ಹಲವಾರು ಆಹಾರ ಸಾಮಾಗ್ರಿಗಳ ರಿಟೇಲ್ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಹಲವಾರು ಪ್ರಮುಖ ಆಹಾರ ಪದಾರ್ಥಗಳ ರಿಟೇಲ್ ಬೆಲೆಯು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಗತ್ಯ ತರಕಾರಿಗಳಾದ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯಿಂದ ಹಿಡಿದು, ಅಕ್ಕಿ ಮತ್ತು ಗೋಧಿ, ತೊಗರಿಬೇಳೆ, ಚಹಾ ಪುಡಿ, ಹೀಗೆ ಅಗತ್ಯವಾಗಿ ಬಳಕೆ ಮಾಡಲಾಗುವ ಬಹುತೇಕ ಎಲ್ಲ ಆಹಾರ ಸಾಮಾಗ್ರಿಗಳ ದರವು ಹೆಚ್ಚಳವಾಗಿದೆ.
ಅಗತ್ಯ ವಸ್ತುಗಳು ದರವು ಏರಿಕೆಯಾದುದ್ದರಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುತ್ತಿರುವುದನ್ನು ನಾವು ಅಲ್ಲಗಳೆಯುವಂತಿಲ್ಲ. ದಿ ಹಿಂದೂ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಬೆಲೆ ಮಾನಿಟರಿಂಗ್ ವಿಭಾಗ ಡೇಟಾವನ್ನು ಪರಿಶೀಲನೆ ಮಾಡಿದೆ. ದಿ ಹಿಂದೂ ಮಾಡಿದ ಪರಿಶೀಲನೆಯಲ್ಲಿ ಈ ವೇಳೆ 10ರಲ್ಲಿ 9 ಆಹಾರ ವಸ್ತುಗಳ ದರವು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಅಕ್ಕಿ, ಗೋಧಿ, ತೊಗರಿಬೇಳೆ, ಸಕ್ಕರೆ, ಹಾಲು, ಚಹಾ ಪುಡಿ (ಪ್ಯಾಕ್ ಮಾಡದ್ದು), ಉಪ್ಪು (ಪ್ಯಾಕ್ ಮಾಡಿದ್ದು), ಆಲೂಗಡ್ಡೆ, ಈರುಳ್ಳಿ, ಟೊಮೆಟೊದ ದರವನ್ನು ಪರಿಶೀಲನೆ ಮಾಡಿದಾಗ ಒಂದು ತಿಂಗಳ ಹಿಂದಿನ ದರಕ್ಕೂ ಮಂಗಳವಾರದ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ತಿಂಗಳ ಅವಧಿಯಲ್ಲಿಯೇ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬರೀ ಉಪ್ಪಿನ ದರ ಮಾತ್ರ ಒಂದು ತಿಂಗಳ ಅವಧಿಯಲ್ಲಿ ಬದಲಾವಣೆಯಾಗದೆ ಉಳಿದಿದೆ.
ಯಾವೆಲ್ಲ ಆಹಾರ ಪದಾರ್ಥಗಳ ದರ ಏರಿಕೆ
ತಿಂಗಳಿನಿಂದ ತಿಂಗಳಿಗೆ ನಾವು ಲೆಕ್ಕಾಚಾರವನ್ನು ನೋಡಿದಾಗ ಹಾಲಿನ ದರವು ಶೇಕಡ 0.5ರಷ್ಟು ಹೆಚ್ಚಳವಾಗಿದೆ. ಎಲ್ಲ ಮೂರು ಅಗತ್ಯ ತರಕಾರಿಗಳ ಬೆಲೆಗಳು ಏರಿಕೆಯಾಗಿದೆ. ಆಲೂಗಡ್ಡೆ ದರ ಶೇಕಡ 8.8ರಷ್ಟು, ಈರುಳ್ಳಿ ದರವು ಶೇಕಡ 11.1ರಷ್ಟು, ಟೊಮೆಟೊ ದರವು ಮೇ ಕೊನೆಯ ವಾರದಲ್ಲಿದ್ದ ದರಕ್ಕಿಂತ ಎರಡು ಪಟ್ಟು ಅಧಿಕವಾಗಿದೆ. ಜೂನ್ 27ರಷ್ಟು ರಾಷ್ಟ್ರೀಯ ಸರಾಸರಿ ಟೊಮೆಟೊ ದರವು ಪ್ರತಿ ಕೆಜಿಗೆ 46.1 ರೂಪಾಯಿ ಆಗಿದೆ. ಆದರೆ ತಿಂಗಳ ಹಿಂದೆ 23.6 ರೂಪಾಯಿ ಆಗಿದ್ದು, ಈಗ ಶೇಕಡ 95ರಷ್ಟು ಹೆಚ್ಚಳವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕೋಳಿಕೋಡ್‌ನ ಗೃಹಿಣಿ ಪ್ರೇಮಾ ಕೆಪಿ, "ಸರಳವಾದ ರಸಂ ಕೂಡಾ ಈಗ ಅತೀ ದುಬಾರಿಯಾದ ಆಹಾರ ಪದಾರ್ಥವಾಗಿದೆ," ಎಂದು ತಿಳಿಸಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಕನ್ನೆಮಾರಾ ಮಾರುಕಟ್ಟೆಯಲ್ಲಿ ಬುಧವಾರ ತರಕಾರಿ ಕೆಜಿಗೆ 100 ರೂಪಾಯಿ ಆಗಿದೆ. ವಾರದ ಹಿಂದೆಯಷ್ಟೆ ಕೇರಳ ರಾಜ್ಯದಲ್ಲಿ ಟೊಮೆಟೊ ದರವು ಕೆಜಿಗೆ 45ರಿಂದ 50 ರೂಪಾಯಿ ಆಗಿತ್ತು. ಕರ್ನಾಟಕ, ಉತ್ತರ ಪ್ರದೇಶದಲ್ಲಿಯೂ ಟೊಮೆಟೊ ದರವು 100ರ ಗಡಿ ದಾಟಿದೆ.
