2025ರ ಹಣಕಾಸು ಸ್ಥಿತಿಗತಿ ಹೇಗಿದೆ ಎಂದರೆ ಖರ್ಚು ಹೆಚ್ಚು, ಆದಾಯ ಕಡಿಮೆ ಎಂಬಂತಾಗಿದೆ. ಹೀಗಾಗಿ ಹೂಡಿಕೆದಾರರು ಮಹತ್ವವಾದ ನಿರ್ಧಾರಗಳನ್ನು ನೋಡಿ-ಮಾಡಿ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಹೂಡಿಕೆ ಯಾವ ದಾರಿಯಲ್ಲಿ ಸಾಗಿದರೆ ಉತ್ತಮ, ಯಾವ ರೀತಿಯ ಹೂಡಿಕೆ ಎಷ್ಟು ಭದ್ರತೆ ಎಂದು ಇಲ್ಲಿ ತಿಳಿಯಿರಿ.

ಪೋಸ್ಟ್ ಆಫೀಸ್ ಟೈಪ್ ಡೆಪಾಸಿಟ್-ಬ್ಯಾಂಕ್ FD:
RBI ತನ್ನ ರೆಪೊ ದರವನ್ನು ಶೇ. 1ರಷ್ಟು ಕಡಿತಗೊಳಿಸಿದ್ದರಿಂದ, ಎಸ್ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳಂತಹ ಪ್ರಮುಖ ವಾಣಿಜ್ಯ ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿ (FD) ಬಡ್ಡಿದರಗಳನ್ನು ಇಳಿಸಿರುವುದು ಗಮನಾರ್ಹವಾಗಿದೆ. ಈ ನಡುವೆ ಪೋಸ್ಟ್ ಆಫೀಸ್‌ನ ಟೈಪ್ ಡೆಪಾಸಿಟ್‌ಗಳು ಹೆಚ್ಚು ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತಿವೆ. ಇದರ ಪರಿಣಾಮವಾಗಿ ಅಪಾಯ-ವಿರೋಧಿ ಹೂಡಿಕೆದಾರರು ತಮ್ಮ ಬಂಡವಾಳವನ್ನು ಎಲ್ಲಿ ಹೂಡಬೇಕು ಎಂಬ ಪ್ರಶ್ನೆಯನ್ನು ಮರುಪರಿಶೀಲಿಸುತ್ತಿದ್ದಾರೆ.
ಪೋಸ್ಟ್ ಆಫಿಸ್ TD ಎಷ್ಟು ಲಾಭ?
ಹೌದು, ಪೋಸ್ಟ್ ಆಫೀಸ್ ಟಿಡಿಗಳು 1 ವರ್ಷದ ಅವಧಿಗೆ 6.90%, 2 ವರ್ಷಗಳಿಗೆ 7.00%, 3 ವರ್ಷಗಳಿಗೆ 7.10% ಮತ್ತು 5 ವರ್ಷಗಳ ಅವಧಿಗೆ 7.50% ರಷ್ಟು ಬಡ್ಡಿದರ ನೀಡುತ್ತಿವೆ. ಇದು ನಿಖರವಾಗಿ ಒಂದೇ ಅವಧಿಗೆ ಖಾತೆ ತೆರೆದಾಗ ಎಸ್ಬಿಐ 6.05%, ಎಚ್‌ಡಿಎಫ್‌ಸಿ 6.40% ಮತ್ತು ಐಸಿಐಸಿಐ 6.60% ರಷ್ಟೇ ಬಡ್ಡಿದರ ನೀಡುತ್ತಿರುವ ಸಂಗತಿಯೊಂದಿಗೆ ಹೋಲಿಸಿದರೆ, ಅಂಚೆ ಕಚೇರಿ ಹೆಚ್ಚು ಲಾಭದಾಯಕವೆಂಬುದು ಸ್ಪಷ್ಟವಾಗುತ್ತದೆ.
ವಿಶೇಷವಾಗಿ ಐದು ವರ್ಷದ ಅವಧಿಗೆ, ಅಂಚೆ ಕಚೇರಿ ಟಿಡಿಗಳು FD ಗಳಿಗಿಂತ ಶ್ರೇಷ್ಠ ಆದಾಯ ನೀಡುತ್ತವೆ. ಈ ಬಡ್ಡಿದರಗಳನ್ನು ತ್ರೈಮಾಸಿಕವಾಗಿ ಮರುಪರಿಶೀಲಿಸಲಾಗುತ್ತದೆ. ಹೀಗಾಗಿ ಬ್ಯಾಂಕುಗಳ ಬಡ್ಡಿದರ ಇಳಿಕೆಗೊಳಗಾದಾಗ, ಅಂಚೆ ಕಚೇರಿ ದರಗಳು ಇನ್ನಷ್ಟು ಆಕರ್ಷಕವಾಗಬಹುದು.
