"ಬಾಡಿಗೆ ಆದಾಯ ಬರುವಂಥ ಪ್ರಾಪರ್ಟಿ ಮಾರಾಟಕ್ಕೆ ಇದೆಯಾ?" -ಈ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದಿನ ಟ್ರೆಂಡ್ ಹೇಗಿತ್ತು ಅಂದರೆ, ಇನ್ವೆಸ್ಟ್ ಮೆಂಟ್ ಮಾಡುವುದಕ್ಕೆ ಯಾವುದಾದರೂ ಭೂಮಿ ಮಾರಾಟಕ್ಕೆ ಇದೆಯಾ ಅಂತ ಕೇಳುತ್ತಿದ್ದರು. ಆದರೆ ಕೊರೊನಾ ಕಾಣಿಸಿಕೊಂಡ ಮೇಲೆ ಈ ಹೊಸ ಟ್ರೆಂಡ್ ಶುರುವಾಗಿದೆ.
ಈಗಾಗಲೇ ಜಾಗ ಇದ್ದು, ತಮಗೆ ಮನೆ ಸಾಲವೂ ಬ್ಯಾಂಕ್ ಗಳಿಂದ ಸಿಗುತ್ತದೆ ಎಂದಾದಲ್ಲಿ ಬಾಡಿಗೆ ಬರುವಂತಿರಲಿ ಎಂದು ಆಲೋಚಿಸುತ್ತಿರುವವರು ಹೆಚ್ಚಾಗಿದ್ದಾರೆ. ಏಕೆ ಹೀಗೆ ಅಂದರೆ, ತಿಂಗಳಿಗೆ ಇಂತಿಷ್ಟು ಅಂತ ನಿಶ್ಚಿತ ಆದಾಯ ಬರಬೇಕು ಅಥವಾ ಇಂತಿಷ್ಟು ಹಣ ಬಂದೇ ಬರುತ್ತದೆ ಎಂಬ ಖಾತ್ರಿ ಇರಬೇಕು ಎಂಬುದು ಬಹುಪಾಲು ಜನರ ಆಲೋಚನೆ ಆಗಿದೆ.
ಈ ಹಿನ್ನೆಲೆಯಲ್ಲಿ ರೆಂಟಲ್ ಪ್ರಾಪರ್ಟಿ ಅಥವಾ ಬಾಡಿಗೆ ಆದಾಯದ ಆಸ್ತಿಯ ಆಯ್ಕೆ ಹೇಗಿರಬೇಕು ಎಂದು ವಿವರಿಸುವ ಲೇಖನ ಇದು. ಇದರಿಂದ ನಿಮಗೆ ಪ್ಲಾನ್ ಮಾಡಿಕೊಳ್ಳುವುದಕ್ಕೆ ಸಹಾಯ ಆಗಲಿದೆ.
ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚು ಇದ್ದಲ್ಲಿ ಕಡಿಮೆ ಬಡ್ಡಿ ದರ
ಭಾರತದ ಬಹುತೇಕ ಬ್ಯಾಂಕ್ ಗಳಲ್ಲಿ ಈಗ ಗೃಹ ಸಾಲದ ಮೇಲಿನ ಬಡ್ಡಿ ದರ ಬಲು ಅಗ್ಗವಾಗಿದೆ. ಇನ್ನು ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚು ಇದ್ದಲ್ಲಿ 6.90 ಅಥವಾ 7 ಪರ್ಸೆಂಟ್ ವಾರ್ಷಿಕ ಬಡ್ಡಿ ದರದಿಂದ ಹೋಮ್ ಲೋನ್ ಶುರುವಾಗುತ್ತದೆ. ಅಂದರೆ, ನೀವು ಮಾಡುವ ಪ್ರತಿ ಒಂದು ಲಕ್ಷ ರುಪಾಯಿಯ ಸಾಲಕ್ಕೆ ವರ್ಷಕ್ಕೆ ಏಳು ಸಾವಿರ ರುಪಾಯಿ ಬಡ್ಡಿ ಅಂದುಕೊಳ್ಳಿ. ಸಾಲ ಪಡೆಯುವವರ ವಯಸ್ಸಿನ ಆಧಾರದಲ್ಲಿ ಮರುಪಾವತಿ ಅವಧಿ ನಿಶ್ಚಯ ಆಗುತ್ತದೆ. ಸಾಲ ಪಡೆಯುವವರಿಗೆ 70 ವರ್ಷ ತುಂಬುವ ತನಕ ಮರುಪಾವತಿಸುವ ಸಾಮರ್ಥ್ಯ ಇರುತ್ತದೆ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆ ಲೆಕ್ಕದಲ್ಲಿ ಕಡಿಮೆ ವಯಸ್ಸಿನ ಅರ್ಜಿದಾರರಿಗೆ ಗರಿಷ್ಠ 30 ವರ್ಷ ಅವಧಿಯ ಸಾಲ ಸಿಗುತ್ತದೆ.
