ಭಾರತೀಯ ಆಟೋಮೊಬೈಲ್ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಏಪ್ರಿಲ್ 14, 2023ರಂದು ತನ್ನ ಪ್ರಯಾಣಿಕ ವಾಹನಗಳ (PVs) ಬೆಲೆಗಳನ್ನು 1 ಮೇ 2023 ರಿಂದ ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ವೇರಿಯೆಂಟ್ ಹಾಗೂ ಮಾಡಲ್ ಆಧಾರದಲ್ಲಿ ಸುಮಾರು ಶೇಕಡ 0.6ರಷ್ಟು ಬೆಲೆ ಏರಿಕೆಯನ್ನು ಮಾಡಲಾಗುತ್ತದೆ ಎಂದು ಕಂಪನಿಯು ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ.
ನಿಯಂತ್ರಕ ಬದಲಾವಣೆಗಳು ಮತ್ತು ಒಟ್ಟಾರೆ ಇನ್‌ಪುಟ್ ವೆಚ್ಚಗಳ ಏರಿಕೆಯಿಂದಾಗಿ ಟಾಟಾ ಮೋಟಾರ್ಸ್ ಈ ಕ್ರಮವನ್ನು ಕೈಗೊಂಡಿದೆ. ವೆಚ್ಚವು ಅಧಿಕವಾದ ಕಾರಣ ಬೆಲೆಯನ್ನು ಏರಿಕೆ ಮಾಡಲಾಗಿದೆ. ಕಂಪನಿಯ ಪ್ರಕಾರ ಈ ಬೆಲೆ ಏರಿಕೆಯ ಮೂಲಕ ವೆಚ್ಚ ಹೆಚ್ಚಳದ ಕೆಟ್ಟ ಪ್ರಭಾವವನ್ನು ತಪ್ಪಿಸಲಾಗುತ್ತಿದೆ. ಹೊರೆಯನ್ನು ಕೊಂಚ ಗ್ರಾಹಕರ ಮೇಲೆ ಹೇರಬೇಕಾಗಿ ಬಂದಿದೆ ಎಂದು ತಿಳಿಸಿದೆ.

ಟಾಟಾ ಮೋಟಾರ್ಸ್ 2023 ರಲ್ಲಿ ಎರಡನೇ ಬಾರಿಗೆ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಜನವರಿಯಲ್ಲಿ ಶೇಕಡ 1.2ರಷ್ಟು ಬೆಲೆ ಏರಿಕೆಯನ್ನು ಟಾಟಾ ಮೋಟಾರ್ಸ್ ಮಾಡಿತ್ತು. ಆ ಸಂದರ್ಭದಲ್ಲಿಯೂ ವೆಚ್ಚ ಏರಿಕೆ ಹಾಗೂ ಕೆಲವೊಂದು ಮಾಡೆಲ್‌ಗಳ ಬದಲಾವಣೆಯ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಟಾಟಾ ಮೋಟರ್ಸ್ ಮಾಹಿತಿ ನೀಡಿತ್ತು.
ವೆಚ್ಚ ಏರಿಕೆ ಮಾತ್ರವಲ್ಲ ಕಾರಣ ಬೇರೆಯೂ ಇದೆ..!
ತಯಾರಿಕ ವೆಚ್ಚ ಹೆಚ್ಚಳ, ಕೆಲವೊಂದು ಬದಲಾವಣೆಗಳು ಈ ಟಾಟಾ ಮೋಟಾರ್ಸ್ ಕಾರು ದರ ಏರಿಕೆಗೆ ಕಾರಣವಾಗಿಲ್ಲ. ಅದಕ್ಕೆ ಇನ್ನು ಹಲವಾರು ಕಾರಣಗಳು ಇದೆ. ಈ ತಿಂಗಳ ಆರಂಭದಲ್ಲಿ ಭಾರತ್ ಸ್ಟೇಜ್ VI ಮಾನದಂಡಗಳ ಅನುಷ್ಠಾನವು ಭಾರತದಲ್ಲಿ ವಾಹನಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಸರ್ಕಾರದ ಆದೇಶದ ಪ್ರಕಾರ, ವಾಹನ ತಯಾರಕರು ತಮ್ಮ ವಾಹನಗಳಲ್ಲಿ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ವೆಚ್ಚ ಉಂಟಾಗುತ್ತದೆ.