ದರ ಏರಿಕೆಗೆ ಪ್ರಭಾವ ಬೀರಿದ ಅಂಶಗಳು
ಟೊಮೆಟೊ ಬೆಲೆ ಏರಿಕೆಯು ಒಂದು ಋತುಮಾನದ ಅಂಶಗಳ ಪರಿಣಾಮವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ. "ದೇಶದಲ್ಲಿ ಟೊಮೆಟೊವನ್ನು ಬೇರೆ ಬೇರೆ ತಿಂಗಳುಗಳಲ್ಲಿ ಬೆಳೆಯಲಾಗುತ್ತದೆ, ಕೊಯ್ಲು ಮಾಡಲಾಗುತ್ತದೆ. ಕೆಲವು ಅಂತರಗಳು, ಕೆಲವು ಹಂತಗಳು ಇದೆ. ಈಗ ಹವಾಮಾನ ವ್ಯತ್ಯಯವಿದೆ, ಬೆಳೆಯು ಹಾಳಾಗುತ್ತದೆ. ಮಳೆ ಬಂದಾಗ ಸಾರಿಗೆ ಸಮಸ್ಯೆ ಉಂಟಾಗುತ್ತದೆ," ಎಂದು ಹೇಳಿದ್ದಾರೆ.
ಈ ವರ್ಷ ಅಧಿಕವಾದ ಬಿಸಿ ತಾಪಮಾನ, ಇತ್ತೀಚೆಗೆ ಅಸಾಧಾರಣವಾಗಿ ತೀಕ್ಷ್ಣವಾದ ಮಳೆ ಮೊದಲಾದವುಗಳು ವಿಶೇಷವಾಗಿ ಉತ್ತರ ರಾಜ್ಯಗಳಲ್ಲಿ, ಈ ವರ್ಷ ತರಕಾರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೇಶದ ವಿವಿಧ ಭಾಗಗಳಲ್ಲಿನ ವ್ಯಾಪಾರಿಗಳು ಹೇಳಿದ್ದಾರೆ. "ನಾವು ಅಧಿಕ ದರಕ್ಕೆ ತರಕಾರಿಯನ್ನು ಖರೀದಿ ಮಾಡುತ್ತೇವೆ. ನಾವು ಜೀವನ ಸಾಗಿಸಬೇಕಾದರೆ 20-30 ರೂಪಾಯಿ ಲಾಭ ಬೇಕು. ಆದರೆ ಭಾರೀ ಮಳೆಯಿಂದಾಗಿ ರೈತರ ಬೆಳೆ ನಾಶವಾಗಿದೆ. ಈಗ ತರಕಾರಿಗಳು ಲಭ್ಯವಾಗುತ್ತಿಲ್ಲ," ಎಂದು ದೆಹಲಿಯ ತರಕಾರಿ ವ್ಯಾಪಾರಿ ಆಶೀಶ್ ಗುಪ್ತಾ ಹೇಳಿದ್ದಾರೆ.
"ಈಗ ನಾವು ಸಗಟು ವ್ಯಾಪಾರಿಗಳಿಂದ ಈ ತರಕಾರಿಗಳನ್ನು ಅಧಿಕ ದರಕ್ಕೆ ಖರೀದಿ ಮಾಡುತ್ತಿದ್ದೇದೆ. ಟೊಮೆಟೊ, ಹೂಕೋಸು 40-50 ರೂಪಾಯಿಗೆ ಲಭ್ಯವಾಗಬೇಕಿತ್ತು. ಆದರೆ ಈಗ ಮಂಡಿಯಲ್ಲಿ 90-100 ರೂಪಾಯಿ ಇದೆ," ಎಂದು ಆಶೀಶ್ ಗುಪ್ತಾ ತಿಳಿಸಿದ್ದಾರೆ. ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಈ ಸೀಸನ್‌ನಲ್ಲಿ ಟೊಮೆಟೊ ದರವು ಕೊಂಚ ಕಡಿಮೆಯೇ ಇದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


Click it and Unblock the Notifications