ಕ್ರೆಡಿಟ್ ರಿಪೋರ್ಟ್ ಕೂಡ ಮುಖ್ಯವಾಗುತ್ತದೆ
ಸಾಲ ಪಡೆಯುವಾಗ ಈಗಾಗಲೇ ತೆಗೆದುಕೊಂಡ ಸಾಲದ ಇಎಂಐ, ಕ್ರೆಡಿಟ್ ಕಾರ್ಡ್ ಲೋನ್, ವಾಹನ ಸಾಲ, ಪರ್ಸನಲ್ ಲೋನ್ ಹೀಗೆ ಏನೆಲ್ಲ ಸಾಲಗಳಿಗೆ ಇಎಂಐ ಅಥವಾ ಕಂತು ಕಟ್ಟಲಾಗುತ್ತಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ತಿಂಗಳ ಒಟ್ಟು ಆದಾಯದಲ್ಲಿ ಆ ಎಲ್ಲ ಇಎಂಐ ಕಳೆದು, ಉಳಿಯುವ ಹಣದಲ್ಲಿ ಶೇಕಡಾ ಐವತ್ತರಷ್ಟು ಮೊತ್ತ ಕುಟುಂಬ ನಿರ್ವಹಣೆಗೆ ಬೇಕಾಗುತ್ತದೆ ಎಂದು ಮೌಲ್ಯಮಾಪನ ಮಾಡಲಾಗುತ್ತದೆ. ಆ ಐವತ್ತರಷ್ಟು ಹಣವನ್ನು ಕಡಿತ ಮಾಡಿದ ಮೇಲೆ ಉಳಿಯುವ ಬಾಕಿ ಮೊತ್ತವನ್ನು ನಿಮ್ಮ ಸಾಲ ಮರುಪಾವತಿಸುವ ಸಾಮರ್ಥ್ಯ ಎಂದು ಬ್ಯಾಂಕ್ ಗಳು- ಹಣಕಾಸು ಸಂಸ್ಥೆಗಳು ನಿರ್ಧರಿಸುತ್ತವೆ. ನಿಮಗೆ ಚೆನ್ನಾಗಿ ನೆನಪಿರಲಿ, ಕ್ರೆಡಿಟ್ ಸ್ಕೋರ್ ಒಂದೇ ಅಲ್ಲ, ಕ್ರೆಡಿಟ್ ರಿಪೋರ್ಟ್ ಕೂಡ ಮುಖ್ಯವಾಗುತ್ತದೆ. ಅತಿಯಾಗಿ ಕ್ರೆಡಿಟ್ ಕಾರ್ಡ್ ಬಳಸುವವರು, ಪದೇ ಪದೇ ಸಾಲಕ್ಕೆ ಪ್ರಯತ್ನಿಸುವವರಿಗೆ ಅದು ನಕಾರಾತ್ಮಕ ಆಗುತ್ತದೆ. ಒಂದು ವೇಳೆ ಸಾಲ ದೊರೆತರೂ ಬಡ್ಡಿ ಹೆಚ್ಚಾಗುತ್ತದೆ.
