್ತಾ ಹೋದಂತೆ ಅದನ್ನು ಸಂಭಾಳಿಸುವುದು ಸಲೀಸಲ್ಲ. ಇನ್ನು ಪ್ರಸಕ್ತ ಸನ್ನಿವೇಶದಲ್ಲಿ ಉದ್ಯೋಗ ಕಡಿತ, ವೇತನ ಕಡಿತ ಹೆಚ್ಚಾಗುತ್ತಿರುವಾಗ ಇಂಥ ಖರ್ಚನ್ನು ನಿಲ್ಲಿಸದಿದ್ದಲ್ಲಿ ಅಥವಾ ಕಡಿಮೆ ಮಾಡಿಕೊಳ್ಳದಿದ್ದಲ್ಲಿ ಸಮಸ್ಯೆ ಇನ್ನಷ್ಟು ಮೈ ಮೇಲೆ ಎಳೆದುಕೊಂಡಂತೆ.
ಪದೇ ಪದೇ ಪ್ರಯಾಣ, ಪ್ರವಾಸ
ತೀರಾ ಹೆಚ್ಚೇನಲ್ಲ, ಆರೇಳು ತಿಂಗಳ ಹಿಂದೆ ಕೂಡ ಬೆಂಗಳೂರಿನಿಂದ ನಲವತ್ತರಿಂದ ಐವತ್ತು ಕಿ.ಮೀ. ದೂರಕ್ಕೆ ಹೋಗಿ ಕಾಫೀ ಡೇ ಅಲ್ಲಿ- ಇಲ್ಲಿ ಅಂತ ಹೋಗೀಬರುವವರಿದ್ದರು. ದುಬಾರಿ ಬೈಕ್ ಗಳಲ್ಲಿ- ಕಾರುಗಳಲ್ಲಿ ವಾರಾಂತ್ಯಕ್ಕೆ ದೂರದ ತನಕ ಹಾಗೇ ಜಾಲಿ ರೈಡ್ ಹೋಗಿಬರುವವರಿದ್ದರು. ಲಾಕ್ ಡೌನ್ ಅವಧಿಯಲ್ಲಿ ಅದು ಕಡಿಮೆ ಆಯಿತು. ಆದರೆ ಈಗ ಮತ್ತೆ ಅಲ್ಲಿಲ್ಲಿ ಶುರುವಾಗಿದೆ. ಪ್ರಯಾಣ- ಪ್ರವಾಸ ಹೊಸ ಅನುಭವ, ಆಹ್ಲಾದ ನೀಡುತ್ತದೆ ಎಂಬುದು ನಿಜ. ಆದರೆ ಅದಕ್ಕೆ ಆದಾಯ ಮೂಲವೂ ಅಷ್ಟೇ ಗಟ್ಟಿ ಇರಬೇಕು. ಇಲ್ಲದಿದ್ದಲ್ಲಿ ಯಥಾ ಪ್ರಕಾರ ಸಾಲ, ಒತ್ತಡ ಇದ್ದೇ ಇರುತ್ತದೆ. ಇವುಗಳು ತುಂಬ ಮುಖ್ಯವಾಗಿ ಕಾಣುವಂಥವು. ಇದರ ಹೊರತಾಗಿ ಆನ್ ಲೈನ್ ಜೂಜು ಇತ್ಯಾದಿಗಳು ಸಹ ಆರ್ಥಿಕತೆ ಸಮಸ್ಯೆಯ ಇಳಿಜಾರಿನ ಹಾದಿಗೆ ಜಾರಬೇಕಾಗುತ್ತದೆ. ಆದ್ದರಿಂದ ಈ ಎಲ್ಲವೂಗಳ ಬಗ್ಗೆ ಎಚ್ಚರಿಕೆ ಇರಲಿ.
More From GoodReturns

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಉಳಿಸುವುದು ಹೇಗೆ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಯಾವುದು ಬೆಸ್ಟ್?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರಿಗೆ ಈಗ ಅಸಲಿ ಲಾಭ ಎಲ್ಲಿ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ, ಈಗ ಎಲ್ಲಿ ಹೂಡಿಕೆ ಮಾಡಬೇಕು?

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

SIP ಹೂಡಿಕೆ ದಾಖಲೆ: ನಿಮ್ಮ ಹಣ ಸುರಕ್ಷಿತವಾಗಿದೆಯೇ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications