ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಐದು ಬಾರಿ ರೆಪೋ ದರವನ್ನು ಏರಿಸಿದೆ. ಸಾಮಾನ್ಯವಾಗಿ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾದರೂ ಅದು ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಹಾಗೂ ಸಾಲದ ಬಡ್ಡಿದರ ಮೇಲೆ ಪ್ರಭಾವ ಬೀರುತ್ತದೆ. ಅದರಂತೆಯೇ ಆರ್‌ಬಿಐ 5 ಬಾರಿ ರೆಪೋ ದರ ಹೆಚ್ಚಿಸಿದಾಗಲೂ ಬ್ಯಾಂಕ್‌ಗಳು ಎಫ್‌ಡಿ ಮತ್ತು ಸಾಲದ ಬಡ್ಡಿದರವನ್ನು ಏರಿಸಿದೆ. ಫೆಬ್ರವರಿಯಲ್ಲಿಯೂ ಬಡ್ಡಿದರ ಏರಿಸುವ ನಿರೀಕ್ಷೆಯಿದೆ. ಈ ನಡುವೆ ಎಸ್‌ಬಿಐ ಗೃಹ ಸಾಲದ ಬಡ್ಡಿದರವನ್ನು ಇಳಿಸಿದೆ.
ಹೌದು, ದೇಶದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ ಹೊಸ ಬಡ್ಡಿದರವನ್ನು ಜಾರಿಗೆ ಮಾಡಿದೆ. ಗೃಹ ಸಾಲದ ಬಡ್ಡಿದರವನ್ನು ಸರಿಸುಮಾರು 30ರಿಂದ 40 ಮೂಲಾಂಕ ಇಳಿಸಿದೆ. ಈ ಆಫರ್ ಮಾರ್ಚ್ 31, 2023ರವರೆಗೆ ಇರಲಿದೆ. ಈ ಆಫರ್‌ನ ಅಡಿಯಲ್ಲಿ ಗೃಹ ಸಾಲವನ್ನು ಪಡೆಯುವವರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ.
ಈ ಹಿಂದೆ ಒಟ್ಟು 5 ಬಾರಿ ಆರ್‌ಬಿಐ ರೆಪೋ ದರವನ್ನು ಏರಿಸಿದೆ. ಡಿಸೆಂಬರ್ 7ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು 35 ಬಿಪಿಎಸ್ ಏರಿಸಿದ್ದು ಪ್ರಸ್ತುತ ದರ ಶೇಕಡ 6.25ಕ್ಕೆ ತಲುಪಿದೆ. ಆರ್‌ಬಿಐನ ಈ ಕ್ರಮವನ್ನು ಹಿಂಬಾಲಿಸಿ ಕಳೆದ ಡಿಸೆಂಬರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಬಡ್ಡಿದರವನ್ನು ಏರಿಸಿದೆ. ಆದರೆ ಈಗ ಕ್ಯಾಂಪೇನ್ ರೇಟ್ಸ್ ಎಂಬ ಹೊಸ ಹಾಲಿಡೇ ಆಫರ್ ಮೂಲಕ ಬಡ್ಡಿದರವನ್ನು ಇಳಿಸಿದೆ ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಹೊಸ ಆಫರ್ ಬಗ್ಗೆ ಮಾಹಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಈ ಹೊಸ ಆಫರ್‌ನ ಪ್ರಯೋಜನವನ್ನು ಪಡೆಯುವವರು ಎಸ್‌ಬಿಐನ ಗೃಹ ಸಾಲವನ್ನು ಅತೀ ಕಡಿಮೆ ಎಂದರೆ ಶೇಕಡ 8.60ರಷ್ಟು ಬಡ್ಡಿದರಲ್ಲಿ ಪಡೆಯಬಹುದು. ಆದರೆ ಎಸ್‌ಬಿಐನ ಗೃಹ ಸಾಲವು ಕ್ರೆಡಿಟ್ ಸ್ಕೋರ್ ಅಥವಾ ರೇಟಿಂಗ್ ಆಧಾರದಲ್ಲಿ ನಿರ್ಧಾರಿತವಾಗುತ್ತದೆ ಎಂಬುವುದು ನೆನಪಿನಲ್ಲಿರಲಿ. ಎಸ್‌ಬಿಐ ಸ್ಟಾಂಡರ್ಡ್ ಹಾಗೂ ಟಾಪ್-ಅಪ್ ಸಾಲಕ್ಕೆ ಪ್ರೋಸೆಸಿಂಗ್ ಶುಲ್ಕವನ್ನು ಕೂಡಾ ಮನ್ನಾ ಮಾಡಿದೆ. ಬ್ಯಾಂಕ್ ಈ ಹಿಂದೆ ಹಾಲಿಡೇ ಆಫರ್ ಅನ್ನು ಘೋಷಣೆ ಮಾಡಿತ್ತು. ಈ ಆಫರ್ ಅಕ್ಟೋಬರ್ 4, 2022ರಿಂದ ಆರಂಭವಾಗಿದ್ದು, ಜನವರಿ 31, 2023ರವರೆಗೆ ಇರಲಿದೆ. ಈಗ ಹೊಸ ಕ್ಯಾಂಪೇನ್ ರೇಟ್ಸ್ ಆಫರ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ಪಡೆಯಬಹುದಾಗಿದೆ.