ಮಾರ್ಜಿನ್ ಹಣ 10ರಿಂದ 20 ಪರ್ಸೆಂಟ್
ನಿಮಗೆ ಎಷ್ಟು ಸಾಲ ಸಿಗಬಹುದು ಎಂಬುದು ಖಾತ್ರಿಯಾದ ಮೇಲೆ, ಎಷ್ಟು ಉಳಿತಾಯ ಇದೆ ಎಂಬುದನ್ನು ನೋಡಿಕೊಳ್ಳಿ. ಏಕೆಂದರೆ ಹೌಸಿಂಗ್ ಲೋನ್ ಅಂದರೆ ಮಾರ್ಜಿನ್ ಹಣ 10ರಿಂದ 20 ಪರ್ಸೆಂಟ್ ಹಾಗೂ ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡುತ್ತಿದ್ದಲ್ಲಿ ನೋಂದಣಿ ಶುಲ್ಕ ಕೂಡ ಇಟ್ಟುಕೊಳ್ಳಬೇಕಾಗುತ್ತದೆ. ಈಗಾಗಲೇ ಬಾಡಿಗೆ ಬರುವಂಥ ಆಸ್ತಿಗಳಿದ್ದಲ್ಲಿ ಹುಡುಕಿ. ಮಹಾನಗರ ಪಾಲಿಕೆ, ಪುರಸಭೆ ಹೀಗೆ ಆಯಾ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವ ಎ ಖಾತಾ ಸ್ವತ್ತಾಗಿದ್ದಲ್ಲಿ ಹಾಗೂ ಯಾವುದೇ ವ್ಯಾಜ್ಯಗಳಿಲ್ಲದಿದ್ದಲ್ಲಿ ಸಾಲ ಸಿಗುವುದು ಸಲೀಸಾಗುತ್ತದೆ. ಕಟ್ಟಿರುವ ಮನೆಯನ್ನೇ ಖರೀದಿಸುತ್ತಿದ್ದಲ್ಲಿ ಆ ಮನೆಯ ನಿರ್ಮಾಣವಾಗಿ ಎಷ್ಟು ವರ್ಷ ಆಯಿತು, ಗಟ್ಟಿಮುಟ್ಟಾಗಿದೆಯಾ ಎಂಬುದನ್ನು ಎಂಜಿನಿಯರ್ ಗೆ ತೋರಿಸಿ, ಪರಿಶೀಲನೆ ಮಾಡಿಸಿ. ರೀಸೇಲ್ ಬಗ್ಗೆ ಕೂಡ ಆಲೋಚನೆ ಮಾಡಿರಬೇಕು. ಶಾಲೆ- ಕಾಲೇಜುಗಳಿಗೆ, ಆಸ್ಪತ್ರೆಗೆ ಹತ್ತಿರ ಇರುವಂಥ ಮನೆಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿರುತ್ತದೆ. ಬಸ್, ಆಟೋ, ಮೆಟ್ರೋ, ಓಲಾ- ಉಬರ್ ಇತ್ಯಾದಿಗಳು ಸಲೀಸಾಗಿ ದೊರೆಯುವಂಥ ಸ್ಥಳಗಳಲ್ಲೇ ಸಾಮಾನ್ಯವಾಗಿ ಬಾಡಿಗೆ ಮನೆ ಹುಡುಕಲಾಗುತ್ತದೆ.
ಆದಾಯ ಎಷ್ಟು ಹಾಗೂ ಬಡ್ಡಿ ಮೊತ್ತ ಎಷ್ಟಾಗುತ್ತದೆ
ಮನೆಯನ್ನು ಖರೀದಿ ಮಾಡುವಾಗ ನಿಮ್ಮ ಉದ್ದೇಶ ಆದಾಯ ಬರಲಿ ಎಂಬುದೇ ಆಗಿರುತ್ತದೆ. ಆದ್ದರಿಂದ ನೀವು ಪಡೆಯುವ ಸಾಲಕ್ಕೆ ಎಷ್ಟು ಬಡ್ಡಿ ಕಟ್ಟುತ್ತೀರಿ ಮತ್ತು ಆ ಆಸ್ತಿಯಿಂದ ನಿಮಗೆ ಆಗುವ ಆದಾಯ ಎಷ್ಟು ಎಂಬುದನ್ನು ಸರಿಯಾಗಿ ಲೆಕ್ಕ ಹಾಕಿಕೊಳ್ಳಿ. ಉದಾಹರಣೆಗೆ: 20 ಲಕ್ಷ ಸಾಲ ಪಡೆದು ನೀವು ಖರೀದಿಸಿದ ಮನೆಗೆ 5 ಸಾವಿರ ಬಾಡಿಗೆ ಬರುತ್ತದೆ ಎಂದಿಟ್ಟುಕೊಳ್ಳಿ. 7 ಪರ್ಸೆಂಟ್ ಬಡ್ಡಿ ಅಂದರೆ, ಬ್ಯಾಂಕ್ ಗೆ ನೀವೇ ವರ್ಷಕ್ಕೆ 1,40,000 ರುಪಾಯಿ ಬಡ್ಡಿ ಕಟ್ಟುತ್ತಿರುತ್ತೀರಿ. ನೀವು ಇದ್ದುಕೊಂಡು, ಹೆಚ್ಚುವರಿಯಾಗಿ ಆದಾಯ ಬಂದರೆ ಆಗ ಬೇರೆ ಲೆಕ್ಕ. ಹಾಗಿಲ್ಲದೆ ಅಷ್ಟು ಮೊತ್ತಕ್ಕೆ ಬ್ಯಾಂಕ್ ಗೆ ಕಟ್ಟುವ ಬಡ್ಡಿ ಹಣವೂ ದಕ್ಕುವುದಿಲ್ಲ ಅಂದರೆ ನಿಮ್ಮ ಉದ್ದೇಶವೇ ವಿಫಲ ಆದಂತೆ.
