ಬ್ಯಾಂಕ್ ಗಳಿಗೆ ಡೆಪಾಸಿಟ್ ರೂಪದಲ್ಲಿ ಬರುವ ಹಣವನ್ನು ಸಾಲವಾಗಿ ಜನರಿಗೆ ನೀಡಿ, ಅದರ ಮೂಲಕ ಬಡ್ಡಿ ಬರುವಂತೆ ಆಗದಿದ್ದರೆ ಹಾಗೂ ಇತರ ಸೇವೆ ಮೂಲಕ ಆದಾಯ ಬಾರದಿದ್ದಲ್ಲಿ ಬ್ಯಾಂಕ್ ಗಳಾದರೂ ಹೇಗೆ ನಡೆಯಬೇಕು? ಇದೀಗ ಭಾರತೀಯ ಬ್ಯಾಂಕ್ ಗಳು ಹೊಸದಾಗಿ ಸಾಲ ನೀಡುವುದಕ್ಕೆ ಹಲವು ನಿಯಮಗಳನ್ನು ಸಡಿಲ ಮಾಡಿವೆ. ಬಡ್ಡಿದರ ಇಳಿಕೆ, ಕ್ರೆಡಿಟ್ ಸ್ಕೋರ್ ನಲ್ಲಿ ವಿನಾಯಿತಿ ಇತ್ಯಾದಿ ವಿನಾಯಿತಿ ನೀಡಲು ಮುಂದಾಗಿವೆ.
ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಈಗಾಗಲೇ ಸಾಲ ಪಡೆದವರಿಗೆ ಮತ್ತು ಖಾತೆ ಇರುವವರಿಗೆ ಕೆಲವು ಸಾಲ ಯೋಜನೆಗಳನ್ನು ತಂದಿವೆ. COVID- 19 ಪ್ಯಾಕೇಜ್ ನ ಭಾಗವಾಗಿಯೇ ಈ ಸಾಲ ನೀಡಲಾಗುತ್ತಿದೆ ಎನ್ನುತ್ತವೆ ಮೂಲಗಳು.
ಸಾಲ ಮರುಪಾವತಿ ಅವಧಿ 36ರಿಂದ 60 ತಿಂಗಳು
ಸಾಲ ಮರುಪಾವತಿ ಅವಧಿಯನ್ನು ಗರಿಷ್ಠ 36ರಿಂದ 60 ತಿಂಗಳ ತನಕ ನೀಡಲಾಗುತ್ತದೆ. COVID- 19 ನಿಂದ ಸಮಸ್ಯೆ ಎದುರಾಗಿರುವವರಿಗೆ ಬ್ಯಾಂಕ್ ಆಫ್ ಬರೋಡಾದಿಂದ 5 ಲಕ್ಷ ರುಪಾಯಿ ತನಕ ಸಾಲವನ್ನು 10.25 ಪರ್ಸೆಂಟ್ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಅಂದ ಹಾಗೆ ಬ್ಯಾಂಕ್ ವೆಬ್ ಸೈಟ್ ನಲ್ಲಿ ಇರುವ ಮಾಹಿತಿ ಪ್ರಕಾರ 10.5 ಪರ್ಸೆಂಟ್ ನಿಂದ ಬಡ್ಡಿ ದರ ಶುರುವಾಗುತ್ತದೆ. 12.5 ಪರ್ಸೆಂಟ್ ಗೂ ಹೆಚ್ಚಾಗುತ್ತದೆ. ಇನ್ನು ಬ್ಯಾಂಕ್ ನಿಂದ ಈ ಮುಂಚೆ ಪ್ರಮುಖವಾಗಿ ಗಮನಿಸುತ್ತಿದ್ದ ಸಿಬಿಲ್ ಸ್ಕೋರ್ ನಲ್ಲೂ ವಿನಾಯಿತಿ ನೀಡಲಾಗಿದೆ. ಈಗಾಗಲೇ ಸಾಲ ಮಾಡಿದವರಾಗಿದ್ದರೆ ಸಿಬಿಲ್ ಸ್ಕೋರ್ 650- 700 ಇದ್ದರೆ ಸಾಕು. ಹೋಮ್ ಲೋನ್, ವಾಹನ ಸಾಲ, ಆಸ್ತಿ ಅಡಮಾನ ಮಾಡಿದ ಸಾಲ ತೆಗೆದುಕೊಂಡಿದ್ದರೆ ಟಾಪ್ ಅಪ್ ಲೋನ್ ಸಿಗುತ್ತಿದೆ ಎಂದು ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ ಇರುವ ಗ್ರಾಹಕರೇ ತಿಳಿಸಿದ್ದಾರೆ.