ಈ ವೆಚ್ಚವನ್ನು ಕೂಡಾ ಸರಿದೂಗಿಸುವ ಪ್ರಯತ್ನವನ್ನು ಸಂಸ್ಥೆಗಳು ಮಾಡುತ್ತಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ನಿಯಂತ್ರಕ ಬದಲಾವಣೆಗಳಿಂದಾಗಿ ಟಾಟಾ ಮೋಟಾರ್ಸ್‌ನಂತಹ ಕಾರು ತಯಾರಕರು ತಮ್ಮ ಪ್ರಯಾಣಿಕ ವಾಹನಗಳ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿಕೊಂಡಿದೆ.
ಮಾರ್ಚ್ 31, 2023ರಲ್ಲಿ ಕೊನೆಯಾದ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಅತೀ ಅಧಿಕ ಪ್ರಯಾಣಿಕ ಕಾರುಗಳು ಮಾರಾಟವಾಗಿದೆ. ಕೇವಲ ಒಂದು ವರ್ಷದಲ್ಲಿ ಕಾರುಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಕೂಡಾ ಪ್ರಯಾಣಿಕ ಕಾರುಗಳ ಮಾರಾಟ ಪ್ರಮಾಣ ಹೆಚ್ಚಳವಾಗಿದೆ. ಸ್ಪೋರ್ಟ್ಸ್ ಯುಟಿಲಿಟಿ ವೇಕಲ್ (ಎಸ್‌ಯುವಿ) ಬೇಡಿಕೆ ಅತೀ ಅಧಿಕವಾಗಿದೆ. ಮಾರಾಟದಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವೇ ಎಸ್‌ಯುವಿ ಬೇಡಿಕೆ ಏರಿಕೆಯಾಗಿದೆ.
ಟಾಟಾ ಮೋಟರ್ಸ್‌ನ ಪಂಚ್, ನೆಕ್ಸಾನ್ ಎಸ್‌ಯುವಿ 2022ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳಾಗಿದೆ. ಹಾಗೆಯೇ ಈ ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕಾರಣವೇ ಇದರ ಮಾರಾಟವಾಗಿದೆ. ಇನ್ನು ಫೆಡರೇಷನ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಪ್ರಕಾರ ಈ ವರ್ಷದಲ್ಲಿ ಕಾರು ಮಾರಾಟ ಪ್ರಮಾಣ ಇಳಿಕೆಯಾಗಲಿದೆ.
ಹಣದುಬ್ಬರ, ಇತ್ತೀಚೆಗೆ ಕಾರುಗಳ ದರ ಏರಿಕೆ, ನಿಯಮದಲ್ಲಿ ಬದಲಾವಣೆಯಿಂದಾಗಿ ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಕಾರುಗಳ ಮಾರಾಟ ಪ್ರಮಾಣ ಈ ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಲಿದೆ ಎಂಬುವುದು ಫೆಡರೇಷನ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ನಿರೀಕ್ಷೆಯಾಗಿದೆ. ಆದರೆ ಈ ಹಿಂದಿನ ವರ್ಷದಲ್ಲಿ ಕಾರಿನ ಬೆಲೆಯು ಒಂದು ವರ್ಷದಲ್ಲೇ ಭಾರೀ ಏರಿಕೆಯಾಗಿದ್ದರೂ ಕೂಡಾ ಖರೀದಿ ಪ್ರಮಾಣ ಅಧಿಕವಾಗಿರುವುದು ನಾವು ಕಾಣಬಹುದಾಗಿದೆ.


Click it and Unblock the Notifications