ಸಾಮಾನ್ಯ ಗೃಹ ಸಾಲದ ಮೇಲೆ ಬಡ್ಡಿದರ ರಿಯಾಯಿತಿ
ಅತೀ ಹೆಚ್ಚೆಂದರೆ ಗೃಹ ಸಾಲದ ಮೇಲೆ ಎಸ್‌ಬಿಐ 30ರಿಂದ 40 ಮೂಲಾಂಕ ಬಡ್ಡಿದರ ಕಡಿಮೆ ಮಾಡುವ ಆಫರ್ ನೀಡುತ್ತದೆ. ಆದರೆ ಇದಕ್ಕೂ ಕ್ರೆಡಿಟ್ ಸ್ಕೋರ್ ಮುಖ್ಯವಾಗಿದೆ. 700ರಿಂದ 800ರ ನಡುವೆ ಕ್ರೆಡಿಟ್ ಸ್ಕೋರ್ ಇದ್ದರೆ ಮಾತ್ರ ಗೃಹ ಸಾಲವನ್ನು 30ರಿಂದ 40 ಮೂಲಾಂಕ ಕಡಿಮೆ ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಸಿಬಿಲ್ ಸ್ಕೋರ್ 800ರಷ್ಟಿದ್ದರೆ ಎಸ್‌ಬಿಐ ಗೃಹ ಸಾಲದ ಬಡ್ಡಿದರ ಈ ಕ್ಯಾಂಪೇನ್ ರೇಟ್ಸ್ ಆಫರ್ ಅಡಿಯಲ್ಲಿ ಶೇಕಡ 8.60 ಆಗಿದೆ. ಸಾಮಾನ್ಯ ಬಡ್ಡಿದರ ಶೇಕಡ 8.90 ಆಗಿದ್ದು, ಅದಕ್ಕಿಂತ 30 ಬಿಪಿಎಸ್ ಕಡಿಮೆ ಬಡ್ಡಿದರ ಸಾಲ ಲಭ್ಯವಾಗುತ್ತದೆ. 700ರಿಂದ 749 ಮತ್ತು 750ರಿಂದ 799ರಷ್ಟು ಕ್ರೆಡಿಟ್ ಸ್ಕೋರ್ ಇದ್ದರೆ ಬ್ಯಾಂಕ್ 40 ಮೂಲಾಂಕದವರೆಗೆ ಬಡ್ಡಿದರ ಕಡಿತ ಮಾಡುತ್ತದೆ. 700ರಿಂದ 749 ಕ್ರೆಡಿಟ್ ಸ್ಕೋರ್ ಇದ್ದರೆ ಬಡ್ಡಿದರ ಶೇಕಡ 9ರಿಂದ ಶೇಕಡ 8.60ಕ್ಕೆ ಇಳಿಕೆಯಾಗುತ್ತದೆ. 750ರಿಂದ 799ರಷ್ಟು ಕ್ರೆಡಿಟ್ ಸ್ಕೋರ್ ಇದ್ದರೆ ಬಡ್ಡಿದರವು ಶೇಕಡ 9.10ರಿಂದ ಶೇಕಡ 8.70ಕ್ಕೆ ಇಳಿಕೆಯಾಗುತ್ತದೆ. -1 ಸಿಬಿಲ್ ಸ್ಕೋರ್‌ಗೆ 30 ಬಿಪಿಎಸ್ ಕಡಿತ ಲಭ್ಯವಾಗಲಿದೆ. ಶೇಕಡ 9.10ರಿಂದ ಶೇಕಡ 8.80ಕ್ಕೆ ಬಡ್ಡಿದರ ಇಳಿಯುತ್ತದೆ. 650ರಿಂದ 699 ಕ್ರೆಡಿಟ್ ಸ್ಕೋರ್ ಇದ್ದರೆ ಬಡ್ಡಿದರವು ಶೇಕಡ 9.20 ಆಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. 550ರಿಂದ 649 ಕ್ರೆಡಿಟ್ ಸ್ಕೋರ್ ಇದ್ದರೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಆಫರ್‌ನಲ್ಲಿ ಮಹಿಳೆಯರಿಗೆ ಅಧಿಕವಾಗಿ ಶೇಕಡ 5 ಮೂಲಾಂಕ ಕಡಿತ ಮಾಡಲಾಗುತ್ತದೆ.
