ವಿಶ್ವದ ಮೂರನೇ ಒಂದು ಭಾಗದಲ್ಲಿ 2023ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ. ಈ ವರ್ಷದ ಈ ಹಿಂದಿನ ವರ್ಷಕ್ಕಿಂತ ತೀರಾ ಕಷ್ಟಕರವಾದ ವರ್ಷವಾಗಲಿದೆ. ಯುಎಸ್, ಚೀನಾ ಹಾಗೂ ಇಯುವಿನಲ್ಲಿ ಅತೀ ಕೆಟ್ಟ ಸ್ಥಿತಿ ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. ಆದರೆ ಈ ಸ್ಥಿತಿಗೆ ಕಾರಣವೇನು, ಎಂಬುವುದನ್ನು ನಾವಿಲ್ಲಿ ವಿವರಿಸಿದ್ದೇವೆ.
ಆರ್ಥಿಕ ಹಿಂಜರಿತವು ಭಾರೀ ಆರ್ಥಿಕ ದುಸ್ಥಿತಿಗೆ ದೂಡಲಿದೆ. ಅಮೆರಿಕಾ, ಐರೋಪ್ಯ ಒಕ್ಕೂಟ, ಚೀನಾದಲ್ಲಿ ಆರ್ಥಿಕತೆಯು ಮಂದಗತಿಯಲ್ಲಿ ಸಾಗಲಿದೆ. 2023 ಅತೀ ಕಠಿಣವಾದ ವರ್ಷವಾಗಲಿದೆ. ಆರ್ಥಿಕ ಹಿಂಜರಿತ ಯಾವ ದೇಶದಲ್ಲಿ ಉಂಟಾಗುವುದಿಲ್ಲವೋ ಆ ದೇಶದಲ್ಲಿಯೂ ಬೇರೆ ದೇಶಗಳಲ್ಲಿ ಉಂಟಾದ ಹಿಂಜರಿತದ ಪ್ರಭಾವ ಬೀರಲಿದೆ. ಮುಂದಿನ ಎರಡು ತಿಂಗಳು ಚೀನಾಕ್ಕೆ ಅತೀ ಕಷ್ಟವಾಗಲಿದೆ ಎಂದು ಕೂಡಾ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಮಾಹಿತಿ ನೀಡಿದ್ದಾರೆ.
ಜಾಗತಿಕವಾಗಿ ಬೆಳವಣಿಗೆಯು 2021ರಲ್ಲಿ ಶೇಕಡ 6ರಿಂದ 2022ರಲ್ಲಿ ಶೇಕಡ 3.2ಕ್ಕೆ ಮತ್ತು 2023ರಲ್ಲಿ ಶೇಕಡ 2.7ಕ್ಕೆ ಇಳಿಯಲಿದೆ. ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ವಿರುದ್ಧ ಸರ್ಕಾರದ ವಿರುದ್ಧ ಧ್ವನಿ ಕೇಳಿಬಂದ ಬಳಿಕ ಸರ್ಕಾರವು ಈ ನೀತಿಯನ್ನು ರದ್ದು ಮಾಡಿ, ಆರ್ಥಿಕತೆಯನ್ನು ತೆರೆದಿದೆ. ಆದರೆ ಇದು ಮುಂದಿನ ಎರಡು ತಿಂಗಳಲ್ಲಿ ಚೀನಾಕ್ಕೆ ಭಾರೀ ಕಷ್ಟಕರವಾದ ಸ್ಥಿತಿಗೆ ತಂದೊಡ್ಡಲಿದೆ ಎಂದು ಕೂಡಾ ಅಭಿಪ್ರಾಯಿಸಿದ್ದಾರೆ. ಆದರೆ ಈ ಹಿಂಜರಿತಕ್ಕೆ ಕಾರಣವೇನು, ಮುಖ್ಯವಾಗಿ ಹಿಂಜರಿತ ಎಂದರೇನು ಎಂದು ತಿಳಿಯೋಣ ಮುಂದೆ ಓದಿ.....
ಏನಿದು ಆರ್ಥಿಕ ಹಿಂಜರಿತ?
