ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಡುವುದು ಬುದ್ಧಿವಂತಿಕೆ ಅಲ್ಲ ಎನ್ನುವುದು ಜನಪ್ರಿಯ ವಾದ. ಆದರೆ ಅದು ಸುಳ್ಳು. ಒಳ್ಳೆ ಬಡ್ಡಿಯ ಜತೆಗೆ ಉಳಿತಾಯ ಖಾತೆಯ ಮೂಲಕ ಗಳಿಸುವ ಹತ್ತು ಸಾವಿರ ರುಪಾಯಿ ತನಕದ ಬಡ್ಡಿಗೆ ತೆರಿಗೆ ವಿನಾಯಿತಿ ಕೂಡ ಇದೆ. ಈ ಲೇಖನದಲ್ಲಿ ಕೆಲವು ಬ್ಯಾಂಕ್ ಗಳ ವಿವರ ನೀಡಿದ್ದು, ಉಳಿತಾಯ ಖಾತೆ ಮೇಲೆ ಹೆಚ್ಚಿನ ಬಡ್ಡಿ ಸಿಗುತ್ತದೆ.
ಐಡಿಎಫ್ ಸಿ ಫಸ್ಟ್ ಬ್ಯಾಂಕ್
1 ಲಕ್ಷ ಮೇಲ್ಪಟ್ಟು 1 ಕೋಟಿ ರುಪಾಯಿ ತನಕ IDFC ಫಸ್ಟ್ ಬ್ಯಾಂಕ್ ನಿಂದ 7 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಒಂದು ಲಕ್ಷಕ್ಕಿಂತ ಕಡಿಮೆಯಾದರೆ 6 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ. ಬೇರೆ ವಾಣಿಜ್ಯ ಬ್ಯಾಂಕ್ ಗಳ ಫಿಕ್ಸೆಡ್ ಡೆಪಾಸಿಟ್ ಗೆ ಹೋಲಿಸಿದರೂ ಇದು ತುಂಬ ಒಳ್ಳೆ ದರ. ಈ ಉಳಿತಾಯ ಖಾತೆ ಜತೆಗೆ ವೀಸಾ ಡೆಬಿಟ್ ಕಾರ್ಡ್, ಏರ್ ಪೋರ್ಟ್ ಗಳ ಲಾಂಜ್ ಗಳಲ್ಲಿ ಉಚಿತ ಸಂಪರ್ಕ, ತ್ರೈಮಾಸಿಕವಾಗಿ ಹಾಗೂ ಕನಿಷ್ಠ ಮತ್ತು ಪಾರದರ್ಶಕ ಶುಲ್ಕ ವಿಧಿಸಲಾಗುತ್ತದೆ. ಜತೆಗೆ ಯಾವುದೇ ಬ್ಯಾಂಕ್ ನೆಟ್ ವರ್ಕ್ ನ ಉಚಿತ ಎಟಿಎಂ ವ್ಯವಹಾರ ಮಾಡಬಹುದು.
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ ನಿಂದ ಉಳಿತಾಯ ಖಾತೆಗೆ ವಾರ್ಷಿಕ ಶೇಕಡಾ 6 ಬಡ್ಡಿ ನೀಡಲಾಗುತ್ತದೆ. ಆದರೆ ಖಾತೆಯಲ್ಲಿ 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಮೊತ್ತ ಇರಬೇಕು. ಅಂದ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫಿಕ್ಸೆಡ್ ಡೆಪಾಸಿಟ್ ಮೇಲೆ ವಾರ್ಷಿಕ ಶೇ 6.5 ಬಡ್ಡಿದರ ಇದೆ. 10,000 ರುಪಾಯಿ ತನಕದ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 1 ಕೋಟಿಗೂ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಇದ್ದರೆ 6.25 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ. 1 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ 5 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ. ಅದೇ ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗೆ ನೀಡುವುದು ವಾರ್ಷಿಕ ಶೇ 3.5ರಷ್ಟು ಬಡ್ಡಿ ಮಾತ್ರ.

ಇಂಡಸ್ ಇಂಡ್ ಬ್ಯಾಂಕ್
ನಿತ್ಯದ ಬ್ಯಾಲೆನ್ಸ್ 1 ಲಕ್ಷದ ತನಕ ಇದ್ದಲ್ಲಿ ಶೇ 4 ಬಡ್ಡಿ ದೊರೆಯುತ್ತದೆ. ನಿತ್ಯದ ಬ್ಯಾಲೆನ್ಸ್ 1 ಲಕ್ಷದಿಂದ 10 ಲಕ್ಷದ ಮಧ್ಯೆ ಇದ್ದರೆ 5 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ. 10 ಲಕ್ಷಕ್ಕೂ ಹೆಚ್ಚು ಬ್ಯಾಲೆನ್ಸ್ ಇದ್ದರೆ 6 ಪರ್ಸೆಂಟ್ ಬಡ್ಡಿ ಸಿಗುತ್ತದೆ. ಹಾಗೆ ನೋಡಿದರೆ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಎರಡರದೂ ಬಡ್ಡಿ ದರ 6 ಪರ್ಸೆಂಟ್. ಆದರೆ ಯೆಸ್ ಬ್ಯಾಂಕ್ ನಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಬ್ಯಾಲೆನ್ಸ್ ಇದ್ದರೆ 6 ಪರ್ಸೆಂಟ್ ಬಡ್ಡಿ ಸಿಗುತ್ತದೆ. ಅದೇ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಇರಬೇಕು. ಬ್ಯಾಂಕ್ ನಿಂದ ಇನ್ನಷ್ಟು ಅನುಕೂಲ ದೊರೆಯಲಿದೆ. ಆ ಬಗ್ಗೆ ಬ್ಯಾಂಕ್ ನಿಂದ ಮಾಹಿತಿ ಪಡೆಯಬಹುದು.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಮೇಲ್ಕಂದ್ ಬ್ಯಾಂಕ್ ಗಳು ಪೂರ್ಣ ಪ್ರಮಾಣದ ವಾಣಿಜ್ಯ ಬ್ಯಾಂಕ್ ಗಳು. ಆದರೆ ಈ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೆಸರೇ ಸೂಚಿಸುವಂತೆ ಸಣ್ಣ ಹಣಕಾಸು ಬ್ಯಾಂಕ್. 1ಲಕ್ಷಕ್ಕಿಂತ ಕಡಿಮೆ ಬ್ಯಾಲನ್ಸ್ ಇದ್ದರೆ ವಾರ್ಷಿಕ ಶೇಕಡಾ 5ರಷ್ಟು ಬಡ್ಡಿ ದೊರೆಯುತ್ತದೆ. 1ರಿಂದ 10 ಲಕ್ಷ ರುಪಾಯಿ ತನಕದ ಬ್ಯಾಲೆನ್ಸ್ ಗೆ 6ರಷ್ಟು ಬಡ್ಡಿ, 10 ಲಕ್ಷದಿಂದ 5 ಕೋಟಿ ಬ್ಯಾಲೆನ್ಸ್ ಗೆ 7 ಪರ್ಸೆಂಟ್ ಬಡ್ಡಿ ದೊರೆಯುತ್ತದೆ.


Click it and Unblock the Notifications