ಯಾವ ಬ್ಯಾಂಕ್ ನಿಂದ ಎಷ್ಟು ಸಿಬಿಲ್ ಸ್ಕೋರ್ ನಿಗದಿ?
ಇನ್ನು ಯೂನಿಯನ್ ಬ್ಯಾಂಕ್ ನಲ್ಲಿ ಸಿಬಿಲ್ ಸ್ಕೋರ್ 650ಕ್ಕಿಂತ ಹೆಚ್ಚಿರುವ ಗ್ರಾಹಕರಿಗೆ ಸಾಲ ನೀಡಲಾಗುತ್ತಿದೆ. ಪರ್ಸನಲ್ ಲೋನ್ ಬಡ್ಡಿ ದರವು 9.3ರಿಂದ 13.4 ಪರ್ಸೆಂಟ್ ಇರುತ್ತದೆ. ಆದರೆ COVID- 19 ಯೋಜನೆ ಅಡಿಯಲ್ಲಿ, ಈಗಾಗಲೇ ಬ್ಯಾಂಕ್ ಗ್ರಾಹಕರಾಗಿ ಇರುವವರಿಗಾಗಿ ಬಡ್ಡಿ ದರವನ್ನು ಇಳಿಸುವುದಕ್ಕೆ ನಿರ್ಧರಿಸಲಾಗಿದೆ. ಮತ್ತೊಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು ಈ ಸಾಲಗಳನ್ನು ಪಡೆಯಲು ಸಿಬಿಲ್ ಸ್ಕೋರ್ ಅನ್ನು ಕನಿಷ್ಠ 675 ಎಂದು ನಿಗದಿ ಮಾಡಿದೆ. ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಯಾಲರಿ ಅಕೌಂಟ್ ಇರುವವರಿಗೂ ಸಾಲ ಸೌಲಭ್ಯ ಸಿಗುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ಹಾಗಂತ ಬ್ಯಾಂಕ್ ಗಳಲ್ಲಿ ಈಗಾಗಲೇ ಸಾಲ ಪಡೆದ ಎಲ್ಲರಿಗೂ ಈ ಸೌಲಭ್ಯ ಸಿಗುತ್ತದೆಯಾ ಎಂಬ ಪ್ರಶ್ನೆ ಕೇಳಿದರೆ, ಅದಕ್ಕೆ ಇಲ್ಲ ಎಂಬ ಉತ್ತರ ದೊರೆಯುತ್ತದೆ.
"ಸ್ಟ್ಯಾಂಡರ್ಡ್" ವಿಭಾಗದ ಅಡಿಯ ಗ್ರಾಹಕರು
ಬ್ಯಾಂಕ್ ಗಳಿಂದ ಈಗಾಗಲೇ ಸಾಲ ಪಡೆದವರಿಗೆ ಆದ್ಯತೆ ಮೇಲೆ ಈಗ ಹೊಸದಾಗಿ ಸಾಲ ನೀಡುವುದು ಹೌದು. ಆದರೆ ಆ ಖಾತೆದಾರರು "ಸ್ಟ್ಯಾಂಡರ್ಡ್" ವಿಭಾಗದ ಅಡಿಯಲ್ಲಿ ಬರಬೇಕು. ಸ್ಪೆಷಲ್ ಮೆನ್ಷನ್ ಅಕೌಂಟ್ಸ್ (SMA1 ಹಾಗೂ SMA2) ಇದ್ದಲ್ಲಿ ಅಂಥವರಿಗೆ ಸಾಲ ನೀಡುವುದಿಲ್ಲ. SMA1 ಹಾಗೂ SMA2 ಅಂದರೆ ಏನು ಗೊತ್ತಾ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿ ಸೂತ್ರದ ಪ್ರಕಾರ, ಯಾವ ಖಾತೆದಾರರು ತಮ್ಮ ಸಾಲವನ್ನು 31ರಿಂದ 60 ದಿನಗಳ ತನಕ ಕಟ್ಟದೆ ಬಾಕಿ ಉಳಿಸಿಕೊಂಡಿರುತ್ತಾರೋ ಅಂಥವರನ್ನು SMA1 ಅಂತ ಪರಿಗಣಿಸಲಾಗುತ್ತದೆ. ಇನ್ನು 61ರಿಂದ 90 ದಿನಗಳ ತನಕ ಸಾಲ ಕಟ್ಟುವುದಿಲ್ಲವೋ ಅಂಥವರು SMA2. ಅದೇ ರೀತಿ 90 ದಿನಗಳನ್ನು ಮೀರಿ ಬಾಕಿ ಉಳಿಸಿಕೊಂಡರೆ ಅಂಥವನ್ನು ನಾನ್ ಪರ್ಫಾರ್ಮಿಂಗ್ ಹಾಗೂ ಕಳಪೆ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ.


Click it and Unblock the Notifications