ಜಿಡಿಪಿಯು ಸತತ ಎರಡು ತ್ರೈಮಾಸಿಕದಲ್ಲಿ ಕುಸಿತ ಕಂಡರೆ, ಸುಮಾರು ಆರು ತಿಂಗಳ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯು ಕುಸಿಯುತ್ತಲೇ ಸಾಗಿದರೆ ಅದನ್ನು ಆರ್ಥಿಕ ಹಿಂಜರಿಯ ಆರಂಭವಾಗಿದೆ ಎಂದು ಹೇಳಬಹುದು. ಆರ್ಥಿಕ ಹಿಂಜರಿತ ಉಂಟಾದಾಗ, ವಸ್ತುಗಳ ಬೆಲೆಯು ಅಧಿಕವಾಗಿರುತ್ತದೆ. ಇದರಿಂದಾಗಿ ಜನ ಖರ್ಚು ಮಾಡುವುದನ್ನು ಕಡಿಮೆ ಮಾಡುತ್ತಾರೆ. ದುಬಾರಿ ಖರ್ಚುಗಳಿಗೆ ಜನರೇ ಕಡಿವಾಣ ಹಾಕುತ್ತಾರೆ. ಇದರಿಂದಾಗಿ ವಸ್ತುಗಳ ಮಾರಾಟವು ಕಡಿಮೆಯಾಗಲಿದೆ. ತಮ್ಮ ವಸ್ತುಗಳಿಗೆ ಬೇಡಿಕೆ ಕಡಿಮೆಯಾದಂತೆ ಸಂಸ್ಥೆಗಳು ಉದ್ಯೋಗ ಕಡಿತ ಮಾಡಲಿದೆ. ಇದರಿಂದಾಗಿ ನಿರುದ್ಯೋಗ ಹೆಚ್ಚಾಗಲಿದೆ. ಈ ರೀತಿ ಇದು ಒಂದು ಚೈನ್ ಲಿಂಕ್ ಇದ್ದಂತೆ ಒಂದಕ್ಕೆ ಒಂದು ಸಂಬಂಧಿತವಾಗಿರುತ್ತದೆ.
ಹಣದುಬ್ಬರ ಸ್ಥಿತಿಗೆ ವಿಶ್ವವನ್ನು ದೂಡಿದ ಅಂಶಗಳು
ಸಾಮಾನ್ಯವಾಗಿ ಹಣದುಬ್ಬರವು ತೀರಾ ಅಧಿಕವಾದ ಬಳಿಕ ಹಿಂಜರಿತವು ನಮ್ಮನ್ನು ಕಾಡಲಿದೆ. ಹಣದುಬ್ಬರವನ್ನು ಸಿಪಿಐ ಹಾಗೂ ಡಬ್ಲ್ಯೂಪಿಐ ಮೂಲಕ ಅಳೆಯಲಾಗುತ್ತದೆ. ಸರಕು ಹಾಗೂ ಸೇವೆಯ ವೆಚ್ಚವು ಅಧಿಕವಾಗುವ ಸ್ಥಿತಿಯನ್ನು ಹಣದುಬ್ಬರ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕ ಹಾಗೂ ರಷ್ಯಾ-ಉಕ್ರೇನ್ ಯುದ್ಧವು ಜಾಗತಿಕವಾಗಿ ಹಣದುಬ್ಬರ ಹೆಚ್ಚಾಗಲು ಕಾರಣವಾಗಿದೆ. ಹೌದು, ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಲವಾರು ನಿರ್ಬಂಧಗಳನ್ನು ಕೈಗೊಳ್ಳಲಾಗಿದ್ದು ಇದರಿಂದಾಗಿ ಆರ್ಥಿಕ ಕುಸಿತ ಉಂಟಾಗಿದೆ. ಕೋವಿಡ್ ಸ್ಥಿತಿಯಿಂದ ಕೊಂಚ ಚೇತರಿಸುತ್ತಿದ್ದಂತೆ ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿ, ಯುದ್ಧ ಆರಂಭಿಸಿದ್ದು ಇದು ವಿಶ್ವದ ಬಹುತೇಕ ಎಲ್ಲ ದೇಶಗಳ ಮೇಲೆ ಕೆಟ್ಟ ಪ್ರಭಾವ ಉಂಟು ಮಾಡಿದೆ. ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗಿದೆ.
ಬಡ್ಡಿದರ ಏರಿಕೆಯೂ ಹಿಂಜರಿತಕ್ಕೆ ಕಾರಣ
ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳು ತಮ್ಮ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಿದೆ. ಫೆಡ್ ದರ, ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳುವುದಾದರೂ ವರ್ಲ್ಡ್ ಬ್ಯಾಂಕ್ ಹೊಸ ಸ್ಟಡಿ ಪ್ರಕಾರ ಈ ಕ್ರಮ ಸರಿಯಲ್ಲ. ಬಡ್ಡಿದರ ಹೆಚ್ಚಾದಂತೆ ಆರ್ಥಿಕ ಹಿಂಜರಿತವು ಅಧಿಕವಾಗಲಿದೆ. ಕರೆನ್ಸಿ ಮೌಲ್ಯ ಕುಸಿತವಾದಂತೆ ಆರ್ಥಿಕ ಹಿಂಜರಿತವು ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications