ಜಾಗತಿಕವಾಗಿ ಕಚ್ಚಾ ತೈಲ ದರವು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರಮುಖವಾಗಿ ಯುಎಸ್‌ನ ಪ್ರಮುಖ ಬ್ಯಾಂಕುಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಕುಸಿತ ಕಂಡ ಪರಿಣಾಮ ಹಲವಾರು ವಲಯಗಳ ಮೇಲೆ ಬೀರಿದೆ. ಈ ಬ್ಯಾಂಕ್ ಕುಸಿತದ ಬಳಿಕ ಕಚ್ಚಾ ತೈಲದ ಬೆಲೆಯು ಕೂಡಾ ಕುಗ್ಗಿದೆ. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ದರ ಕುಸಿತವಾಗುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಸತತವಾಗಿ ಏರಿಕೆ ಕಾಣುತ್ತ ಬಂದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಮೇ 2022ರಿಂದ ಭಾರತದಲ್ಲಿ ಸ್ಥಿರವಾಗಿದೆ.
ಹಲವಾರು ತಿಂಗಳುಗಳಿಂದ ಭಾರತದಲ್ಲಿ ಜಾಗತಿಕ ಮಾರುಕಟ್ಟೆಯ ಬದಲಾವಣೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಬದಲಾಗಿಲ್ಲ. ಪ್ರಸ್ತುತ ಬ್ರೆಂಟ್ ಕಚ್ಚಾ ತೈಲದ ದರವು ಪ್ರತಿ ಬ್ಯಾರೆಲ್‌ಗೆ 71.10 ಡಾಲರ್ ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಅತೀ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ದರವು 100 ಡಾಲರ್ ಆಗಿತ್ತು. ಪ್ರಮುಖವಾಗಿ ಬ್ಯಾಂಕಿಂಗ್ ವಲಯದಲ್ಲಿನ ಬಿಕ್ಕಟ್ಟಿನಿಂದ ಕಚ್ಚಾ ತೈಲ ದರವು ಇಳಿಕೆಯಾಗುತ್ತಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಾ?
ಜಾಗತಿಕವಾಗಿ ಉಂಟಾದ ಬ್ಯಾಂಕಿಂಗ್ ಬಿಕ್ಕಟ್ಟು ಹಲವಾರು ವಲಯದ ಮೇಲೆ ಪ್ರಭಾವ ಬೀರಿದೆ. ಬ್ಯಾಂಕಿಂಗ್ ವಲಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲದ ದರವು ಇಳಿಕೆಯಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ದರ ಇಳಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಇಂಧನ ದರ ಇಳಿಕೆಯಾಗುವ ಸಾಧ್ಯತೆ ಕಂಡು ಬಂದಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಈ ಹಿಂದಿನ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಅಧಿಕವಾಗಿದ್ದ ಸಂದರ್ಭದಲ್ಲಿ 18,000 ಕೋಟಿ ರೂಪಾಯಿಗಳ ನಷ್ಟವನ್ನು ಕಂಡಿದೆ. ಈಗ ತೈಲ ಕಂಪನಿಗಳು ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಸಿಲ್ಲ.
ಈ ಹಿಂದೆ ಯಾವಾಗ ದರ ಇಳಿಕೆಯಾಗಿದ್ದು?
ಮೇ 2022ರಲ್ಲಿ ಭಾರತದಲ್ಲಿ ಪೆಟ್ರೋಲ್ ದರವು ಸ್ಥಿರವಾಗಿದೆ. ಮೇ ತಿಂಗಳಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ದರದ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 6 ರೂಪಾಯಿ ಸುಂಕವನ್ನು ಇಳಿಸಲಾಗಿದೆ. ಮಾರ್ಚ್ 16ರಂದು ಪೆಟ್ರೋಲಿಯಂ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. "ರೂಪಾಯಿ ಲೆಕ್ಕಾಚಾರದಲ್ಲಿ ನೋಡಿದಾಗ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ ಡಿಸೆಂಬರ್ 2021ರಿಂದ ಮಾರ್ಚ್ 2023ರವರೆಗೆ ಶೇಕಡ 23ರಷ್ಟು ಏರಿಕೆಯಾಗಿದೆ. ದೆಹಲಿಯಲ್ಲೇ ಪೆಟ್ರೋಲ್ ದರ ಶೇಕಡ 1.08ರಷ್ಟು, ಡೀಸೆಲ್ ಶೇಕಡ 3.40ರಷ್ಟು ಏರಿಕೆಯಾಗಿದೆ," ಎಂದು ಸಚಿವಾಲಯ ತಿಳಿಸಿದೆ.
ಪ್ರಸ್ತುತ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಪ್ರಸ್ತುತ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.72 ರೂಪಾಯಿ ಮತ್ತು ಡೀಸೆಲ್ ದರವು ಪ್ರತಿ ಲೀಟರ್‌ಗೆ 89.62 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 102.73 ರೂಪಾಯಿ ಆಗಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ 94.33 ರೂಪಾಯಿ ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 106.31 ರೂಪಾಯಿ ಮತ್ತು ಡೀಸೆಲ್ ದರ 94.27 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು 101.94 ರೂಪಾಯಿ ಆಗಿದೆ, ಡೀಸೆಲ್ ದರವು ಪ್ರತಿ ಲೀಟರ್‌ಗೆ 87.89 ರೂಪಾಯಿ ಆಗಿದೆ.


Click it and Unblock the Notifications