ಅಂಚೆ ಕಚೇರಿಯ ಮತ್ತೊಂದು ಪ್ರಯೋಜನ:
ಅಂಚೆ ಕಚೇರಿ ಟಿಡಿಗಳ ಪ್ರಮುಖ ಪ್ರಯೋಜನವೆಂದರೆ ಸರ್ಕಾರದ ನೇರ ಬೆಂಬಲ ಮತ್ತು ಹೂಡಿಕೆಯ ಸಂಪೂರ್ಣ ಭದ್ರತೆ. ಇವುಗಳು ಭಾರತ ಸರ್ಕಾರದ ಸಾರ್ವಭೌಮ ಗ್ಯಾರಂಟಿಯೊಂದಿಗೆ ಬರುತ್ತವೆ. ಇದರ ವಿರುದ್ಧವಾಗಿ ಬ್ಯಾಂಕುಗಳು ಡಿಪಾಜಿಟ್ ಇನ್ಶುರನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ FD ಗಳಿಗೆ ಕೇವಲ ₹5 ಲಕ್ಷದವರೆಗೆ ಮಾತ್ರ ವಿಮೆ ನೀಡುತ್ತವೆ.
1000 ರೂ.ದಿಂದ ಹೂಡಿಕೆ ಆರಂಭ:
ಅಂಚೆ ಕಚೇರಿ ಟಿಡಿಗಳನ್ನು ಕನಿಷ್ಠ ₹1,000 ರೂ.ನಿಂದ ಪ್ರಾರಂಭಿಸಬಹುದು ಮತ್ತು ಗರಿಷ್ಠ ಮಿತಿಯೇ ಇಲ್ಲ. ಈ ಸೇವೆಗಳನ್ನು ವ್ಯಕ್ತಿಗಳು, ಜಂಟಿ ಖಾತೆದಾರರು, ಪೋಷಕರು ಮತ್ತು ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆಯಬಹುದು. ಅಂಚೆ ಕಚೇರಿಗಳ ವ್ಯಾಪಕ ಜಾಲವು ದೇಶದ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳವರೆಗೂ ಹರಡಿರುವುದರಿಂದ, ಈ ಸೇವೆಗಳು ಎಲ್ಲರಿಗೂ ಲಭ್ಯವಿರುತ್ತವೆ.
5 ವರ್ಷಗಳ ಅವಧಿಯ ಅಂಚೆ ಕಚೇರಿ ಟಿಡಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ. ಆದರೆ, ಯಾವುದೇ ಸಂಸ್ಥೆಯಿಂದ ಬಡ್ಡಿ ಆದಾಯ ಬಂದರೂ, ಅದು ಹೂಡಿಕೆದಾರರ ಆದಾಯ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆಗೆ ಒಳಪಡುತ್ತದೆ. ಈ ಅಂಶವು ಬ್ಯಾಂಕುಗಳಿಗೂ ಅನ್ವಯಿಸುತ್ತದೆ.
ಅದಕ್ಕಾಗಿ ಬ್ಯಾಂಕುಗಳು ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತವೆ. ಎಸ್ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಮುಂತಾದವರು 7 ದಿನಗಳಿಂದ 10 ವರ್ಷಗಳವರೆಗೆ FD ಅವಧಿಗಳನ್ನು ನೀಡುತ್ತಾರೆ. ಜೊತೆಗೆ, ತಿಂಗಳಿಗೆ ಅಥವಾ ತ್ರೈಮಾಸಿಕವಾಗಿ ಬಡ್ಡಿ ಪಾವತಿ ಆಯ್ಕೆ, 444 ದಿನದಂತಹ ವಿಶೇಷ FD ಗಳು, ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರಗಳಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಅಂಶಗಳು ಅಂಚೆ ಕಚೇರಿಯಲ್ಲಿ ಕಾಣಸಿಗದು.
ಹೀಗಾಗಿ, ಬಡ್ಡಿದರ, ಭದ್ರತೆ, ನಮ್ಯತೆ, ತೆರಿಗೆ ವಿನಾಯಿತಿಗಳು ಮತ್ತು ಹೂಡಿಕೆದಾರರ ಗುರಿಗಳನ್ನು ಅವಲಂಬಿಸಿ, ಪೋಸ್ಟ್ ಆಫೀಸ್ FD ಮತ್ತು ಬ್ಯಾಂಕ್ FDಗಳ ನಡುವೆ ಆಯ್ಕೆ ಮಾಡಬೇಕು. ಹೆಚ್ಚು ಭದ್ರತೆ ಮತ್ತು ಖಾತರಿಯ ಆದಾಯ ಬಯಸುವವರಿಗೆ ಅಂಚೆ ಕಚೇರಿ ಉತ್ತಮ. ಆದರೆ, ಬಡ್ಡಿ ಪಾವತಿಯಲ್ಲಿ ಲಚಿಲತೆ, ಹೆಚ್ಚುವರಿ ಸೌಲಭ್ಯಗಳು ಮತ್ತು ಸಮಯದ ಆಯ್ಕೆ ಬಯಸುವವರು ಬ್ಯಾಂಕುಗಳನ್ನು ಆಯ್ಕೆ ಮಾಡಬಹುದು. ಹೂಡಿಕೆದಾರರು ತಮ್ಮ ಹಣಕಾಸು ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ಹೋಲಿಕೆ ಮಾಡಿ ತೀರ್ಮಾನಿಸಬೇಕು.


Click it and Unblock the Notifications