ಟಾಪ್-ಅಪ್ ಸಾಲದ ಮೇಲೆ 30 ಬಿಪಿಎಸ್ ರಿಯಾಯಿತಿ
700 ಮತ್ತು ಅದಕ್ಕೂ ಅಧಿಕ 800ರಷ್ಟು ಕ್ರೆಡಿಟ್ ಸ್ಕೋರ್ ಇದ್ದರೆ, ಎಸ್‌ಬಿಐನಲ್ಲಿ 30 ಮೂಲಾಂಕ ಬಡ್ಡಿದ ಕಡಿತ ಪಡೆಯಬಹುದು. 800 ಅಥವಾ ಅದಕ್ಕಿಂತ ಅಧಿಕ ಕ್ರೆಡಿಟ್ ಸ್ಕೋರ್‌ಗೆ ಎಸ್‌ಬಿಐನಲ್ಲಿ ಟಾಪ್-ಅಪ್ ಸಾಲದ ಬಡ್ಡಿದರ ಶೇಕಡ 9 ಆಗಿದೆ. ಸ್ಟಾಟರ್ಡ್ ರೇಟ್ ಶೇಕಡ 9.30 ಆಗಿದೆ. 750ರಿಂದ 799 ಕ್ರೆಡಿಟ್ ಸ್ಕೋರ್ ಇದ್ದರೆ, ಈ ಆಫರ್ ಅಡಿಯಲ್ಲಿ ಶೇಕಡ 9.10ರಷ್ಟು ಬಡ್ಡಿದರವಿದೆ, ಸಾಮಾನ್ಯ ಬಡ್ಡಿದರ ಶೇಕಡ 9.40 ಆಗಿದೆ. 700-749 ಕ್ರೆಡಿಟ್ ಸ್ಕೋರ್ ಇದ್ದರೆ ಸ್ಟಾಡರ್ಡ್ ರೇಟ್ ಶೇಕಡ 9.50ರಿಂದ ಶೇಕಡ 9.20ಕ್ಕೆ ಬಡ್ಡಿದರ ಇಳಿಯುತ್ತದೆ. 650ರಿಂದ 699, 550ರಿಂದ 649 ಮತ್ತು ಎನ್‌ಟಿಸಿ/ನೋ ಸಿಬಿಲ್/-1 ಸ್ಕೋರ್ ಇದ್ದರೆ ಬಡ್ಡಿದರವು ಕ್ರಮವಾಗಿ ಶೇಕಡ 9.60, ಶೇಕಡ 9.90, ಶೇಕಡ 9.50 ಆಗಿದೆ. ಮಾಕ್ಸ್‌ಗೇನ್ & ರಿಯಾಲಿಟಿ ಲೋನ್ ಅಡಿಯಲ್ಲಿ ಶೇಕಡ 5 ಬಿಪಿಎಸ್ ಅಧಿಕ ರಿಯಾಯಿತಿ ಲಭ್ಯವಾಗುತ್ತದೆ. ಆದರೆ ಕ್ರೆಡಿಟ್ ಸ್ಕೋರ್ ಕನಿಷ್ಠ 750 ಆಗಿರಬೇಕು.


Click it and Unblock the Notifications