ಅಂಚೆ ಕಚೇರಿ ಎಟಿಎಂ ಕಾರ್ಡ್ ಸಂಬಂಧಿತ ನಿಯಮಗಳು ಬದಲಾವಣೆ ಆಗಿದ್ದು, ಅದು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಅಕ್ಟೋಬರ್ 1 ರಿಂದ ಎಟಿಎಂ ಕಾರ್ಡ್ ಮೇಲಿನ ಶುಲ್ಕದಲ್ಲಿ ಬದಲಾವಣೆ ಆಗಲಿದೆ.
ಅಂಚೆ ಇಲಾಖೆಯು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರು ತಮ್ಮ ಎಟಿಎಂ ಕಾರ್ಡ್ ಮೂಲಕ ಮಾಡಿದ ವ್ಯವಹಾರಕ್ಕೆ ವಿಧಿಸಲಾಗುವ ಶುಲ್ಕದಲ್ಲಿ ಬದಲಾವಣೆ ಆಗಿದೆ. ಬ್ಯಾಂಕುಗಳಲ್ಲಿ ಎಟಿಎಂ ಕಾರ್ಡ್‌ಗಳು ಇರುತ್ತದೆ. ಅದರ ಎಲ್ಲಾ ವಹಿವಾಟುಗಳಿಗೆ ಶುಲ್ಕವನ್ನು ವಿಧಿಸಲಾಗುತ್ತದೆ.
ಬ್ಯಾಂಕಿನ ಎಟಿಎಂನಲ್ಲಿ ಎಲ್ಲಾ ವ್ಯವಹಾರಕ್ಕೆ ಸೇರಿದಂತೆ ಖಾತೆಯಲ್ಲಿ ಹಣದ ಕೊರತೆ ಇದ್ದರೂ ಕೂಡಾ ದಂಡ ವಿಧಿಸಲಾಗುತ್ತದೆ. ಪೋಸ್ಟ್ ಆಫೀಸ್‌ನಲ್ಲಿಯೂ ಎಲ್ಲಾ ವ್ಯವಹಾರಕ್ಕೂ ಹಾಗೂ ಬ್ಯಾಲೆನ್ಸ್ ಕಡಿಮೆ ಇದ್ದರೆ ಶುಲ್ಕವನ್ನು ವಿಧಿಸಲಾಗುತ್ತದೆ. ಇನ್ನು ಕಾರ್ಡ್ ಕಳೆದುಕೊಂಡರೂ ಶುಲ್ಕವನ್ನು ಪಾವತಿಸಿ ಹೊಸ ಕಾರ್ಡ್ ಪಡೆಯಬೇಕಾಗುತ್ತದೆ. ಇನ್ನು ಪಿನ್ ಮರೆತರೂ ಅದಕ್ಕೆ ಶುಲ್ಕ ಪಾವತಿ ಮಾಡಿ ನಕಲಿ ಪಿನ್ ಪಡೆಯಬೇಕಾಗುತ್ತದೆ. ಅಂಚೆ ಇಲಾಖೆಯು ತನ್ನ ಉಳಿತಾಯ ಖಾತೆಯ ಎಟಿಎಂ ಕಾರ್ಡ್‌ನ ಮೇಲೆ ವಿಧಿಸಿರುವ ಶುಲ್ಕ ಎಷ್ಟು?, ಶುಲ್ಕಗಳು ಎಷ್ಟು? ಮುಂದೆ ಓದಿ.
ಪೋಸ್ಟ್ ಆಫೀಸ್‌ನ ಹೊಸ ಶುಲ್ಕ ಎಷ್ಟು?
ಪೋಸ್ಟ್ ಆಫೀಸ್ ಎಟಿಎಂ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕವು ಅಕ್ಟೋಬರ್ 1 ರಿಂದ ಬದಲಾವಣೆ ಆಗಲಿದೆ. ಮುಂದಿನ ತಿಂಗಳಿನಿಂದ ನಿರ್ವಹಣಾ ಶುಲ್ಕ 125 ರೂಪಾಯಿ ಆಗಿದೆ. ಜಿಎಸ್‌ಟಿ ಕೂಡಾ ಇರಲಿದೆ. 2021 ಅಕ್ಟೋಬರ್ 1 ರಿಂದ 2022 ಸೆಪ್ಟೆಂಬರ್ 30 ರವರೆಗೆ ಈ ನಿಯಮವು ಅನ್ವಯವಾಗಲಿದೆ. ಇನ್ನು ತನ್ನ ಗ್ರಾಹಕರಿಗೆ ಕಳುಹಿಸಿದ ಎಸ್‌ಎಂಎಸ್ ಅಲರ್ಟ್‌ಗಳಿಗಾಗಿ ಇಂಡಿಯಾ ಪೋಸ್ಟ್ 12 ರೂಪಾಯಿ ಹಾಗೂ ಜಿಎಸ್‌ಟಿಯನ್ನು ವಿಧಿಸುತ್ತದೆ. ಇನ್ನು ಗ್ರಾಹಕರ ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆಯಾದರೆ ಎಟಿಎಂ ಅಥವಾ ಪಿಒಎಸ್ ವಹಿವಾಟುಗಳನ್ನು ನಿರಾಕರಿಸಿದರೆ, ಗ್ರಾಹಕರು ಅದಕ್ಕಾಗಿ ಇಪ್ಪತ್ತು ರೂಪಾಯಿಯನ್ನು ಹಾಗೂ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ.