ಭೋಗ್ಯದ ಹಣವನ್ನೇ ಬಂಡವಾಳ ಮಾಡಿಕೊಳ್ಳಬಹುದು
ಆಸ್ತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ವಸತಿ ಅಥವಾ ವಾಣಿಜ್ಯ ಉದ್ದೇಶದ್ದನ್ನೇ ಆರಿಸಿಕೊಳ್ಳಿ. ಕೆಲವು ಕಡೆ ಆರಂಭದಲ್ಲಿ ಸೈಟು ಖರೀದಿ ಮಾಡುವಾಗ ಭೂಮಿ ಬೆಲೆ ಹೆಚ್ಚಿರುತ್ತದೆ. ಆದರೆ ಬಾಡಿಗೆ ಚೆನ್ನಾಗಿ ಬರುತ್ತದೆ. ಮತ್ತೂ ಕೆಲವು ಕಡೆ ಮನೆ ಅಥವಾ ಮಳಿಗೆ ಕಟ್ಟುವ ವೇಳೆಯಲ್ಲೇ ಬಾಡಿಗೆದಾರರು ಅಡ್ವಾನ್ಸ್ ಕೊಡಲು ಸಿದ್ಧವಾಗುತ್ತಾರೆ. ಹಾಗೊಂದು ವೇಳೆ ಬ್ಯಾಂಕ್ ಗೆ ಕಟ್ಟುವ ಬಡ್ಡಿ ಹಣ ಉಳಿಯಲಿ ಅಂದುಕೊಂಡರೆ ಮನೆ ಅಥವಾ ಮಳಿಗೆಯನ್ನು ಭೋಗ್ಯಕ್ಕೆ ಕೂಡ ಹಾಕಬಹುದು. ಆ ಮೂಲಕ ಎರಡು ಅಥವಾ ಮೂರು ವರ್ಷದ ತನಕ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇರುವುದಿಲ್ಲ. ಆದರೆ ನೆನಪಿಡಿ, ಅದರಿಂದ ಯಾವ ಬಾಡಿಗೆ ಸಹ ಆ ಅವಧಿಯಲ್ಲಿ ಬರುವುದಿಲ್ಲ.
ರಿಟರ್ನ್ಸ್ ಎಷ್ಟು ಎಂಬ ಬಗ್ಗೆ ಗಮನ ಇರಲಿ
ಬಾಡಿಗೆ ಆದಾಯ ಬರಲಿ ಎಂದು ಆಲೋಚನೆ ಮಾಡುವುದೇನೋ ಸರಿ. ಈ ರೀತಿಯ ಬಾಡಿಗೆ ಆದಾಯ ಬಂದಲ್ಲಿ ವಾರ್ಷಿಕ ತೆರಿಗೆ ಬರುತ್ತದೆ. ಬಾಡಿಗೆ ಮೇಲಿನ ಆದಾಯಕ್ಕೆ ಆದಾಯ ತೆರಿಗೆ ಬರುತ್ತದೆ. ಇನ್ನು ಸಾಲದ ಮೇಲೆ ಬಡ್ಡಿ ಕಟ್ಟಬೇಕಾಗುತ್ತದೆ. ಜತೆಗೆ ಈಗಾಗಲೇ ನಿರ್ಮಾಣವಾದ ಮನೆಗೆ ಆಗುವ ಪೇಂಟಿಂಗ್, ದುರಸ್ತಿ ಇತ್ಯಾದಿಗಳಿದ್ದಲ್ಲಿ ಆಗುವ ಖರ್ಚು, ನೋಂದಣಿ ಶುಲ್ಕ (ರಿಜಿಸ್ಟ್ರೇಷನ್ ಫೀ) ಎಲ್ಲವನ್ನೂ ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ಇವೆಲ್ಲವೂ ಆದ ಮೇಲೆ ನಿಮ್ಮ ಹೂಡಿಕೆಗೆ ಪ್ರತಿ ಲಕ್ಷ ರುಪಾಯಿಗೆ ಎಷ್ಟು ರಿಟರ್ನ್ಸ್ ದೊರೆಯುತ್ತದೆ ಎಂಬುದನ್ನು ಪರ್ಸಂಟೇಜ್ ಗೆ ಪರಿವರ್ತಿಸಿ, ನೋಡಿ. ಆಗ ಕಟ್ಟುವ ಬಡ್ಡಿಗಿಂತ ಹೆಚ್ಚು ಆದಾಯ ಅಥವಾ ನಿಮ್ಮ ಕೈಯಲ್ಲಿದ್ದ ಹಣಕ್ಕೆ ಎಫ್.ಡಿ.ಗಿಂತ ಒಳ್ಳೆ ದರ ಸಿಕ್ಕರೆ ಆಗ ಹೂಡಿಕೆ ಮಾಡಬಹುದು.


Click it and Unblock the Notifications