ಎಸ್‌ಜಿಎಕ್ಸ್ ನಿಫ್ಟಿ ಫ್ಯೂಚರ್ಸ್ 250 ಪಾಯಿಂಟ್‌ಗಳಿಗಿಂತ ಕಡಿಮೆಯಾಗಿದೆ. ಶುಕ್ರವಾರದ ಆರಂಭಿಕ ವ್ಯವಹಾರಗಳಲ್ಲಿ ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್ಸ್ 268 ಪಾಯಿಂಟ್‌ಗಳು ಅಥವಾ ಶೇಕಡ 1.6 ರಷ್ಟು ಕುಸಿದು 16,423.00 ಕ್ಕೆ ತಲುಪಿದೆ.
ಜಾಗತಿಕ ಇಕ್ವಿಟಿ ಮಾರುಕಟ್ಟೆಗಳು ಗುರುವಾರ ಕುಸಿದಿದ್ದರಿಂದ ಯುಎಸ್ ಮಾರುಕಟ್ಟೆಯು 2020ರ ಬಳಿಕ ಅತಿದೊಡ್ಡ ಕುಸಿತವನ್ನು ಕಂಡಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್‌ಗಳು ತಮ್ಮ ನೀತಿಯನ್ನು ಬದಲಾವಣೆ ಮಾಡಿದೆ. ಈ ನಡುವೆ ಜಾಗತಿಕ ಮಾರುಕಟ್ಟೆಯು ಕುಸಿತ ಕಂಡಿದೆ. ಡೌ ಜೋನ್ಸ್ 1000 ಅಂಕಗಳ ನಷ್ಟದೊಂದಿಗೆ ಕೊನೆಗೊಂಡಿದ್ದರೆ, ನಾಸ್ಡಾಕ್ ಸುಮಾರು 650 ಅಂಕಗಳನ್ನು ಕಳೆದುಕೊಂಡಿದೆ.
ಗುರುವಾರ, ಸೆನ್ಸೆಕ್ಸ್ 33.20 ಪಾಯಿಂಟ್‌ಗಳ ಏರಿಕೆ ಕಂಡು 55,702.23 ಕ್ಕೆ ತಲುಪಿದೆ ಮತ್ತು ನಿಫ್ಟಿ 5.10 ಪಾಯಿಂಟ್‌ಗಳ ಏರಿಕೆ ಕಂಡು 16,682.70 ಕ್ಕೆ ತಲುಪಿದೆ. ಆದರೆ ಶುಕ್ರವಾರ ಮಾರುಕಟ್ಟೆಯು ಪಾತಾಳಕ್ಕೆ ಕುಸಿತ ಕಂಡಿದೆ. ಬಿಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ನಲ್ಲಿನ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಶುಕ್ರವಾರ ಶೇಕಡ 1.5 ಕ್ಕಿಂತ ಕಡಿಮೆಯಾಗಿ ತೆರೆದುಕೊಂಡಿದೆ. ಆರಂಭಿಕ ವಹಿವಾಟಿನಲ್ಲಿ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 980.45 ಪಾಯಿಂಟ್‌ಗಳ ಕುಸಿತ ಕಂಡು 54,721.78 ಕ್ಕೆ ತಲುಪಿದರೆ, ನಿಫ್ಟಿ 50 300.15 ಪಾಯಿಂಟ್‌ಗಳನ್ನು ಕುಸಿದು 16,382.50 ಕ್ಕೆ ತಲುಪಿದೆ.

ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣವೇನು?
ಇಂದಿನ ಸೆನ್ಸೆಕ್ಸ್ ಕುಸಿತದ ಹಿಂದಿನ ಪ್ರಮುಖ ಕಾರಣವೆಂದರೆ ಹಣದುಬ್ಬರವನ್ನು ನಿಯಂತ್ರಿಸಲು ದೇಶದ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ 50ಬಿಪಿಎಸ್ ಬಡ್ಡಿದರ ಹೆಚ್ಚಳ ಮಾಡಿರುವುದು ಆಗಿದೆ. ಏರುತ್ತಿರುವ ಬಡ್ಡಿದರಗಳು ಜಾಗತಿಕ ಆರ್ಥಿಕ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು ಎಂದು ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಮಾರುಕಟ್ಟೆಯು ಕುಸಿತವನ್ನು ಕಾಣುತ್ತಿದೆ. ಯುಎಸ್ ಫೆಡರಲ್ ರಿಸರ್ವ್ ಹಾಗೂ ಇತರ ಕೆಲವು ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರವನ್ನು ಎದುರಿಸಲು ಬಡ್ಡಿದರವನ್ನು ಯೋಜಿಸಿದ್ದಕ್ಕಿಂತ ಅಧಿಕ ಏರಿಕೆ ಮಾಡಬಹುದು ಎಂದು ಮಾರುಕಟ್ಟೆ ಹೂಡಿಕೆದಾರರು ಆತಂಕ ಹೊಂದಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಯು ಪಾತಾಳಕ್ಕೆ ಇಳಿಯುತ್ತಿದೆ.
ಯಾವುದೆಲ್ಲಾ ಷೇರುಗಳು ಕುಸಿತ?
ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್, ಬ್ಯಾಂಕಿಂಗ್ ವಲಯದಲ್ಲಿ ಆರ್‌ಬಿಎಲ್ ಬ್ಯಾಂಕ್, ಎಯು ಸ್ಮಾಲ್ ಫಿನಾನ್ಸ್ ಬ್ಯಾಂಕ್ ಲಿಮಿಟೆಡ್, ಆಕ್ಸಿಕ್ ಬ್ಯಾಂಕ್ ಲಿಮಿಟೆಡ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಲಿಮಿಟೆಡ್, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್ ಕುಸಿತ ಕಂಡಿದೆ. ಇನ್ನು ಹೆಚ್‌ಸಿಎಲ್ ಟೆಕ್, ವಿಪ್ರೋ, ವೇದಾಂತ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಮಾರುತಿ ಸುಜುಕಿ, ಇನ್ಫೋಸಿಸ್ ಆರಂಭಿಕ ವಹಿವಾಟಿನಲ್ಲಿಯೇ ಹಿನ್ನಡೆ ಕಂಡಿದೆ. ಎಂ ಆಂಡ್ ಎಂ ಹಾಗೂ ಆರ್‌ಐಎಲ್ ಮಾತ್ರ ಕೊಂಚ ಚೇತರಿಕೆ ಕಂಡಿದೆ.


Click it and Unblock the Notifications