ಎಟಿಎಂ ಕಾರ್ಡ್ ಕಳೆದು ಹೋದರೆ...
ಇಂಡಿಯಾ ಪೋಸ್ಟ್ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಅನ್ನು ಕಳೆದುಕೊಂಡರೆ ಅದಕ್ಕೆ ವಿಧಿಸಲಾಗುವ ದಂಡ ಅಥವಾ ಶುಲ್ಕವೂ ಕೂಡಾ ಬದಲಾವಣೆ ಆಗಿದೆ. ಅಕ್ಟೋಬರ್ ಒಂದರಿಂದ ಇಂಡಿಯಾ ಪೋಸ್ಟ್ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಅನ್ನು ಕಳೆದುಕೊಂಡು ಮತ್ತೊಂದು ಡೆಬಿಟ್ ಕಾರ್ಡ್ ಪಡೆಯಲು ಅವರಿಗೆ 300 ರೂಪಾಯಿ ಮತ್ತು ಜಿಎಸ್‌ಟಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಇದು ಮಾತ್ರವಲ್ಲದೇ ಅಕ್ಟೋಬರ್ ಒಂದರಿಂದ ಎಟಿಎಂ ಪಿನ್ ಕಳೆದುಕೊಂಡರೆ, ಗ್ರಾಹಕರೇ ಶಾಖೆಗೆ ಹೋಗಿ ಹೊಸ ಪಿನ್ ಅನ್ನು ಪಡೆಯಬಹುದು. ಆದರೆ ನಕಲಿ ಪಿನ್ ಪಡೆಯಲು ಕೂಡಾ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಗ್ರಾಹಕರು ಐವತ್ತು ರೂಪಾಯಿ ಪಾವತಿ ಮಾಡಿ ನಕಲಿ ಪಿನ್ ಅನ್ನು ಪಡೆಯಬಹುದು. ಹಾಗೆಯೇ ಈ ಸಂದರ್ಭದಲ್ಲೂ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ.
ಉಚಿತ ವಹಿವಾಟು ಸಂಖ್ಯೆ ಸೀಮಿತವಾಗಿದೆ
ಇನ್ನು ಇಷ್ಟು ಮಾತ್ರವಲ್ಲದೇ ಅಂಚೆ ಇಲಾಖೆಯು ಎಟಿಎಂಗಳಲ್ಲಿ ಮಾಡಬಹುದಾದ ಉಚಿತ ವಹಿವಾಟುಗಳ ಸಂಖ್ಯೆಯನ್ನು ಸೀಮಿತಗೊಳಿಸಿದೆ. ಸುತ್ತೋಲೆಯ ಪ್ರಕಾರ, ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳ ಬಳಿಕ ಜಿಎಸ್‌ಟಿಯೊಂದಿಗೆ ಪ್ರತಿ ವಹಿವಾಟಿಗೆ ಹತ್ತು ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಇನ್ನು ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಮ್‌ಗಳಲ್ಲಿ ಹಣಕಾಸೇತರ ವಹಿವಾಟುಗಳಿಗಾಗಿ, ಗ್ರಾಹಕರು ಐದು ಉಚಿತ ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ ಐದು ರೂಪಾಯಿ ಹಾಗೂ ಜಿಎಸ್‌ಟಿ ವಿಧಿಸಲಾಗುತ್ತದೆ.
ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ವಹಿವಾಟಿಗೆ ಎಷ್ಟು ಶುಲ್ಕ?
ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ಪೋಸ್ಟ್ ಆಫಿಸ್ ಎಟಿಎಂನಿಂದ ವಹಿವಾಟು ನಡೆಸುವುದಾದರೆ, ಮೆಟ್ರೋ ನಗರದಲ್ಲಿ ಮೂರು ಬಾರಿ ಉಚಿತ ವಹಿವಾಟು ನಡೆಸಬಹುದು ಆದರೆ ಆ ಬಳಿಕ 8 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇನ್ನು ಮೆಟ್ರೋ ಅಲ್ಲದ ನಗರದಲ್ಲಿ ಐದು ಬಾರಿ ಉಚಿತ ವಹಿವಾಟುಗಳನ್ನು ನಡೆಸಬಹುದು. ಆ ಬಳಿಕ 8 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇನ್ನು ಡೆಬಿಟ್ ಕಾರ್ಡ್ ಹೊಂದಿರುವವರು ನಗದು ಹಿಂಪಡೆಯಲು ವಹಿವಾಟಿನ ಶೇಕಡ 1 ಅನ್ನು ಪಾವತಿ ಮಾಡಬೇಕಾಗುತ್ತದೆ. ಪ್ರತಿ ವಹಿವಾಟಿಗೆ ಗರಿಷ್ಠ ಐದು ರೂಪಾಯಿ ಆಗುತ್ತದೆ.


Click it and Unblock the Notifications